ಮಂಗಳೂರು: ‘ಕವಿಭೂಷಣ ಕೆ.ಪಿ.ವೆಂಕಟಪ್ಪ ಶೆಟ್ಟರು ಹಿರಿಯ ತಲೆಮಾರಿನ ಅಗ್ರಗಣ್ಯ ಅರ್ಥಧಾರಿ; ತಲ್ಲಂಗಡಿ ಗುತ್ತು ಪಕೀರ ಶೆಟ್ಟಿ ಎಂಬುದು ಅವರ ಮನೆತನದ ಹೆಸರು. ಪ್ರಬುದ್ಧ ಲೇಖಕರಾಗಿ, ಪ್ರಸಂಗ ಕರ್ತರಾಗಿ, ಪ್ರಖರ ವಾಗ್ಮಿಯಾಗಿ, ಪುತ್ತೂರು ತಾಲೂಕು ಪಾಣಾಜೆಯಲ್ಲಿ ಆಯುರ್ವೇದ ಪಂಡಿತರಾಗಿದ್ದ ವೈದ್ಯ ವೆಂಕಪ್ಪ ಶೆಟ್ಟಿಯವರಿಗೆ ಯಕ್ಷಗಾನ ದಿಗ್ಗಜ ಎಂಬುದು ಅನ್ವರ್ಥನಾಮ.

ಅವರು ತಾಳಮದ್ದಳೆ ಕ್ಷೇತ್ರದ ಶಕಪುರುಷ. ಶೇಣಿ, ಕಾಂತ ರೈಯವರಂತಹ ಶ್ರೇಷ್ಠ ಅರ್ಥಧಾರಿಗಳು ಅವರನ್ನು ಗುರುವಾಗಿ ಅಂಗೀಕರಿಸಿದ್ದಾರೆ’ ಎಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ, ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು ಯಕ್ಷಗಾನ – ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಸೋಮವಾರದಿಂದ ನಡೆಸುತ್ತಿರುವ ಯಕ್ಷಾಂಗಣ ದಶಮಾನೋತ್ಸವ ಸಡಗರದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2022’ ಕನ್ನಡ ನುಡಿ ಹಬ್ಬದ ಎರಡನೇ ದಿನ ಕವಿಭೂಷಣ ಕೆ.ಪಿ.ವೆಂಕಪ್ಪ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು. ಹಿರಿಯ ಕಲಾಪೋಷಕ ಹಾಗೂ ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ ಸಂಸ್ಮರಣ ಜ್ಯೋತಿ ಬೆಳಗಿದರು.


ಭುಜಬಲಿ ಸಮ್ಮಾನ:
ಸಮಾರಂಭದಲ್ಲಿ ಯಕ್ಷಗಾನ ಸಂಘಟಕ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ವಿಶ್ರಾಂತ ಉಗ್ರಾಣ ಮುತ್ಸದ್ಧಿ ಬಿ.ಭುಜಬಲಿ ಧರ್ಮಸ್ಥಳ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಆಫೀಸರ್ಸ್ ಕ್ಲಬ್ ಖಜಾಂಜಿ, ಯೋಗಗುರು ಜೆ.ವಿ. ಶೆಟ್ಟಿ , ಕೆ.ಪಿ.ವೆಂಕಪ್ಪ ಶೆಟ್ಟಿ ಸ್ಮಾರಕ ಟ್ರಸ್ಟ್ ನ ಮಹಾಬಲ ಶೆಟ್ಟಿ ಕೂಡ್ಲು, ಗಣೇಶ್ ಗೋಪಾಲ್ ಕಾವ ತಲ್ಲಂಗಡಿ, ಉದ್ಯಮಿ ಎಂ.ಪಿ.ದಿನೇಶ್ ಅತಿಥಿಗಳಾಗಿದ್ದರು.

ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಮಹಿಳಾ ಕಾರ್ಯದರ್ಶಿ ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಪದಾಧಿಕಾರಿಗಳಾದ ಬೆಟ್ಟಂಪಾಡಿ ಸುಂದರ ಶೆಟ್ಟಿ, ಕರುಣಾಕರ ಶೆಟ್ಟಿ ಪಣಿಯೂರು, ಉಮೇಶ್ ಆಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಅಜ್ರಿ ಉಪಸ್ಥಿತರಿದ್ದರು.

‘ವಾನರೇಶ್ವರ ವಿಜಯ’ ತಾಳಮದ್ದಳೆ:
‘ಸಪ್ತ ವಿಜಯ’ ಸರಣಿ ಅಂಗವಾಗಿ ರವಿಚಂದ್ರ ಕನ್ನಡಿಕಟ್ಟೆ ಅವರ ಭಾಗವತಿಕೆಯಲ್ಲಿ ‘ವಾನರೇಶ್ವರ ವಿಜಯ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು.