Saturday, January 18, 2025
Homeಯಕ್ಷಗಾನಅನುಭವೀ ಮದ್ದಳೆಗಾರರು, ಯಕ್ಷಗಾನ ವಾದ್ಯೋಪಕರಣಗಳ ತಯಾರಕರು - ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್

ಅನುಭವೀ ಮದ್ದಳೆಗಾರರು, ಯಕ್ಷಗಾನ ವಾದ್ಯೋಪಕರಣಗಳ ತಯಾರಕರು – ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಹಿರಿಯ ಮದ್ದಳೆಗಾರರು. ಕಲಾಕ್ಷೇತ್ರದಲ್ಲಿ ಶ್ರೀಯುತರು ಸುಮಾರು ನಾಲ್ಕೂವರೆ ದಶಕಗಳ ಅನುಭವಿ. ವೇಷಧಾರಿಯಾಗಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ ಇವರು ಬಳಿಕ ಮದ್ದಳೆಗಾರನಾಗಿ ಕಾಣಿಸಿಕೊಂಡು ಪ್ರಸಿದ್ಧರಾದರು. ಉಪ್ಪಳ, ಕಟೀಲು, ಸುಂಕದಕಟ್ಟೆ, ಸುರತ್ಕಲ್, ಮಧೂರು, ಮಲ್ಲ ಮತ್ತು ಧರ್ಮಸ್ಥಳ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿ ಅನುಭವವನ್ನು ಗಳಿಸಿಕೊಂಡವರು. ತೆಂಕುತಿಟ್ಟಿನ ಹೆಚ್ಚಿನ ಹಿರಿಯ ಭಾಗವತರುಗಳ ಹಾಡುಗಾರಿಕೆಗೆ ಚೆಂಡೆ ಮದ್ದಲೆಗಳನ್ನು ನುಡಿಸುವ ಅವಕಾಶವು ಇವರಿಗೆ ದೊರೆತಿತ್ತು.

ಯಕ್ಷಗಾನ ಕಲೆಯ ವಾದ್ಯೋಪಕರಣಗಳಾದ ಚೆಂಡೆ ಮತ್ತು ಮದ್ದಳೆಗಳ ನುಡಿಸುವಿಕೆಯಲ್ಲಿ ಇವರು ಪರಿಣತರು. ಈ ವಾದ್ಯೋಪಕರಣಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತ. ಹೊಸ ಚೆಂಡೆ ಮತ್ತು ಮದ್ದಲೆಗಳನ್ನು ತಯಾರಿಸಿ ಪ್ರದರ್ಶನಕ್ಕಾಗಿ ಒದಗಿಸಿ ಕೊಡುತ್ತಾರೆ. ಹಳತನ್ನು ದುರಸ್ಥಿಗೊಳಿಸಿ ಕೊಡುತ್ತಾರೆ. ಚೆಂಡೆಯ ಕೋಲುಗಳನ್ನು ಬೇಕಾದಂತೆ ಸಿದ್ಧಗೊಳಿಸಿ ಕೊಡುತ್ತಾರೆ. ಇವರು ಸಿದ್ಧಗೊಳಿಸಿದ ಚೆಂಡೆ, ಮದ್ದಳೆ, ಚೆಂಡೆಯ ಕೋಲುಗಳು ಪ್ರದರ್ಶನಗಳಲ್ಲಿ ಬಳಕೆಯಾಗುವುದನ್ನು ನಾವು ಗಮನಿಸಬಹುದು. ಈ ವಿಭಾಗದಲ್ಲಿ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಬಿಡುವಿಲ್ಲದ ದುಡಿಮೆಯು ಪ್ರಶಂಸನೀಯವಾದುದು.

