Saturday, January 18, 2025
Homeಯಕ್ಷಗಾನಕಟೀಲು ಮೇಳಗಳ 'ಕಾಲಮಿತಿ' ಪ್ರದರ್ಶನದ ಪ್ರಥಮ ತಿರುಗಾಟ - ಇಂದು ಕಟೀಲಿನಲ್ಲಿ ದೇವರ ಪ್ರಥಮ ಸೇವೆಯಾಟ...

ಕಟೀಲು ಮೇಳಗಳ ‘ಕಾಲಮಿತಿ’ ಪ್ರದರ್ಶನದ ಪ್ರಥಮ ತಿರುಗಾಟ – ಇಂದು ಕಟೀಲಿನಲ್ಲಿ ದೇವರ ಪ್ರಥಮ ಸೇವೆಯಾಟ ‘ಪಾಂಡವಾಶ್ವಮೇಧ’ – ಕಾಲಮಿತಿಯಲ್ಲಿ ‘ದೇವಿ ಮಹಾತ್ಮೆ’ ಪ್ರದರ್ಶನ ಹೇಗೆ?

ಕಟೀಲು ಮೇಳಗಳು ತಿರುಗಾಟಕ್ಕೆ ಸನ್ನದ್ಧವಾಗಿ ನಿಂತಿವೆ. ಇದು ಕಟೀಲು ಮೇಳಗಳ ಕಾಲಮಿತಿ ಪ್ರದರ್ಶನಗಳ ಪ್ರಥಮ ತಿರುಗಾಟ.

ಆದ್ದರಿಂದ ಈ ತಿರುಗಾಟವು ಕಟೀಲು ಆರು ಮೇಳಗಳ ಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ಹೊಸ ಅನುಭವ. ಮಾತ್ರವಲ್ಲದೆ ಆಡಳಿತ ಮಂಡಳಿಯು ಕೂಡ ಈ ಹೊಸ ಪ್ರಯೋಗವನ್ನು ಹೇಗೆ ನಿಭಾಯಿಸುತ್ತದೆ ಮತ್ತು ಪ್ರಸಂಗಗಳನ್ನು ಕಾಲಮಿತಿಗೆ ಹೇಗೆ ಹೊಂದಿಸುತ್ತದೆ ಎಂಬ ಕುತೂಹಲವೂ ಜನರಲ್ಲಿದೆ.

ಅದರಲ್ಲೂ ‘ದೇವಿ ಮಹಾತ್ಮೆ’ಯಂತಹಾ ಪ್ರಸಂಗದಲ್ಲಿ ಯಾವ ಭಾಗವನ್ನು ಬಿಡಬೇಕು ಮತ್ತು ಯಾವ ಭಾಗಕ್ಕೆ ಕತ್ತರಿ ಪ್ರಯೋಗ ಮಾಡಬೇಕು ಎಂಬುದು ಒಂದೆರಡು ಪ್ರದರ್ಶನಗಳನ್ನು ಆಡಿದ ನಂತರವೇ ಖಚಿತವಾಗಿ ತೀರ್ಮಾನಿಸಲು ಸಾಧ್ಯ. ಈ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಗಳಾಗಿವೆ.

ಆದರೆ ಸಭೆಯಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವುದೇ ಬೇರೆ. ಪ್ರದರ್ಶನಕ್ಕೆ ಹೊಂದಿಸುವ ಪ್ರಾಯೋಗಿಕ ವಿಧಾನವೇ ಬೇರೆ. ಪ್ರಯೋಗ ಎಂಬುದು ವಿದ್ವಾಂಸರ ಸೂಕ್ತ ಸಲಹೆಯೊಂದಿಗೆ, ಕಲಾವಿದರ  ಸಹಕಾರದಿಂದಲೇ ನಡೆಯಬೇಕಾಗುತ್ತದೆ.

ಆದುದರಿಂದ ಕಟೀಲು ಮೇಳದ ಈ ವರ್ಷದ ತಿರುಗಾಟವನ್ನು ಪ್ರೇಕ್ಷಕರು ಯಾವ ರೀತಿ ಒಪ್ಪಿಕೊಳ್ಳುತ್ತಾರೆ ಅಥವಾ ಸ್ವೀಕರಿಸುತ್ತಾರೆ ಎಂಬುದು ಒಂದು ಆಸಕ್ತಿದಾಯಕ ವಿಚಾರ. ಅದರಲ್ಲಿಯೂ ಕಟೀಲು ಮೇಳಗಳು ಹೆಚ್ಚಾಗಿ  ಪ್ರದರ್ಶನ ನೀಡುವ ಪ್ರಸಂಗವಾದ ‘ದೇವಿ ಮಹಾತ್ಮೆ’ಯ ಪ್ರದರ್ಶನದ ಬಗ್ಗೆ ಪ್ರೇಕ್ಷಕರಿಗೆ ವಿಪರೀತ ಕುತೂಹಲ ಇದೆ. ಇದಕ್ಕಾಗಿಯೇ ಈ ಬಾರಿ ಆ ಪ್ರಸಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಹಾಜರಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

ಇಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಸೇವೆಯಾಟದ ಪ್ರಯುಕ್ತ ಸಂಜೆ 5 ಘಂಟೆಗೆ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಘಂಟೆಗೆ ಗೆಜ್ಜೆ ಕಟ್ಟುವುದು ಮತ್ತು ಘಂಟೆ 6.30 ಕ್ಕೆ ದೇವರು ದೇವಸ್ಥಾನದಿಂದ ಹೊರಡುವುದು ಮತ್ತು ರಾತ್ರಿ 8.30 ಘಂಟೆಗೆ ಚೌಕಿಪೂಜೆ ನಡೆಯಲಿದೆ. ಅನಂತರ ಬೆಳಗ್ಗೆ 5.30 ರವರೆಗೆ ಆರೂ ಮೇಳಗಳ  ‘ಪಾಂಡವಾಶ್ವಮೇಧ’  ಯಕ್ಷಗಾನ ಪ್ರದರ್ಶನ ನಡೆಯಲಿದೆ.

ನಾಳೆಯಿಂದ ಕಾಲಮಿತಿ ಪ್ರದರ್ಶನ ನಡೆಯಲಿದೆ. ಸಂಜೆ 5.45ಕ್ಕೆ ಚೌಕಿಪೂಜೆ, ಬಳಿಕ 6.45ರವರೆಗೆ ಪೂರ್ವರಂಗ ಪ್ರದರ್ಶನದ ನಂತರ ಪ್ರಸಂಗ ಆರಂಭವಾಗಲಿದೆ. ಯಕ್ಷಗಾನ ರಾತ್ರಿ 12.30 ರವರೆಗೆ ನಡೆಯಲಿದ್ದು ಆಮೇಲೆ ಸಮಾಪ್ತಿಗೊಳ್ಳಲಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments