

ಮಂಗಳೂರು: ‘ಭಾರತೀಯ ಪುರಾಣ ಹಾಗೂ ಇತಿಹಾಸ ಕಥನಗಳನ್ನು ಜನರ ಮನಸ್ಸಿಗೆ ಮುಟ್ಟುವ ಹಾಗೆ ಪ್ರಸ್ತುತಪಡಿಸುವ ಯಕ್ಷಗಾನ ಕರಾವಳಿ ವೈಭವವನ್ನು ಜಗತ್ತಿಗೆ ಸಾರಿ ಹೇಳಿದೆ. ಬಯಲಾಟ ಮತ್ತು ತಾಳಮದ್ದಳೆ ಕೂಟಗಳ ಮೂಲಕ ನಮ್ಮ ಭಾಷೆ – ಸಂಸ್ಕೃತಿಯನ್ನು ಎತ್ತಿ ಹಿಡಿದಿರುವ ಯಕ್ಷಗಾನ ಕರುನಾಡಿನ ಸಮೃದ್ಧ ಕಲೆ’ ಎಂದು ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಹೇಳಿದ್ದಾರೆ.
ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯಾದ ಯಕ್ಷಾಂಗಣ ಮಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಕೇಂದ್ರ, ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಹತ್ತನೇ ವರ್ಷದ ನುಡಿ ಹಬ್ಬದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಕಿಲ್ಲೆ ಸಂಸ್ಮರಣ:
ಇದೇ ಸಂದರ್ಭದಲ್ಲಿ ಗತಿಸಿ ಹೋದ ಹಿರಿಯ ಅರ್ಥಧಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ದೇಶಭಕ್ತ ನಾರಾಯಣ ಶೆಟ್ಟಿ ಕಿಲ್ಲೆ ಅವರ ಸಂಸ್ಮರಣ ಕಾರ್ಯಕ್ರಮ ಜರಗಿತು.ಪುತ್ತೂರಿನ ದಿ.ಎನ್.ಎಸ್. ಕಿಲ್ಲೆ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ನುಡಿ ನಮನ ಸಲ್ಲಿಸಿದರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣದ ಮೂಲಕ ಪ್ರಸ್ತಾವನೆಗೈದರು. ಪ್ರತಿಷ್ಠಾನದ ಕಾರ್ಯದರ್ಶಿ ಪ್ರಶಾಂತ ರೈ ಪುತ್ತೂರು, ಪ್ರಮುಖರಾದ ಸುಧಾಕರ ಹೆಗಡೆ ಮತ್ತು ಕಿಲ್ಲೆಯವರ ಕುಟುಂಬಿಕರು ಉಪಸ್ಥಿತರಿದ್ದರು
ಯಕ್ಷಾಂಗಣ ಗೌರವ ಪ್ರಶಸ್ತಿ:
ತೆಂಕು-ಬಡಗು ಉಭಯ ತಿಟ್ಟುಗಳ ಪ್ರಸಿದ್ಧ ಯಕ್ಷಗಾನ ಸ್ತ್ರೀ ವೇಷಧಾರಿ ಎಂ.ಕೆ.ರಮೇಶ ಆಚಾರ್ಯ ಅವರಿಗೆ ಎನ್.ಎಸ್ ಕಿಲ್ಲೆ ಸ್ಮರಣಾರ್ಥ ‘ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯೊಂದಿಗೆ ಯಕ್ಷಾಂಗಣ ವತಿಯಿಂದ ಫಲ,ಸ್ಮರಣಿಕೆ,ಮಾನಪತ್ರ ಮತ್ತು ರೂ.10,000/- ಗೌರವ ನಿಧಿಯನ್ನು ಸಮರ್ಪಿಸಲಾಯಿತು. ನಿವೇದಿತ ಎನ್.ಶೆಟ್ಟಿ ಪ್ರಶಸ್ತಿ ಫಲಕ ವಾಚಿಸಿದರು.
ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಎಂ.ಕೆ. ರಮೇಶಾಚಾರ್ಯ ‘ಕಲಾವಿದನಾಗಿ ಹಲವಾರು ಹಿರಿಯ ಕಲಾವಿದರ ಒಡನಾಟ ಗಳಿಸಿದ್ದ ತನಗೆ ಮಾನ ಸನ್ಮಾನಗಳು ಹೆಚ್ಚಾಗಿ ಲಭಿಸಿರುವುದು ಕರಾವಳಿ ಭಾಗದಲ್ಲಿ. ಘಟ್ಟದಲ್ಲಿ ಹುಟ್ಟುವುದಕ್ಕಿಂತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟುತ್ತಿದ್ದರೆ ಇನ್ನಷ್ಟು ಸಂತೋಷಪಡುತ್ತಿದ್ದೆ’ ಎಂದು ಭಾವುಕರಾಗಿ ನುಡಿದರು. ಹಿರಿಯ ಲೆಕ್ಕ ಪರಿಶೋಧಕ ಸಿಎ ಎಸ್.ಎಸ್.ನಾಯಕ್, ಉದ್ಯಮಿ ಸೌಂದರ್ಯ ರಮೇಶ್,ವಿ.ವಿ.ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ಮುಖ್ಯ ಅತಿಥಿಗಳಾಗಿದ್ದರು
ಕಾರ್ಯಕ್ರಮ ಸಂಘಟಕ ಮತ್ತು ಅಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥನೆ ಸಲ್ಲಿಸಿ, ನಿರೂಪಿಸಿದರು. ಜೊತೆ ಕಾರ್ಯದರ್ಶಿ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಸಮಿತಿ ಪ್ರಮುಖರಾದ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಕೆ.ರವೀಂದ್ರ ರೈ ಕಲ್ಲಿಮಾರು, ಸುಧಾಕರ ರಾವ್ ಪೇಜಾವರ, ಡಾ. ದಿನಕರ ಎಸ್. ಪಚ್ಚನಾಡಿ, ಸಿದ್ದಾರ್ಥ ಅಜ್ರಿ, ಸುಮಾಪ್ರಸಾದ್ ವೇದಿಕೆಯಲ್ಲಿದ್ದರು.
ಯಕ್ಷಗಾನ ತಾಳಮದ್ದಳೆ:
ಸಮಾರೋಪದ ಅಂಗವಾಗಿ ‘ಸಪ್ತ ವಿಜಯ’ ಸರಣಿಯ ಕೊನೆಯಲ್ಲಿ ಭಾಗವತರಾದ ಪ್ರಶಾಂತ ರೈ ಪುತ್ತೂರು ಮತ್ತು ಧೀರಜ್ ರೈ ಸಂಪಾಜೆ ಅವರ ಭಾಗವತಿಕೆಯಲ್ಲಿ ‘ಸಿರಿಕಟ್ಣ ವಿಜಯೊ’ (ತುಳು) ಹಾಗೂ ‘ಯಕ್ಷ ಲೋಕ ವಿಜಯ’ (ಕನ್ನಡ) ಯಕ್ಷಗಾನ ತಾಳಮದ್ದಳೆ ಜರಗಿತು.

