

ಕಿತ್ವಾಡ್ ಜಲಪಾತದಲ್ಲಿ ಕರ್ನಾಟಕದ ನಾಲ್ವರು ಯುವತಿಯರು ಸೆಲ್ಫಿ ತೆಗೆಯುತ್ತಿರುವಾಗ ಕಾಲು ಜಾರಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಬೆಳಗಾವಿಯ ಮದ್ರಸಾದಲ್ಲಿ ವಿದ್ಯಾರ್ಥಿಗಳಾಗಿದ್ದು, ಬೆಳಗಾವಿ ತಾಲೂಕಿನ ಗಡಿಗೆ ಸಮೀಪದಲ್ಲಿರುವ ಕಿತ್ವಾಡ್ ಜಲಪಾತಕ್ಕೆ ಪಿಕ್ ನಿಕ್ ಬಂದಿದ್ದರು.
ಬೆಳಗಾವಿಯ ಉಜ್ವಲ್ ನಗರದ ಆಸಿಯಾ ಮುಜಾವರ್ (17), ಅಂಗೋಲ್‌ನ ಕುದ್ಶಿಯಾ ಹಸನ್ ಪಟೇಲ್ (20), ರುಖ್ಸಾರ್ ಭಿಸ್ತಿ (20) ಮತ್ತು ಬೆಳಗಾವಿಯ ಝತ್‌ಪತ್ ಕಾಲೋನಿಯ ತಸ್ಮಿಯಾ ಎಂಬ ಬೆಳಗಾವಿಯ ಕಾಮತ್ ಗಲ್ಲಿಯ ಮದ್ರಸಾ ವಿದ್ಯಾರ್ಥಿನಿಯರು ಜಲಪಾತದಲ್ಲಿ ಸೆಲ್ಫೀ ತೆಗೆಯುತ್ತಿರುವಾಗ ಕಾಲುಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಶನಿವಾರ ಬೆಳಗ್ಗೆ ಮದರಸಾದ 40 ವಿದ್ಯಾರ್ಥಿಗಳು ಕಿತ್ವಾಡ್ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಜಲಪಾತದ ಸಮೀಪ ಗುಂಪಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
ಐವರು ವಿದ್ಯಾರ್ಥಿಗಳು ಸಮತೋಲನ ತಪ್ಪಿ ನೀರಿಗೆ ಬಿದ್ದಿದ್ದಾರೆ. ನೀರಿನ ದಡದಲ್ಲಿ ನಿಂತವರು ಸೇರಿದಂತೆ ಯಾರಿಗೂ ಈಜು ತಿಳಿದಿಲ್ಲದ ಕಾರಣ, ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಓರ್ವ ಬಾಲಕಿಯನ್ನು ಸ್ಥಳೀಯರೊಬ್ಬರು ಹೇಗಾದರೂ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದ್ದರೆ, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ದುರಂತದ ಸುದ್ದಿ ತಿಳಿದ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆವರಣದ ಸುತ್ತ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಯಿತು.
ಉಪ ಪೊಲೀಸ್ ಆಯುಕ್ತ ರವೀಂದ್ರ ಗಡಾಡಿ ಮತ್ತು ಬಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಅಣ್ಣಾಸಾಹೇಬ ಪಾಟೀಲ ಆಸ್ಪತ್ರೆಗೆ ಧಾವಿಸಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದರು.