Saturday, January 18, 2025
Homeಯಕ್ಷಗಾನಎಂ.ಜಿ.ಎಂ. ಕಾಲೇಜಿನಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ - "ಯಕ್ಷಗಾನ ವಿಶ್ವಮಾನ್ಯ ಕಲೆ": ಪ್ರೊ. ಲಕ್ಷ್ಮೀನಾರಾಯಣ ಕಾರಂತ

ಎಂ.ಜಿ.ಎಂ. ಕಾಲೇಜಿನಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ – “ಯಕ್ಷಗಾನ ವಿಶ್ವಮಾನ್ಯ ಕಲೆ”: ಪ್ರೊ. ಲಕ್ಷ್ಮೀನಾರಾಯಣ ಕಾರಂತ

ನಮ್ಮ ದೇಶದ ಹೆಮ್ಮೆಯ ಕಲೆಯಾದ ಯಕ್ಷಗಾನ ತನ್ನ ಅಂತ:ಸತ್ವದಿಂದಾಗಿ ವಿಶ್ವಮಾನ್ಯತೆಯನ್ನು ಗಳಿಸಿದೆ. ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ಜಗತ್ತಿನ ಹೊಸ ಹೊಸ ಪ್ರೇಕ್ಷಕರನ್ನು ತಲುಪುತ್ತಿರುವ ಈ ಕಲೆಯ ಮೂಲ ಸ್ವರೂಪದ ಕುರಿತು ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅತೀ ಅಗತ್ಯ. ಕಳೆದ ಹತ್ತು ವರ್ಷಗಳಿಂದ ವಿವಿಧ ಶಾಲಾ-ಕಾಲೇಜುಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನಡೆಸುವುದರ ಮೂಲಕ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಉತ್ತಮ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಎಂ.ಜಿ.ಎಂ. ಕಾಲೇಜಿನ ಪ್ರಾಚಾರ್ಯ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಹೇಳಿದರು.


ಗುರುವಾರ (15-12-2022) ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಾಂಗಣ ಟ್ರಸ್ಟ್ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಎಂ.ಜಿ.ಎಂ. ಕಾಲೇಜಿನ ಯಕ್ಷಗಾನ ಮತ್ತು ನಾಟಕ ರಂಗದ ಸಹಯೋಗದೊಂದಿಗೆ ಆಯೋಜಿಸಿದ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ರಂಜನೀಯವಾದ ಲಕ್ಷಣಗಳಿಂದ ಮೇಳೈಸಿರುವ ಯಕ್ಷಗಾನ ಪ್ರದರ್ಶನಗಳಲ್ಲಿ ಪರಂಪರೆಯ ಸತ್ವಗಳು ದೂರವಾಗುತ್ತಿರುವುದು ವಿಷಾದನೀಯ ಸಂಗತಿ. ಇಂತಹ ಕಾರ್ಯಕ್ರಮಗಳ ಮೂಲಕ ಯುವ ಜನಾಂಗ ಕಲೆಯ ಮೂಲ ಚೆಲುವನ್ನು ಅರಿಯುವಂತಾಗಬೇಕು. ವಿದ್ಯಾರ್ಥಿಗಳು ಪಠ್ಯ ವಿಷಯಗಳೊಂದಿಗೆ ಕಲೆ-ಸಾಹಿತ್ಯ-ಸಂಗೀತಗಳಲ್ಲಿ ಅಭಿರುಚಿಗಳನ್ನು ಬಳಸಿಕೊಳ್ಳಬೇಕು ಎಂದು ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಹೇಳಿದರು.


ಮುಖ್ಯ ಅತಿಥಿಗಳಾಗಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ, ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ನಾಯ್ಕ ಭಾಗವಹಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪುತ್ತಿ ವಸಂತ ಕುಮಾರ್, ಯಕ್ಷಾಂಗಣ ಟ್ರಸ್ಟ್ನ ಕಾರ್ಯಕ್ರಮದ ಸಂಯೋಜಕರಾದ ಕೋಟ ಸುದರ್ಶನ ಉರಾಳ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಘವೇಂದ್ರ ತುಂಗ ಕೆ. ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ನಂತರ ವಿದ್ವಾಂಸರಾದ ಸುಜಯೀಂದ್ರ ಹಂದೆ ಎಚ್. ಇವರ ನಿರೂಪಣೆಯೊಂದಿಗೆ ಹೆಜ್ಜೆಗಾರಿಕೆ, ಪದಾಭಿನಯ, ಮುದ್ರೆಗಳು, ಬಣ್ಣದ ವೇಷ ಮುಖವರ್ಣಿಕೆ, ಅಟ್ಟೆಕ್ಯಾದಿಗೆ ಮುಂದಲೆ ಕಟ್ಟುವುದು, ಬಾಲಗೋಪಾಲ, ಸ್ತ್ರೀ ವೇಷ, ಯಕ್ಷಗಾನದ ವಸ್ತ್ರಾಲಂಕಾರದ ವಿನ್ಯಾಸ, ಯುದ್ಧ ಕುಣಿತ, ಪ್ರಯಾಣ ಕುಣಿತ, ಪೌರಾಣಿಕ ಪ್ರಸಂಗಗಳ ಸನ್ನಿವೇಶಗಳು ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶನಗೊಂಡವು.


ಕಲಾವಿದರಾಗಿ ಸುಜಯೀಂದ್ರ ಹಂದೆ ಎಚ್, ದೇವರಾಜ ದಾಸ, ರಾಘವೇಂದ್ರ ಹೆಗಡೆ, ಅಜಿತ್ ಅಂಬಲಪಾಡಿ, ತಮ್ಮಣ್ಣ ಗಾಂವ್ಕರ್, ನವೀನ್ ಕೋಟ, ಸುದೀಪ ಉರಾಳ, ಸುಹಾಸ್ ಕರಬ, ರಾಜು ಪೂಜಾರಿ ಇನ್ನಿತರರು ಭಾಗವಹಿಸಿದರು.

ವರದಿ: ರಾಘವೇಂದ್ರ ತುಂಗ ಕೆ.
ಮೊ. 9980181150

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments