
ಪುತ್ತೂರು: ಆಧುನಿಕ ದಿನಮಾನಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ಅತ್ಯಂತ ಸುಲಭಸಾಧ್ಯವೆನಿಸಿದೆ. ಬೆರಳ ತುದಿಯಲ್ಲಿ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ. ಎಟಿಎಂ ಕೇಂದ್ರಗಳಲ್ಲಿ ಹಣ ಪಡೆಯುವುದು ಮಾತ್ರವಲ್ಲದೆ ಜಮಾ ಮಾಡುವುದಕ್ಕೂ ಸಾಧ್ಯವಾಗಿದೆ. ಆದರೆ ಈ ರೀತಿ ಯಾವುದೇ ವ್ಯವಹಾರ ಮಾಡಬೇಕಿದ್ದರೂ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕಾದದ್ದು ಅಗತ್ಯ ಎಂದು ಪುತ್ತೂರಿನ ಕೆನರಾ ಬ್ಯಾಂಕ್‌ನ ಹಿರಿಯ ಪ್ರಬಂಧಕ ವಸಂತ ಬಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಬ್ಯಾಂಕ್ ಖಾತೆ ಆರಂಭಿಸುವ ಬಗೆಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿವಿಧ ಬಗೆಯ ಉದ್ಯಮಗಳು ಇಂದು ಮೊಬೈಲ್ ಬ್ಯಾಂಕಿಂಗ್ ಮೂಲಕವೇ ಕಾರ್ಯನಿರ್ವಹಿಸುತ್ತಿವೆ. ಖಾತೆಯೊಂದನ್ನು ಆರಂಭಿಸಿದ ನಂತರ ಮನೆಯಲ್ಲಿದ್ದೇ ವ್ಯವಹಾರ ನಡೆಸುವುದು ಇಂದು ಸಹಜ ಪ್ರಕ್ರಿಯೆಯಾಗಿ ನಡೆಯುತ್ತಿದೆ. ವಿದ್ಯಾಥಿಗಳು ಉನ್ನತ ಶಿಕ್ಷಣಕ್ಕೆ ಅಡಿಯಿಡುವ ಸಂದರ್ಭದಲ್ಲಿ ಸಾಲ ಪಡೆಯುವುದಕ್ಕೂ ಖಾತೆ ಹೊಂದಿರಲೇಬೇಕು. ಹಾಗಾಗಿ ಆದಷ್ಟು ಬೇಗ ಖಾತೆ ಆರಂಭಿಸಿದರೆ ಮುಂದಿನ ದಿನಗಳಲ್ಲಿ ಸಾಲ ಪಡೆಯುವುದಕ್ಕೂ ಸಹಕಾರಿ ಎನಿಸಲಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಪ್ರತಿಯೊಬ್ಬನೂ ಬ್ಯಾಂಕ್ ಖಾತೆ ಹೊಂದಿರಬೇಕಾದ್ದು ಇಂದಿನ ಅಗತ್ಯ. ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆಗಳಿದ್ದರೆ ನಾನಾ ಬಗೆಯ ವ್ಯವಹಾರಗಳಿಗೆ ಅನುಕೂಲವೆನಿಸುತ್ತದೆ. ನಿರ್ದಿಷ್ಟ ಬ್ಯಾಂಕ್‌ನ ಖಾತೆಯನ್ನು ನಿರ್ದಿಷ್ಟ ವ್ಯವಹಾರಕ್ಕಷ್ಟೇ ಬಳಸಿದಾಗ ವೈಯಕ್ತಿಕ ಬದುಕಿನ ಆರ್ಥಿಕ ಲೆಕ್ಕಾಚಾರಗಳನ್ನು ಸುಲಭವಾಗಿ ನಿರ್ವಹಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಕೆನರಾ ಬ್ಯಾಂಕ್ ಉದ್ಯೋಗಿ ಅನೂಷಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.