1996ರಲ್ಲಿ ಮೇಳದ ವ್ಯವಸಾಯಕ್ಕೆ ವಿದಾಯ ಹೇಳಿದ ಬಳಿಕ ಯಕ್ಷಗಾನ ಹಿಮ್ಮೇಳ ಪರಿಕರಗಳ ತಯಾರಿಕೆಯಲ್ಲಿ ಪರಿಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಕಲಿಕಾಸಕ್ತ ಮತ್ತು ವ್ಯವಸಾಯ ಮಾಡುತ್ತಿರುವ ಭಾಗವತರುಗಳಿಗೆ, ಅವರ ಅಭಿರುಚಿಗೆ ತಕ್ಕಂತೆ ಶ್ರುತಿಬದ್ಧವಾದ ಕಂಚಿನ ಜಾಗಟೆಯನ್ನೂ ಇವರು ತರಿಸಿಕೊಡುತ್ತಾರೆ. ಗುರುವಾಗಿ ಕಲಿಕಾಸಕ್ತರಿಗೆ ಭಾಗವತಿಕೆ ಮತ್ತು ಚೆಂಡೆ ಮದ್ದಳೆ ನುಡಿಸುವಲ್ಲಿ ತರಬೇತಿಯನ್ನೂ ನೀಡುತ್ತಿದ್ದಾರೆ. ಮದ್ದಳೆಗಾರರಾಗಿ, ಯಕ್ಷಗಾನ ವಾದ್ಯೋಪಕರಣಗಳ ತಯಾರಕರಾಗಿ, ಗುರುವಾಗಿ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಕಲಾಭಿಮಾನಿಗಳಿಗೆಲ್ಲರಿಗೂ ಪರಿಚಿತರು.

ಅನುಭವೀ ಮದ್ದಳೆಗಾರ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಹುಟ್ಟೂರು ಕಾಸರಗೋಡು ಜಿಲ್ಲೆಯ ಮೈರೆ ಗ್ರಾಮದ ಶೇಣಿ. (ಯಕ್ಷಗಾನ ರಂಗದ ಭೀಷ್ಮ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರ ಹುಟ್ಟೂರು ಇದೇ ಶೇಣಿ) 1960ನೇ ಇಸವಿ ಶೇಣಿ ಶ್ರೀ ಮಹಾಬಲ ಭಟ್ ಮತ್ತು ಶ್ರೀಮತಿ ಶಾರದಾ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಶ್ರೀ ಮಹಾಬಲ ಭಟ್ಟರು ಕೃಷಿಕರೂ ಯಕ್ಷಗಾನ ಕಲಾವಿದರೂ ಆಗಿದ್ದರು. ಇವರು ಮದ್ದಳೆಗಾರರಾಗಿ ಕೂಡ್ಲು ಮತ್ತು ಮುಲ್ಕಿ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಯಕ್ಷಗಾನ ಹಿಮ್ಮೇಳದಲ್ಲಿ ಹೆಸರುವಾಸಿಯಾದ ಕುದ್ರೆಕೋಡ್ಲು ಮನೆಯವರು ಇವರಿಗೆ ಬಂಧುಗಳು. ಶೇಣಿ ಮಹಾಬಲ ಭಟ್ಟರ ಅಕ್ಕ ಕುದ್ರೆಕೋಡ್ಲು ಹಿರಿಯ ರಾಮ ಭಟ್ಟರ ಪತ್ನಿ. ಹೀಗೆ ಕುದ್ರೆಕೋಡ್ಲು ಮನೆಯವರೊಂದಿಗೆ ಶೇಣಿ ಮನೆಯವರಿಗೆ ಬಂಧುತ್ವವು ಬೆಸೆದಿತ್ತು. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ವಿದ್ಯಾರ್ಜನೆ ಎಸ್ಸೆಸ್ಸೆಲ್ಸಿ ವರೆಗೆ. ಏಳನೇ ತರಗತಿ ವರೆಗೆ ಶೇಣಿ ಶಾಲೆಯಲ್ಲಿ. ಎಂಟನೇ ತರಗತಿ ಉಪ್ಪಿನಂಗಡಿ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ. ಬಾಲ್ಯದಲ್ಲಿ ಇವರಿಗೆ ಯಕ್ಷಗಾನಾಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡುವುದರ ಜತೆಗೆ ತಂದೆಯವರಿಂದ ಮದ್ದಳೆವಾದನದ ಪಾಠವೂ ಆಗಿತ್ತು. ಆದರೆ ಇವರಿಗೆ ಮುಮ್ಮೇಳದಲ್ಲಿ ಆಸಕ್ತಿ ಉಂಟಾಗಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ ವೇಷ ಮಾಡುವ ಅವಕಾಶವೂ ಸಿಕ್ಕಿತ್ತು.

ಆಗ ಖ್ಯಾತ ತಾಳಮದ್ದಳೆ ಅರ್ಥಧಾರಿ ಪೆರ್ಲ ಶ್ರೀ ಕೃಷ್ಣ ಭಟ್ಟರು (ಹಿಂದಿ ಪಂಡಿತರು) ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಸೂಚನೆಯಂತೆ ಹಿರಿಯ ಕಲಾವಿದ ಪಡ್ರೆ ಬದಿ ಶ್ರೀ ಕುಂಞಪ್ಪ ನಾಯ್ಕ ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆಯ ಅಭ್ಯಾಸ. (ಇವರ ಪುತ್ರ ಪಡ್ರೆ ಶ್ರೀಧರ ಪ್ರಸ್ತುತ ಕಟೀಲು ಮೇಳದ ಮದ್ದಳೆಗಾರ) ಪೆರ್ಲ ಕೃಷ್ಣ ಭಟ್ಟರ ನಿರ್ದೇಶನವೂ ಸಿಕ್ಕಿತ್ತು. ಶಾಲಾ ಪ್ರದರ್ಶನ, ಮಾಗದ ವಧೆ ಪ್ರಸಂಗದಲ್ಲಿ ಮಾಗಧನಾಗಿ ರಂಗಪ್ರವೇಶ ಮಾಡಿದ್ದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಜನೆಯ ಬಳಿಕ ಕುಂಬಳೆ ಶ್ರೀ ಸೇಸಪ್ಪ ಸಂಚಾಲಕತ್ವದ ಉಪ್ಪಳ ಶ್ರೀ ಭಗವತೀ ಮೇಳದಲ್ಲಿ ಎರಡು ವರ್ಷ ತಿರುಗಾಟ. ಮೊದಲ ವರ್ಷ ವೇಷಧಾರಿಯಾಗಿ ತಮ್ಮ ಪಾಲಿಗೆ ಸಿಕ್ಕ ಚಿಕ್ಕ ಚಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಹಿಮ್ಮೇಳದತ್ತ ಒಲವು ಉಂಟಾಗಿ ಮದ್ದಳೆಗಾರನಾಗಬೇಕೆಂಬ ಆಸೆಯಾಗಿತ್ತು. ತಂದೆಯವರಿಂದ ಈ ಬಗೆಗೆ ತರಬೇತಿಯೂ ಸಿಕ್ಕಿತ್ತು. ಬಂಧುಗಳಾದ ಪೆರುವಾಯಿ ಶ್ರೀ ಕೃಷ್ಣ ಭಟ್ಟರ ನಿರ್ದೇಶನವೂ ಸಿಕ್ಕಿತ್ತು. ಇವರಿಂದಲೇ ಮದ್ದಳೆ ನುಡಿತಗಳ ಬಾಯಿತಾಳವನ್ನು ಅಭ್ಯಸಿಸಿದ್ದರು.

ಎರಡನೇ ವರ್ಷ ಉಪ್ಪಳ ಮೇಳದಲ್ಲಿ ಮದ್ದಳೆಗಾರನಾಗಿ ತಿರುಗಾಟ. ಆಗ ಹಿರಿಯ ಮದ್ದಳೆಗಾರರಾದ ಮಳಿ ಶ್ರೀ ಶ್ಯಾಮ ಭಟ್ಟರ ಒಡನಾಟವೂ, ನಿರ್ದೇಶನವೂ ಸಿಕ್ಕಿತ್ತು. ಉಪ್ಪಳ ಮೇಳದಲ್ಲಿ ಎರಡು ವರ್ಷ ತಿರುಗಾಟದ ಬಳಿಕ ಕಟೀಲು ಮೇಳ ಸೇರಲು ಶ್ರೀ ಶೇಣಿ ಮಹಾಬಲ ಭಟ್ಟರು ಸೂಚನೆ ನೀಡಿದ್ದರು. ತೀರ್ಥರೂಪರ ಸಲಹೆಯಂತೆ ಶೇಣಿ ಸುಬ್ರಹ್ಮಣ್ಯ ಭಟ್ಟರು ಕಟೀಲು ಮೇಳದಲ್ಲಿ ವ್ಯವಸಾಯ ಮಾಡುವ ನಿರ್ಧಾರವನ್ನು ಕೈಗೊಂಡರು. ಕಟೀಲು ಎರಡನೇ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ಮೊದಲ ವರ್ಷ ಅಡೂರು ಸುಂದರ ರಾಯರ ಒಡನಾಟ, ಸಹಕಾರವು ಸಿಕ್ಕಿತ್ತು. ಎರಡನೇ ವರ್ಷ ಶ್ರೀ ಪೆರುವಾಯಿ ನಾರಾಯಣ ಭಟ್ಟರ ಮತ್ತು ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರ ಒಡನಾಟವು ಸಿಕ್ಕಿತ್ತು.

ಕಟೀಲು ಮೇಳದ ತಿರುಗಾಟದ ಬಳಿಕ ಸುಂಕದಕಟ್ಟೆ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಇಲ್ಲಿ ಪುತ್ತಿಗೆ ತಿಮ್ಮಪ್ಪ ರೈಗಳ ಮತ್ತು ತಲೆಂಗಳ ಗೋಪಾಲಕೃಷ್ಣ ಭಟ್ಟರ ಒಡನಾಟವು ಸಿಕ್ಕಿತ್ತು. ಮೂರು ತಿಂಗಳ ತಿರುಗಾಟದ ಬಳಿಕ ಮುಖ್ಯ ಮದ್ದಳೆಗಾರರಾಗಿ ವ್ಯವಸಾಯ ಮಾಡಲು ಅವಕಾಶವಾಗಿತ್ತು. ಬಳಿಕ ಸುರತ್ಕಲ್ ಮೇಳದಲ್ಲಿ ಮೂರು ವರ್ಷ ವ್ಯವಸಾಯ. ಈ ಸಂದರ್ಭದಲ್ಲಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣ ಆಚಾರ್ಯ, ಶಿರಂಕಲ್ಲು ನಾರಾಯಣ ಭಟ್ಟರೊಂದಿಗೆ ವ್ಯವಸಾಯ ಮಾಡಲು ಅವಕಾಶವಾಗಿತ್ತು.

ಬಳಿಕ ಮಧೂರು ಮೇಳದಲ್ಲಿ ಒಂದು  ಇಲ್ಲಿ ಕಾಸರಗೋಡು ವೆಂಕಟ್ರಮಣ ಅವರೊಂದಿಗೆ ವ್ಯವಸಾಯ. ಬಳಿಕ ಒಂದು ವರ್ಷ ಪಟ್ಲಗುತ್ತು ಮಹಾಬಲ ಶೆಟ್ರ ನಾಯಕತ್ವದ ಮಲ್ಲ ಮೇಳದಲ್ಲಿ ವ್ಯವಸಾಯ. ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ಐದು ವರ್ಷ ವ್ಯವಸಾಯ. ಇಲ್ಲಿ ಕಡತೋಕಾ ಮಂಜುನಾಥ ಭಾಗವತ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಸುಬ್ರಹ್ಮಣ್ಯ ಶಾಸ್ತ್ರಿ ಅವರೊಂದಿಗೆ ವ್ಯವಸಾಯ. ಇಲ್ಲಿ ಮುಮ್ಮೇಳದ ಖ್ಯಾತ ಕಲಾವಿದರ ಒಡನಾಟವೂ ದೊರೆತಿತ್ತು. ಧರ್ಮಸ್ಥಳ ಮೇಳದ ನಂತರ ಒಂದು ವರ್ಷ ಕರ್ನಾಟಕ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಮಯದಲ್ಲಿ ದಿನೇಶ ಅಮ್ಮಣ್ಣಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಮೊದಲಾದವರ ಒಡನಾಟ ದೊರಕಿತ್ತು.

ಮನೆಯ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವ ಅನಿವಾರ್ಯತೆಯಿಂದ 1996ರಲ್ಲಿ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದರು.  ಬಹು ಬೇಡಿಕೆಯ ಕಲಾವಿದನಾಗಿರುವಾಗಲೇ ಇವರು ಮೇಳದ ವ್ಯವಸಾಯವನ್ನು ನಿಲ್ಲಿಸಬೇಕಾಗಿ ಬಂದಿತ್ತು. ಆದರೂ ಯಕ್ಷಗಾನದಿಂದ ನಿವೃತ್ತರಾಗದೆ ವ್ಯವಸಾಯವನ್ನು ಮಾಡುತ್ತಿದ್ದಾರೆ. 1996ರ ಬಳಿಕ ಅತಿಥಿ ಕಲಾವಿದನಾಗಿ ಹವ್ಯಾಸೀ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಬಂದಿರುತ್ತಾರೆ.  ಅಲ್ಲದೆ ತಾನು ಬಹುವಾಗಿ ಪ್ರೀತಿಸುವ ಯಕ್ಷಗಾನದ ವಾದ್ಯೋಪಕರಣಗಳಾದ ಚೆಂಡೆ ಮದ್ದಳೆಯನ್ನು ತಯಾರಿಸುವ ಕೆಲಸದಲ್ಲೂ ತೊಡಗಿಸಿಕೊಂಡು ಬಂದಿರುತ್ತಾರೆ. ಚೆಂಡೆಯ ಕೋಲುಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತ. ಈ ವಿಭಾಗದಲ್ಲೂ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಬಹು ಬೇಡಿಕೆಯ ಕಲಾವಿದರು.

ಈ ಪರಿಕರಗಳನ್ನು ತಯಾರಿಸುವಲ್ಲಿ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 2020-21ರಿಂದ ತೊಡಗಿ ಕಾಯರ್ ಕಟ್ಟೆ ಅಯ್ಯಪ್ಪ ಭಜನಾ ಮಂದಿರ, ಸಜಂಕಿಲ ಶ್ರೀ ದುರ್ಗಾ ಯುವಕ ಮಂಡಲ ಮೊದಲಾದ ಕಡೆ ಹಿಮ್ಮೇಳ ತರಗತಿಗಳನ್ನೂ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ ಮೂರು ವರ್ಷ ಭಾಗವಹಿಸಿರುತ್ತಾರೆ. ಒಂದು ಬಾರಿ ವಿದೇಶಯಾತ್ರೆಯನ್ನೂ ಕೈಗೊಂಡಿದ್ದಾರೆ. ಸಂಘಟಕರಾದ ಶ್ರೀ ಎಸ್.ಎನ್. ಪಂಜಾಜೆ ಅವರ ನೇತೃತ್ವದಲ್ಲಿ ದೆಹಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರದರ್ಶನದಲ್ಲೂ ಭಾಗವಹಿಸಿರುತ್ತಾರೆ. 1997ರಿಂದ ಇವರು ಬಾಯಾರು ಸಮೀಪದ ಉಳುವಾನ ಎಂಬಲ್ಲಿ ವಾಸಿಸುತ್ತಿದ್ದಾರೆ. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಮೇಳದ ವ್ಯವಸಾಯದಲ್ಲಿ, ಹಿರಿಯ ಮದ್ದಳೆಗಾರರ ಒಡನಾಟದಲ್ಲಿ ಕಲಿಯುತ್ತಾ ಹಿಮ್ಮೇಳ ವಿದ್ಯೆಗಳನ್ನು ಕಲಿತು ಕರಗತ ಮಾಡಿಕೊಂಡವರು. ಬಾಲ್ಯದಲ್ಲಿ ತೀರ್ಥರೂಪರಿಂದ ಬಾಲಪಾಠ. ಬಳಿಕ ಬಂಧುಗಳಾದ ಕಿರಿಯ ಕುದ್ರೆಕೊಡ್ಲು ರಾಮಭಟ್ಟರಿಂದಲೂ ತರಬೇತಿ ಪಡೆದಿದ್ದರು. ಮೇಳದ ವ್ಯವಸಾಯದುದ್ದಕ್ಕೂ ಸಹ ಕಲಾವಿದರ ಒಡನಾಟವು ಕಲಿಕೆಗೆ ಅನುಕೂಲವಾಗಿತ್ತು.

