ಶ್ರೀ ನಾಗೇಂದ್ರ ಮೂರೂರು ಅವರು ಬಡಗುತಿಟ್ಟಿನ ಯುವ, ಅನುಭವೀ ಕಲಾವಿದರು. ಪ್ರಸ್ತುತ ಹಾಸ್ಯಗಾರರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಹಾಸ್ಯಗಾರನಾದರೂ ಇವರು ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಸಾಮರ್ಥ್ಯ ಉಳ್ಳವರು. ಆದುದರಿಂದ ತಂಡಕ್ಕೆ ಅನಿವಾರ್ಯ ಸಂದರ್ಭಗಳಲ್ಲಿ ಇವರು ಆಪದ್ಬಾಂಧವರಾಗಿ ಒದಗಬಲ್ಲವರು. ಇವರಲ್ಲಿರುವ ಹಾಸ್ಯಪ್ರಜ್ಞೆಯನ್ನು ಗುರುತಿಸಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಲು ಪ್ರೇರಣೆ ನೀಡಿ ಅವಕಾಶ ನೀಡಿದವರು ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು.
‘ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ’ ತಂಡದ ಸದಸ್ಯನಾಗಿ ವೇಷಗಳನ್ನು ಮಾಡುತ್ತಿದ್ದಾಗ ಪ್ರೇಕ್ಷಕರು ಇವರಲ್ಲಿರುವ ಪ್ರತಿಭೆಯನ್ನು ಗುರುತಿಸಿದ್ದರು. ಗುಂಡಬಾಳಾ ಮೇಳ, ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರ ‘ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ’ ಕುಂಭಾಶಿ, ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿಯವರ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಶ್ರೀ ಬಳ್ಕೂರು ಕೃಷ್ಣಯಾಜಿ ಅವರ ಯಾಜಿ ಯಕ್ಷಮಿತ್ರ ಮಂಡಳಿ, ಇಟಗಿ ಶ್ರೀ ಮಹಾಬಲೇಶ್ವರ ಭಟ್ ಅವರ ಕಲಾಭಾಸ್ಕರ ಮೊದಲಾದ ತಂಡಗಳಲ್ಲಿ ವ್ಯವಸಾಯ ಮಾಡಿದ ಅನುಭವಿ ಇವರು. ಅನಿವಾರ್ಯ ಸಂದರ್ಭಗಳಲ್ಲಿ ಸಾಲಿಗ್ರಾಮ ಮೇಳದಲ್ಲಿ ವೇಷ ಮಾಡಿದ್ದೂ ಇದೆ. ಯಕ್ಷಗಾನ ಕ್ಷೇತ್ರದಲ್ಲಿ ಇವರು ಸುಮಾರು ಮೂವತ್ತು ವರ್ಷಗಳ ಅನುಭವಿ.
ಬಡಗುತಿಟ್ಟಿನ ಅನುಭವೀ ಹಾಸ್ಯಗಾರರಾದ ಶ್ರೀ ನಾಗೇಂದ್ರ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳವಳ್ಳಿ ಗ್ರಾಮದ ಮೂರೂರು. 1977ನೇ ಇಸವಿ ಸೆವ್ಟೆಂಬರ್ 30ರಂದು ಶ್ರೀ ವೆಂಕಟ್ರಮಣ ಭಟ್ ಮತ್ತು ಶ್ರೀಮತಿ ಮಹಾದೇವಿ ದಂಪತಿಗಳ ಪುತ್ರನಾಗಿ ಜನನ. ಕೃಷಿ ಕುಟುಂಬ ಇವರದ್ದು. ಮನೆಯ ಸದಸ್ಯರೆಲ್ಲರೂ ಯಕ್ಷಗಾನ ಕಲಾಸಕ್ತರು. ವಿದ್ಯಾರ್ಜನೆ ಎಸ್. ಎಸ್. ಎಲ್. ಸಿ ವರೆಗೆ. 7ನೇ ತರಗತಿ ವರೆಗೆ ಅಳವಳ್ಳಿ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಕವಲಕ್ಕಿ ಜೂನಿಯರ್ ಕಾಲೇಜಿನಲ್ಲಿ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು.
ಶಾಲಾ ವಿದ್ಯಾರ್ಥಿಯಾಗಿದ್ದಾಗ ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಮೂರೂರು ದೇವರು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಎಂ.ಎ ನಾಯ್ಕ್, ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕುಂಜಾಲು ರಾಮಕೃಷ್ಣ, ಬೆಳಿಯೂರು ಕೃಷ್ಣಮೂರ್ತಿ ಮೊದಲಾದ ಖ್ಯಾತ ಕಲಾವಿದರ ವೇಷಗಳನ್ನು ನೋಡುವ ಅವಕಾಶವಾಗಿತ್ತು. ಶ್ರೀ ನಾಗೇಂದ್ರ ಅವರಿಗೆ ಬೆಳಿಯೂರು ಕೃಷ್ಣಮೂರ್ತಿಯವರ ಹಾಸ್ಯ ಎಂದರೆ ಬಲು ಇಷ್ಟ. ಇವರ ವೇಷಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆಯು ಚಿಗುರೊಡೆದಿತ್ತು. ಶ್ರೀ ನಾಗೇಂದ್ರ ಮೂರೂರು ಅವರಿಗೆ ನಾಟಕದಲ್ಲೂ ಆಸಕ್ತಿ ಇತ್ತು.
ಯಕ್ಷಗಾನ ಕಲಾವಿದನಾಗುವುದಕ್ಕಿಂತ ಮೊದಲೇ ಇವರು ನಾಟಕದಲ್ಲಿ ವೇಷ ಮಾಡಿದ್ದರು. ಶ್ರೇಷ್ಠ ಕಲಾವಿದರಾದ ಕೆಕ್ಕಾರು ಜಿ.ಡಿ ಭಟ್ಟರ ಜತೆ ನಾಟಕದಲ್ಲಿ ಪಾತ್ರ ಮಾಡಿದ್ದರು. ಕೆಕ್ಕಾರು ಜಿ.ಡಿ ಭಟ್ಟರು ಕಲಾವಿದರೂ ಚಿತ್ರ ಕಲಾಕಾರರೂ ಆಗಿದ್ದರು. ಮಣ್ಣಿನಿಂದ ವಿವಿಧ ಮೂರ್ತಿಗಳನ್ನು ರಚಿಸುವ ಕಲೆಯೂ ಅವರಿಗೆ ತಿಳಿದಿತ್ತು. ಶ್ರೀ ನಾಗೇಂದ್ರ ಮೂರೂರು ಅವರು ನಾಟ್ಯ ಕಲಿತು ಯಕ್ಷಗಾನ ಕಲಾವಿದನಾಗಲು ನಿರ್ಧರಿಸಿದ್ದರು. ಮನೆಯಲ್ಲಿ ಬಡತನವಿತ್ತು. ಹಣ ಸಂಪಾದನೆ ಅಷ್ಟು ಸುಲಭವಿರಲಿಲ್ಲ. ಅಡುಗೆ ಕೆಲಸಕ್ಕೆ ತೆರಳಿ ಹಣ ಸಂಪಾದಿಸಿದ್ದರು.
ಮೂರೂರು ದೇವರು ಹೆಗಡೆ ಸ್ಮಾರಕ ಪ್ರತಿಷ್ಠಾನ ಸಂಸ್ಥೆಯಡಿ ಮೂರೂರು ಸುಬ್ರಹ್ಮಣ್ಯ ಮತ್ತು ಸರ್ವೇಶ್ವರ ಮೂರೂರು ಅವರಿಂದ ನಾಟ್ಯ ಅಭ್ಯಾಸ. ಮೂರೂರಿನಲ್ಲಿ ನಡೆದ ಪ್ರದರ್ಶನ, ಕಂಸ ವಧೆ ಪ್ರಸಂಗದಲ್ಲಿ ಕಂಸನಾಗಿ ರಂಗಪ್ರವೇಶ. ಬಳಿಕ ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ದಕ್ಷ, ಗಯ ಚರಿತ್ರೆ ಪ್ರಸಂಗದಲ್ಲಿ ಗಯ ಮೊದಲಾದ ಪಾತ್ರಗಳನ್ನು ಮಾಡಿದ್ದರು.
ಶ್ರೀ ನಾಗೇಂದ್ರ ಮೂರೂರು ಅವರು ಮೊದಲು ವ್ಯವಸಾಯ ಮಾಡಿದ್ದು ಗುಂಡಬಾಳಾ ಮೇಳದಲ್ಲಿ. ಸದ್ರಿ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಬಳಿಕ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ನೇತೃತ್ವದ ಪೂರ್ಣಚಂದ್ರ ಯಕ್ಷ ಕಲಾ ಪ್ರತಿಷ್ಠಾನ ತಂಡದಲ್ಲಿ ನಿರಂತರ 14 ವರ್ಷ ವ್ಯವಸಾಯ. ಈ ತಂಡದಲ್ಲಿ ಖ್ಯಾತ ಕಲಾವಿದರ ಒಡನಾಟವೂ ಸಿಕ್ಕಿತ್ತು. ಮೊದಲು ಕಟ್ಟು ವೇಷ, ಒಡ್ಡೋಲಗ ವೇಷಗಳನ್ನು ಮಾಡುತ್ತಾ ಸಾಗಿದ್ದರು. ಬಳಿಕ ಕೊಂಡದಕುಳಿಯವರು ಕಾರ್ತವೀರ್ಯ, ಕೀಚಕ, ಈಶ್ವರನ ಪಾತ್ರಗಳನ್ನು ನಿರ್ವಹಿಸಿದಾಗ ಅವರ ಜತೆ ರಾವಣ, ವಲಲ, ಮಹೋಗ್ರ ಪಾತ್ರಗಳನ್ನು ಮಾಡಲು ಅವಕಾಶವು ಸಿಕ್ಕಿತ್ತು.
ಇವರಲ್ಲಿರುವ ಹಾಸ್ಯ ಪ್ರಜ್ಞೆಯನ್ನು ಗುರುತಿಸಿದ ಕೊಂಡದಕುಳಿಯವರು ಹಾಸ್ಯ ಪಾತ್ರಗಳನ್ನು ಮಾಡಲು ಸಲಹೆ ನೀಡಿ ಪ್ರೋತ್ಸಾಹಿಸಿದ್ದರು. ಈ ತಂಡದ ಹಾಸ್ಯಗಾರನಾಗಿ ಮಂಥರೆ, ನಕ್ಷತ್ರಿಕ, ಚಿತ್ರಗುಪ್ತ, ಚಿತ್ರಾಕ್ಷಿ ಕಲ್ಯಾಣದ ಪ್ರಸಂಗದ ಅಜ್ಜಿ, ಚಂದ್ರಾವಳೀ ವಿಲಾಸ ಪ್ರಸಂಗದ ಗೋಪಾಲಕರು, ಚಂದಗೋಪ, ಅತ್ತೆ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವಾಗಿತ್ತು. ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಬೆಳಿಯೂರು ಸಂಜಯಕುಮಾರರ ಬಣ್ಣಗಾರಿಕೆಯಿಂದ ಪ್ರೇರಿತರಾಗಿ ನಾಗೇಂದ್ರ ಮೂರೂರು ಅವರು ನೇಪಥ್ಯದಲ್ಲಿ ಸಿದ್ಧರಾಗುತ್ತಾರೆ. ಕೊಂಡದಕುಳಿ ಅವರ ನಿರ್ದೇಶನದಲ್ಲಿ ಸ್ತ್ರೀ ಪಾತ್ರಗಳನ್ನೂ ನಿರ್ವಹಿಸಿದ್ದಾರೆ.
“ನಾನು ಕಲಾವಿದನಾಗಿ ಕಾಣಿಸಿಕೊಳ್ಳಲು ಅವರೇ ಕಾರಣರು. ಬಣ್ಣ ಹಾಕಲು, ಶೃತಿಬದ್ಧವಾಗಿ ಮಾತನಾಡಲು, ವೇಷಭೂಷಣಗಳನ್ನು ಧರಿಸಲು, ಸಮಯಪಾಲನೆ ಮತ್ತು ಶಿಸ್ತನ್ನು ಅವರಿಂದಲೇ ಕಲಿತೆ. ಮನೆಯ ಸದಸ್ಯನಂತೆ ನನ್ನನ್ನು ನೋಡಿಕೊಂಡಿದ್ದಾರೆ” ಎಂದು ಹೇಳುವ ಮೂಲಕ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರನ್ನು ಶ್ರೀ ನಾಗೇಂದ್ರ ಮೂರೂರು ಅವರು ಗೌರವಿಸುತ್ತಾರೆ.
ಶ್ರೀ ನಾಗೇಂದ್ರ ಮೂರೂರು ಅವರು ವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಯಾಜಿ ಯಕ್ಷಮಿತ್ರ ಮಂಡಳಿ ತಂಡಗಳಲ್ಲೂ ವ್ಯವಸಾಯ ಮಾಡಿರುತ್ತಾರೆ. ಇಟಗಿ ಶ್ರೀ ಮಹಾಬಲೇಶ್ವರ ಭಟ್ ಅವರ ‘ಕಲಾಭಾಸ್ಕರ’ ತಂಡದಲ್ಲಿ ಆರಂಭದಿಂದ ಇಂದಿನ ತನಕವೂ ಎಲ್ಲಾ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. (ಹಾಸ್ಯ ಪಾತ್ರಗಳಲ್ಲಿ) ಶಿರಸಿ, ಸಿದ್ಧಾಪುರ ಪ್ರದೇಶದ ಪ್ರೇಕ್ಷಕರು ಇವರನ್ನು ಗುರುತಿಸಲು ಇದರಿಂದ ಅನುಕೂಲವಾಗಿತ್ತು.
ಸತ್ಯ ಹರಿಶ್ಚಂದ್ರ ಪ್ರಸಂಗದಲ್ಲಿ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಹರಿಶ್ಚಂದ್ರನಾಗಿಯೂ ತೋಟಿಮನೆ ಗಣಪತಿ ಹೆಗಡೆಯವರು ವಿಶ್ವಾಮಿತ್ರನಾಗಿಯೂ ಅಭಿನಯಿಸಿದಾಗ ಅವರ ಜತೆಯಲ್ಲಿ ನಕ್ಷತ್ರಿಕನಾಗಿ ಅಭಿನಯಿಸಲು ಅವಕಾಶವಾಗಿತ್ತು. ‘ದುಷ್ಯಂತ-ಶಕುಂತಲಾ’ ಪ್ರಸಂಗದ ತುಕ್ರ ಅಂಬಿಗನ ಹೆಂಡತಿ ಚಂದ್ರಿ ಎಂಬ ಪಾತ್ರದಲ್ಲಿ ನಾಗೇಂದ್ರ ಮೂರೂರು ಅವರ ಅಭಿನಯವನ್ನು ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದರು. ಮಲ್ಪೆ ಶ್ರೀ ವಾಸುದೇವ ಸಾಮಗ, ಚಪ್ಪರಮನೆ ಶ್ರೀಧರ ಹೆಗಡೆ, ಶ್ರೀಧರ ಭಟ್ ಕಾಸರಕೋಡ್ ಇವರುಗಳು ತುಕ್ರ ಅಂಬಿಗನ ಪಾತ್ರ ಮಾಡಿದಾಗ ಅವರ ಜತೆಯಲ್ಲಿ ಚಂದ್ರಿಯಾಗಿ ಅಭಿನಯಿಸಿದ್ದರು.
ಈ ಜತೆಗಾರಿಕೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಸೀತಾ ವಿಯೋಗ ಪ್ರಸಂಗದ ವಾಲ್ಮೀಕಿ, ಲವಕುಶರ ಕಾಳಗ ಪ್ರಸಂಗದ ಮಾಣಿ, ದೂತ, ಕೀಚಕ ವಧೆ ಪ್ರಸಂಗದ ವಿಜಯ,ಪಟ್ಟಾಭಿಷೇಕ ಪ್ರಸಂಗದ ಮಂಥರೆ, ಮೊದಲಾದ ಪಾತ್ರಗಳೂ ಇವರಿಗೆ ಹೆಸರನ್ನು ತಂದುಕೊಟ್ಟವು. ವಿದೇಶ ಯಾತ್ರೆಯನ್ನು ಕೈಗೊಂಡು ದುಬಾಯಿ, ಶಾರ್ಜಾ, ಬಹರೈನ್, ಸಿಂಗಾಪುರದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ದೆಹಲಿ, ಉಜ್ಜಯಿನಿ, ಕೇರಳ, ಹೈದರಾಬಾದ್, ಕೋಲ್ಕೊತಾ, ಮುಂಬಯಿ ಮೊದಲಾದ ನಗರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ರಂಜಿಸುವ ಅವಕಾಶವೂ ಇವರಿಗೆ ಸಿಕ್ಕಿದೆ.
ಶ್ರೀ ನಾಗೇಂದ್ರ ಮೂರೂರು ಅವರು ಪ್ರಸ್ತುತ ಯಾವುದೇ ತಂಡದ ಖಾಯಂ ಸದಸ್ಯನಲ್ಲ. ಕರೆದಲ್ಲಿ ತೆರಳಿ ಪ್ರದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಶ್ರೀಯುತರ ಪತ್ನಿ ಶ್ರೀಮತಿ ಜಾಹ್ನವಿ. ಇವರು ಗೃಹಣಿ. ಶ್ರೀ ನಾಗೇಂದ್ರ ಮೂರೂರು ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವಲ್ಲಿ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕಗಳು.
ಶ್ರೀ ನಾಗೇಂದ್ರ ಮೂರೂರು. ಮೊಬೈಲ್ : 9480056665
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ ಮೊಬೈಲ್: 9164487083
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions