

ಚಿತ್ರದುರ್ಗದ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾಕ್ಟರ್ ರೂಪಾ ನಿನ್ನೆ ತಲೆಯಿಂದ ತೀವ್ರ ರಕ್ತಸ್ರಾವವಾದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು.
ಚಿತ್ರದುರ್ಗ ಜಿಲ್ಲಾ ಕೃಷ್ಠರೋಗ ನಿವಾರಣಾಧಿಕಾರಿ ಡಾ.ರೂಪಾ ಅವರು ನಿಗೂಢವಾಗಿ ಮೃತಪಟ್ಟಿದ್ದು ಕೂಡಲೇ ಪೊಲೀಸರು ಮೃತದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಿದ್ದಾರೆ. ಕಾಲು ಜಾರಿ ಬಿದ್ದು ತಲೆಬಡಿಸಿಕೊಂಡ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆಂದು ಅವರ ಪತಿ ಡಾಕ್ಟರ್ ರವಿ ಪೊಲೀಸರಿಗೆ ತಿಳಿಸಿದ್ದಾರೆ.
ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ರೂಪ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳಿಸುವ ವ್ಯವಸ್ಥೆ ಮಾಡಿದರು. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕುಷ್ಟರೋಗ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ರೂಪಾ ಅವರ ಪತಿ ಡಾ. ರವಿ ಕೂಡ ಮೂಳೆರೋಗ ತಜ್ಞರಾಗಿದ್ದು, ವಿಪಿ ಬಡಾವಣೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ.
ಆದರೆ ಈಗ ಪೋಸ್ಟ್ ಮಾರ್ಟಮ್ ವೇಳೆ ಡಾ. ರೂಪಾ ತಲೆಯಲ್ಲಿ ಗುಂಡು ಪತ್ತೆಯಾಗಿದೆ. ರೂಪ ಅವರ ಸಹೋದರ ಇದೊಂದು ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಚಿತ್ರದುರ್ಗ ನಗರ ಠಾಣೆ ಪೊಲೀಸರಿಗೆ ರೂಪಾಳ ಕೊಠಡಿಯಲ್ಲಿ ಡೆತ್‍ನೋಟ್ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂಬುದನ್ನು ಆಕೆ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಡೆತ್ ನೋಟ್ ಮತ್ತು ಗಂಡ ಡಾ. ರವಿಯ ಹೇಳಿಕೆ ಒಂದಕ್ಕೊಂದು ತಾಳೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.