ಕಲಾ ಬದುಕಿನಲ್ಲೂ ಸಾಂಸಾರಿಕವಾಗಿಯೂ ಶ್ರೀಯುತರು ತೃಪ್ತರು. ಇವರ ಪತ್ನಿ ಶ್ರೀಮತಿ ಶೈಲಜಾ. ಇವರು ಗೃಹಣಿ. ಇವರು ಶ್ರೀ ಸುಬ್ರಾಯ ಭಟ್ ತಾಳ್ತಜೆ ಮತ್ತು ಶ್ರಿಮತಿ ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರಿ. ಇವರ ತವರುಮನೆ ತಾಳ್ತಜೆ. ಯಕ್ಷಗಾನ ಹಿನ್ನೆಲೆ ಇರುವ ಮನೆ ಇದು. ಇವರ ದೊಡ್ಡಪ್ಪ ತಾಳ್ತಜೆ ಶ್ರೀ ತಿರುಮಲೇಶ್ವರ ಭಟ್ಟರು ಭಾಗವತರಾಗಿ ಶ್ರೀ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡಿದವರು. ಇವರು ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು. ಶ್ರೀಮತಿ ಶೈಲಜಾ ಅವರ ತಂದೆ ಶ್ರೀ ಸುಬ್ರಾಯ ಭಟ್ ತಾಳ್ತಜೆ ಹವ್ಯಾಸಿ ಮದ್ದಳೆಗಾರರು. ಇವರೂ ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀಮತಿ ಶೈಲಜಾ ದಂಪತಿಗಳಿಗೆ ಮೂವರು ಪುತ್ರರು. ಹಿರಿಯ ಪುತ್ರ ಶ್ರೀ ರವಿಕಿರಣ. ಇವರು ಪುತ್ತೂರಿನ ಅನಘ ಇಂಡಸ್ಟ್ರೀಸ್ ಸಂಸ್ಥೆಯ ಮಾಲೀಕರು. ಇವರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತಿದ್ದು ವೇಷ ಮಾಡಿ ಅನುಭವ ಉಳ್ಳವರು. ಇವರ ಪತ್ನಿ ಶ್ರೀಮತಿ ಶೃತಿ. ರವಿಕಿರಣ,ಶೃತಿ ದಂಪತಿಗಳ ಪುತ್ರ ಮಾಸ್ಟರ್ ವಿಹಾನ್ ಕೃಷ್ಣ. ದ್ವಿತೀಯ ಪುತ್ರ ಶ್ರೀ ಮುರಳಿಕೃಷ್ಣ. ಇವರು ಮಂಗಳೂರಿನಲ್ಲಿ ಉದ್ಯೋಗಿ. ಇವರು ಯಕ್ಷಗಾನ ಹಿಮ್ಮೇಳ ಕಲಿತು ಚೆಂಡೆ ಬಾರಿಸುವ ಹವ್ಯಾಸವನ್ನು ಹೊಂದಿರುತ್ತಾರೆ. ಇವರ ಪತ್ನಿ ಶ್ರೀಮತಿ ಜಯದುರ್ಗಾ. ಇವರು ಗೃಹಣಿ. ತೃತೀಯ ಪುತ್ರ ಶ್ರೀ ಸತ್ಯನಾರಾಯಣ. ಇವರು ಬೆಂಗಳೂರಿನಲ್ಲಿ ಕಂಪೆನಿ ಸೆಕ್ರೆಟರಿ (CS) ಓದುತ್ತಿದಾರೆ. ನಾಟ್ಯ ಕಲಿತು ವೇಷ ಮಾಡುವ ಹವ್ಯಾಸವು ಇವರಿಗಿದೆ. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಮನೆಯವರಿಗೆಲ್ಲಾ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಕರುಣಿಸಲಿ. ಅವರ ಮನೋಕಾಮನೆಗಳೆಲ್ಲವೂ ಈಡೇರಲಿ. ಶೇಣಿ ಸುಬ್ರಹ್ಮಣ್ಯ ಭಟ್ಟರಿಂದ ಕಲಾ ವ್ಯವಸಾಯವು ನಿರಂತರವಾಗಿ ನಡೆಯಲಿ. ಕಲಾ ಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್, ಉಳುವಾನ, ಅಂಚೆ ಚಿಪ್ಪಾರು, ವಯಾ ಉಪ್ಪಳ, ಮೊಬೈಲ್:8547206905

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ,

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್:9164487083

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments