ಪುತ್ತೂರು: ಶಿಕ್ಷಣವೆನ್ನುವುದು ಕೇವಲ ಪಠ್ಯಪುಸ್ತಕ ಹಾಗೂ ಅಂಕಪಟ್ಟಿಗೆ ಸೀಮಿತವಾಗಿರದೆ ರಾಷ್ಟ್ರಭಕ್ತಿಯ ಕಿಚ್ಚನ್ನು ವಿದ್ಯಾರ್ಥಿಗಳ ಧಮನಿ ಧಮನಿಗಳಲ್ಲಿ ಹರಿಸುವ ವ್ಯವಸ್ಥೆಯಾಗಬೇಕು. ವಿದ್ಯಾರ್ಥಿಗಳು ದೇಶಕ್ಕಾಗಿ ತುಡಿಯುವಂತಗಾಬೇಕು. ಸ್ವಾರ್ಥವನ್ನು ತ್ಯಜಿಸಿ, ದೇಶಕ್ಕೋಸ್ಕರ ಪ್ರಾಣವನ್ನೂ ತ್ಯಾಗ ಮಾಡುವ ಸಮರ್ಪಣಾ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಬೆಳೆಯಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರದಂದು ರಾಷ್ಟ್ರಜಾಗೃತಿ ಬಗೆಗೆ ವಿಶೇಷ ಉಪನ್ಯಾಸ ನೀಡಿದರು.
ಭಾರತ ಹಾಗೂ ಇಸ್ರೇಲ್ ಅವಿನಾಭಾವ ಸಂಬಂಧವನ್ನು ಹೊಂದಿದೆ. ನಂಬಿಕೆ, ಬಹುದೇವತಾರಾಧನೆ, ಸಂಸ್ಕೃತಿ ಮುಂತಾದ ವಿಚಾರಗಳಲ್ಲಿ ಸಾಮ್ಯತೆಯನ್ನು ಹೊಂದಿದೆ. ಇಸ್ರೇಲ್ ರಾಷ್ಟ್ರದ ಪ್ರಜೆಗಳು ತಮ್ಮ ಜನಾಂಗದ ಮೇಲೆ ಸಾವಿರ ನರಮೇಧಗಳು ನಡೆದರೂ, ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಯಿಂದಾಗಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡರು. ಕೃಷಿ, ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ, ಹಣಕಾಸು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರಿದು ಜಗತ್ತಿಗೆ ಕೊಡುಗೆಯನ್ನು ನೀಡಿದರು. ಪುಟ್ಟ ರಾಷ್ಟ್ರ ಇಸ್ರೇಲ್‌ನ ಪ್ರಜೆಗಳ ಒಗ್ಗಟ್ಟು ಭಾರತೀಯರಿಗೆ ಪ್ರೇರಣೆಯಾಗಬೇಕು ಎಂದರು.
ಉತ್ತಮ ನಾಯಕ ಮಾತ್ರ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯ. ಚುನಾವಣೆಯಲ್ಲಿ ಪ್ರಜೆಗಳು ಎಚ್ಚರವಹಿಸಿ ನಾಯಕನನ್ನು ಆಯ್ಕೆಮಾಡಬೇಕು. ಹಾಗೆಯೇ, ದೇಶದ ನಾಗರಿಕರು ರಾಷ್ಟ್ರಕ್ಕೆ ಬದ್ಧರಾಗಿರಬೇಕು. ನಾನಿರುವಂತದ್ದೇ ದೇಶಕ್ಕಾಗಿ ಎಂಬ ಪರಿಕಲ್ಪನೆಯು ಜಾಗೃತಗೊಳ್ಳಬೇಕು. ಏಕತೆಯಿಂದ ಮಾತ್ರ ರಾಷ್ಟ್ರ ಉಳಿಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಅಂಬಿಕಾ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.
