

ಕೊಲ್ಲಂ: ಕೊಲ್ಲಂನಲ್ಲಿ ವಾಟ್ಸಾಪ್ ಸಂದೇಶಗಳ ಪ್ರಕಾರ ಮನೆಯೊಂದರಲ್ಲಿ ನಡೆಯುತ್ತಿರುವ ವಿಚಿತ್ರ ಸಂಗತಿಗಳ ಹಿಂದೆ ಹದಿಹರೆಯದ ಯುವಕನ ಕೈವಾಡವಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಮೊದಮೊದಲು ತನ್ನ ಕುಟುಂಬದವರನ್ನು ತಮಾಷೆಗಾಗಿ ಗೇಲಿ ಮಾಡಲು ಈ ರೀತಿ ಅವನು ಮಾಡಲು ಪ್ರಾರಂಭಿಸಿದ ಆದರೆ ನಂತರ ಸಮಸ್ಯೆ ಗಂಭೀರವಾಯಿತು ಎಂದು ಅವರು ಹೇಳಿದ್ದಾರೆ. ಆಮೇಲೆ ಈ ವಿಚಿತ್ರ ಘಟನೆಯ ಬಗ್ಗೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮೊದಲು ಮನೆಯವರಿಗೆ ಮನೆಯೊಳಗೆ ‘ಈ ರೀತಿ ಘಟನೆ ಆಗುತ್ತದೆ’ ಎಂದು ಮೊದಲೇ ಸಂದೇಶ ಬರುತ್ತಿತ್ತು. ಸಂದೇಶ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಅದೇ ಘಟನೆ ಸಂಭವಿಸುತ್ತಿತ್ತು. ಇದರಿಂದ ಮನೆಯವರು ಗಾಬರಿಯಾಗಿದ್ದರು.
ವಿಶೇಷ ಆ್ಯಪ್ ಬಳಸಿ ಕುಟುಂಬ ಸದಸ್ಯರ ಫೋನ್‌ಗೆ ಸಂಪರ್ಕ ಕಲ್ಪಿಸುವ ಮೂಲಕ ಆ ಯುವಕ ಮೂರು ತಿಂಗಳಿಂದ ಇದನ್ನು ಮಾಡುತ್ತಿದ್ದ. ‘ಫ್ಯಾನ್ ಆಫ್ ಆಗುತ್ತದೆ, ವಿದ್ಯುತ್ ಹೋಗುತ್ತದೆ’ ಎಂಬ ವಾಟ್ಸಾಪ್ ಸಂದೇಶಗಳು ಕುಟುಂಬಕ್ಕೆ ಬಂದಿದ್ದು, ಸಂದೇಶದಲ್ಲಿ ನಮೂದಿಸಿರುವುದು ತಕ್ಷಣವೇ ಆಗುತ್ತಿತ್ತು.
ಈ ವಿಚಿತ್ರ ಘಟನೆಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂದೇಶ ಕಳುಹಿಸಿದ ಬಾಲಕನೇ ಬಳಿಕ ಫ್ಯಾನ್ ಸ್ವಿಚ್ ಆಫ್ ಮಾಡಿದ್ದ. ಸೈಬರ್ ಪೊಲೀಸರ ವಿಸ್ತೃತ ತಪಾಸಣೆ ವೇಳೆ ಹುಡುಗನ ಫೋನ್‌ನಲ್ಲಿ ಇದಕ್ಕೆ ಸಂಬಂಧಿಸಿದ ಆ್ಯಪ್‌ಗಳು ಪತ್ತೆಯಾಗಿವೆ. ವಿಶೇಷ ಕೌನ್ಸೆಲಿಂಗ್ ಬಳಿಕ ಬಾಲಕನನ್ನು ಹೆತ್ತವರ ಜತೆಗೆ ಮನೆಗೆ ಕಳುಹಿಸಲಾಯಿತು.
ಮನೆಯಲ್ಲಿನ ಟಿವಿ ಅಥವಾ ಇತರ ಉಪಕರಣಗಳಿಗೆ ಹಾನಿಯಾಗಿರುವ ಹಿಂದೆ ಬಾಲಕನ ಕೈವಾಡವೇ ಹೊರತು ಅತೀಂದ್ರಿಯ ಮತ್ತು ಅಸಹಜವಾದದ್ದೇನೂ ಇಲ್ಲ ಎಂದು ಕೊಟ್ಟಾರಕ್ಕರ ಎಸ್‌ಐ ಪ್ರಶಾಂತ್ ತಿಳಿಸಿದ್ದಾರೆ.