ಸುಳ್ಯ ನಗರದ ಬೀರಮಂಗಲ ಬಾಡಿಗೆ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಗೋಣಿಚೀಲದಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಮೃತದೇಹ ಇಮ್ರಾನ್ ಎಂಬವನ ಪತ್ನಿಯದ್ದು ಎಂದು ಗೊತ್ತಾಗಿದೆ.

ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬವನು ಸುಳ್ಯ ನಗರದ ಬೀರಮಂಗಲ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ. ಇವನು ಕಳೆದ ಆರು ತಿಂಗಳಿನಿಂದ ಇಲ್ಲಿ ವಾಸ ಮಾಡುತ್ತಿದ್ದ ಎನ್ನಲಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ಊರಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಮನೆಗೆ ಬೀಗ ಹಾಕಿ ಹೊರಟಿದ್ದ. ಈ ಬಗ್ಗೆ ಹೋಟೆಲ್ ನವರಲ್ಲಿ ತಿಳಿಸಿ ಹೋಗಿದ್ದ.
ಆದರೆ ಇವನೊಬ್ಬನೇ ಬೀಗ ಹಾಕಿ ಹೋದುದನ್ನು ಗಮನಿಸಿದ ಪಕ್ಕದ ಮನೆಯವರಿಗೆ ಅನುಮಾನ ಕಾಡಿತು. ಇವನ ಪತ್ನಿ ಎಲ್ಲಿ ಎಂದು ಆಲೋಚಿಸಿದರು. ಅದೂ ಅಲ್ಲದೆ ನಿನ್ನೆ ರಾತ್ರಿ ಮನೆಯೊಳಗೆ ಕಿರಿಚಾಡುವ ಶಬ್ದ ಕೇಳಿದುದರಿಂದ ಅವರು ಭಯಭೀತರಾಗಿ ಇಮ್ರಾನ್ ಕೆಲಸ ಮಾಡುತ್ತಿದ್ದ ಹೋಟೆಲ್ ನವರಿಗೆ ವಿಷಯ ತಿಳಿಯುವಂತೆ ಮಾಡಿದ್ದಾರೆ.
ಅವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆಗಮಿಸಿ ಮನೆಯ ಬೀಗ ಒಡೆದು ಮನೆಯೊಳಗೆ ಆಮೂಲಾಗ್ರ ಪರಿಶೀಲನೆ ನಡೆಸಿದಾಗ ಮನೆಯ ಮೂಲೆಯೊಂದರಲ್ಲಿ ಗೋಣಿಚೀಲದಲ್ಲಿ ಏನೋ ತುಂಬಿಸಿಟ್ಟ ಹಾಗೆ ಕಾಣಿಸಿತು.
ಅದರೊಳಗೆ ಇಮ್ರಾನ್ ಪತ್ನಿಯ ಮೃತದೇಹವನ್ನು ಕಂಡು ಪೊಲೀಸರು ಅವಾಕ್ಕಾಗಿದ್ದರು. ಆದರೆ ಅಷ್ಟರಲ್ಲಿ ಇಮ್ರಾನ್ ಪರಾರಿಯಾಗಿದ್ದ. ಸ್ಥಳಕ್ಕೆ ಶ್ವಾನದಳ, ಫಿಂಗರ್ ಫಿಂಗರ್ ಪ್ರಿಂಟ್ ತಜ್ಞರು ಆಗಮಿಸಿದ್ದಾರೆ. ಪೊಲೀಸರು ಇಮ್ರಾನ್ ಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ.
