ಕುಂಬಳೆ: ಕಣಿಪುರ ಯಕ್ಷಗಾನ ಮಾಸಪತ್ರಿಕೆ 11ನೇ ವರ್ಷಕ್ಕೆ ಕಾಲೂರುವ ಹಿನ್ನೆಲೆಯಲ್ಲಿ ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ತವರು ನೆಲ ಕುಂಬ್ಳೆಯ ಶೇಡಿಕಾವಿನಲ್ಲಿ ಡಿ.18ರಂದು ಭಾನುವಾರ ಸಂಜೆ 6ರಿಂದ ಪ್ರಥಮ ಕಣಿಪುರ ಯಕ್ಷೋತ್ಸವ ಜರಗಲಿದ್ದು ಈ ವೇಳೆ ಮೂವರು ಬಾಲಪ್ರತಿಭೆಗಳಿಗೆ ಯಕ್ಷಪ್ರತಿಭಾ ಪ್ರಶಸ್ತಿ ಮತ್ತು ಏಳು ಮಂದಿ ಉದಯೋನ್ಮುಖ ಬಾಲಪ್ರತಿಭೆಗಳಿಗೆ ಯಕ್ಷಪ್ರತಿಭಾ ಪುರಸ್ಕಾರ ಪ್ರದಾನವಾಗಲಿದೆ.
ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ, ಕಲಾಪೋಷಕ ಟಿ.ಶ್ಯಾಮ ಭಟ್ ಕರ‍್ಯಕ್ರಮ ಉದ್ಘಾಟಿಸುವರು. ಕಣಿಪುರ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಪೈ ಕುಂಬಳೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವೇದವಿದ್ವಾಂಸ, ಧಾರ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ವರ ಭಟ್, ಯಕ್ಷಕ್ಷೇತ್ರ ಪ್ರತಿಷ್ಠಾನ ಮಂಗಳೂರು ಇದರ ಸಂಚಾಲಕ ರಾಘವೇಂದ್ರ ಕುಂಬ್ಳೆ ಭಾಗವಹಿಸುವರು.
ಸಮಾರಂಭದಲ್ಲಿ ಮಂಗಳೂರಿನ ಯಕ್ಷಕ್ಷೇತ್ರ ಪ್ರತಿಷ್ಠಾನ ಪ್ರಾಯೋಜಿಸುವ ಪ್ರಥಮ ಕುಂಬ್ಳೆ ಸುಂದರರಾವ್ ಪ್ರಶಸ್ತಿ ಮತ್ತು ದಿ, ಕುಂಬ್ಳೆ ಚಂದ್ರಶೇಖರ(ಕುAಬ್ಳೆ ಚಂದು) ಸ್ಮರಣಾರ್ಥ ಪ್ರಶಸ್ತಿ ಪ್ರದಾನವಾಗಲಿದೆ. ಯಕ್ಷಗಾನ ಮತ್ತು ಶಿಕ್ಷಣದ ಜತೆ ಬಹುಮುಖೀ ಸಾಧನೆಗೈದ ಉದಯೋನ್ಮುಖ ಕಲಾವಿದರಿಗೆ ಈ ಪ್ರಶಸ್ತಿಯು ಸೀಮಿತವಾಗಿದೆ. ಮೊದಲ ದಿ. ಕುಂಬಳೆ ಸುಂದರರಾವ್ ಸ್ಮರಣಾರ್ಥ ಯಕ್ಷಪ್ರತಿಭೆ ಪ್ರಶಸ್ತಿಗೆ ಮಾ. ಕಿಶನ್ ಅಗ್ಗಿತ್ತಾಯ ನೆಲ್ಲಿಕಟ್ಟೆ ಮತ್ತು ದಿ. ಕುಂಬ್ಳೆ ಚಂದ್ರಶೇಖರ ಸ್ಮರಣಾರ್ಥ ಪ್ರಶಸ್ತಿಗೆ ಉದಯೋನ್ಮುಖ ಮದ್ಲೆಗಾರ ಮಾ. ಕೃಷ್ಣಚೈತನ್ಯ ಚೇರಾಲು ಆಯ್ಕೆಗೊಂಡಿದ್ದಾರೆ.
ಇದೇ ಸಂದರ್ಭ ಕುಂಬ್ಳೆ ಸೀಮೆಯ ಬಳ್ಳಂಬೆಟ್ಟು ಮೂಲದ ಖ್ಯಾತ ಪುಂಡುವೇಷಧಾರಿ ದಿ. ಶ್ರೀಧರ ಭಂಡಾರಿ ಸ್ಮರಣಾರ್ಥ ಪ್ರಶಸ್ತಿ ನೀಡಲಿದ್ದು, ಪ್ರಶಸ್ತಿಗೆ ಪ್ರತಿಭಾವಂತ ಕಲಾವಿದ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 5 ಸಾವಿರ ರೂ ನಗದು ಮತ್ತು ಸ್ಮರಣಿಕೆ, ಸನ್ಮಾನಪತ್ರ, ಪಾರಿತೋಷಕವನ್ನೊಳಗೊಂಡಿದೆ.
ಏಳು ಮಂದಿಗೆ ಪ್ರತಿಭಾ ಪುರಸ್ಕಾರ
ಇದೇ ಸಂದರ್ಭ ಕುಂಬ್ಳೆ ಸೀಮೆಯ ಉದಯೋನ್ಮುಖರಾದ ಏಳುಮಂದಿ ಬಾಲಪ್ರತಿಭೆಗಳಿಗೆ ಕಣಿಪುರ ಯಕ್ಷಗಾನ ಮಾಸಪತ್ರಿಕೆ ವತಿಯಿಂದ “ಯಕ್ಷಪ್ರತಿಭಾ ಪುರಸ್ಕಾರ” ಪ್ರದಾನವಾಗಲಿದೆ. ಈ ಪರಸ್ಕಾರವು ಯಕ್ಷಗಾನ ಸಹಿತ ಲಲಿತಕಲೆಗಳಲ್ಲಿ ಈಗಾಗಲೇ ಭರವಸೆ ಮೂಡಿಸಿದ ಎಳೆಯ ಸಾಧಕ ಕಲಾವಿದ್ಯಾರ್ಥಿಗಳಾದ ಅನರ್ಘ್ಯರತ್ನ ಪೆರುವಡಿ ಬಾಯಾರು, ಶ್ರಾವಣಿ ಕಾಟುಕುಕ್ಕೆ, ಸ್ಮೃತಿ ಎಂ. ಮಾಯ್ಲೆಂಗಿ ಕಾಟುಕುಕ್ಕೆ, ಸ್ಪೂರ್ತಿ ಕಲ್ಲೂರಾಯ ಮಧೂರು, ಪ್ರೀತಿ ಕಲ್ಲೂರಾಯ ಮಧೂರು, ಅದ್ವೈತ್ ಕನ್ಯಾನ, ಶ್ರುತಿಕಲಾ ಚೇರಾಲು ಇವರಿಗೆ ಸಲ್ಲಲಿದೆ.
ತೆಂಕಣ ತವರಿನ ಪ್ರತಿಭಾವಂತ ಬಾಲಕಲಾವಿದರನ್ನು ಪ್ರೋತ್ಸಾಹಿಸಿ, ಈ ನೆಲದಲ್ಲಿ ಯಕ್ಷಗಾನದ ದಟ್ಟ ವಾತಾವಾರಣ ರೂಪಿಸಲು ಎಳೆಯರನ್ನು ಪೋಷಿಸುವ ದೃಷ್ಟಿಯಲ್ಲಿ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ನೆಲದಿಂದ ಪ್ರಶಸ್ತಿ ಮತ್ತು ಪುರಸ್ಕಾರ ಪಡೆಯುವುದು ಈ ಸಮಾರಂಭದ ವಿಶೇಷತೆಯಾಗಿದೆ.
ಬಳಿಕ ಪ್ರಸಿದ್ಧ ಕಲಾವಿದರ ಗಡಣ ಹೊಂದಿದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ “ಶ್ರೀರಾಮ ಕಾರುಣ್ಯ” ಪ್ರಸಂಗದ ಬಯಲಾಟ ಜರಗಲಿದ್ದು, ಕಾರ್ಯಕ್ರಮ ಕುಂಬ್ಳೆ ಶೇಡಿಕಾವಿನ ಪಾರ್ತಿಸುಬ್ಬ ಸ್ಮಾರಕ ಮೈದಾನದಲ್ಲಿ ಮಹಾಕವಿ ಪಾರ್ತಿಸುಬ್ಬನ ಸಂಕಲ್ಪಿತ ಛಾಯಾಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನಡೆಸುವುದರೊಂದಿಗೆ ಆರಂಭವಾಗಲಿದೆ. ಯಕ್ಷಗಾನದ ತವರುನೆಲದಲ್ಲಿ ಮತ್ತೆ ಯಕ್ಷಗಾನದ ವಾತಾವರಣ ನಿರ್ಮಿಸುವ ಸದುದ್ದೇಶದಿಂದ ಕಣಿಪುರ ಯಕ್ಷಮಿತ್ರ ಬಳಗದ ಸಹಕಾರದಲ್ಲಿ ಕರ‍್ಯಕ್ರಮ ಆಯೋಜಿಸಲಾಗಿದೆ.
ವರದಿ: ಎಂ.ನಾ. ಚಂಬಲ್ತಿಮಾರ್ –
ಸಂಪರ್ಕ: 9895508277
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions