
ಕಾಸರಗೋಡಿನ ಸಮೀಪ ರೈಲ್ವೆ ಹಳಿಯಲ್ಲಿ ಮಂಗಳೂರು ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಓಡುತ್ತಿರುವ ರೈಲಿಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಇಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿ ಕಾವುಗೋಳಿ ಚೌಕಿಯ ಕಡಪ್ಪುರ ನಿವಾಸಿ ಸುರೇಂದ್ರನ್ ಮತ್ತು ಶ್ಯಾಮಲಾ ಅವರ ಪುತ್ರಿ ಅಂಜನಾ ಎಸ್. (22) ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಎಂಎಸ್ಸಿ ಬಯೋಕೆಮಿಸ್ಟ್ರಿ ವಿದ್ಯಾರ್ಥಿನಿಯಾಗಿದ್ದರು.
ಸೋಮವಾರ ರಾತ್ರಿ ಊಟ ಮುಗಿಸಿ ಮಲಗಿದ್ದ ಆಕೆ ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಕಾಣೆಯಾಗಿದ್ದಳು. ಆಕೆಯ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ರೈಲ್ವೇ ಹಳಿಗಳ ಮೇಲೆ ಶೋಧ ನಡೆಸಿದಾಗ ಆಕೆಯ ಮೃತದೇಹ ಪತ್ತೆಯಾಗಿದೆ.
ಆಕೆಯ ಮೊಬೈಲ್ ಹಳಿಗಳ ಮೇಲೆ ಛಿದ್ರವಾಗಿ ಬಿದ್ದಿರುವುದು ಕಂಡುಬಂದಿದೆ. ಕಾಸರಗೋಡು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.
ಆಕೆಯ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.