ಪುತ್ತೂರು: ಬಾಲ್ಯದಲ್ಲಿ ಮಕ್ಕಳ ಮನಸ್ಸು ಹಸಿ ಮಣ್ಣಿನಂತೆ ಮೃದುವಾಗಿದ್ದು, ಉತ್ತಮ ವಿಚಾರ ಧಾರೆಗಳಿಂದ ಅವರನ್ನು ರೂಪಿಸುವ ಕಾರ್ಯವನ್ನು ಪೋಷಕರು ಮಾಡಬೇಕಿದೆ. ಪ್ರಾಥಮಿಕ ಹಂತದ ಶಿಕ್ಷಣ ಹಾಗೂ ಇನ್ನಿತರ ಅನುಭವಗಳು ಮುಂದಿನ ಜೀವನ ರೂಪಿಸಲು ನೆರವಾಗುವುದರಿಂದ ಹೆತ್ತವರು ಮಕ್ಕಳಿಗೆ ಹೆಚ್ಚು ಸಮಯ ನೀಡುವುದು ಅವಶ್ಯ. ಪೋಷಕರು ಹಾಗೂ ಶಿಕ್ಷಕರು ನೀಡುವ ಉತ್ತಮ ವಿಚಾರಗಳು ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್‌ಸಿ ವಿದ್ಯಾಲಯದ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಶಾಲಾ ವಾರ್ಷಿಕೋತ್ಸವ ‘ಪ್ರತಿಭಾ ತರಂಗಿಣೀ 2022-23’ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪಡೆದ ಪುರಸ್ಕಾರಗಳನ್ನು ಮಕ್ಕಳು ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಬಾಲ್ಯದಲ್ಲಿ ಮಕ್ಕಳ ಸಣ್ಣ ಪುಟ್ಟ ಸಂತೋಷಗಳಲ್ಲಿ ಪೋಷಕರು ಭಾಗಿಯಾಗುವುದು ಅತ್ಯಗತ್ಯ. ಇಂದಿನ ದಿನಗಳಲ್ಲಿ ಹೆತ್ತವರಿಗೆ ತಮ್ಮ ದೈನಂದಿನ ಒತ್ತಡಗಳಿಂದಾಗಿ ಮಕ್ಕಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಶಾಲಾ ವಾರ್ಷಿಕೋತ್ಸವ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಪೋಷಕರು ಬಿಡುವು ಮಾಡಿಕೊಂಡು ಮಕ್ಕಳ ಬೆಳವಣಿಗೆಯನ್ನು ಗಮನಿಸಬೇಕಿದೆ ಎಂದರು.
ಮಕ್ಕಳು ಒಬ್ಬರಿಗಿಂತ ಒಬ್ಬರು ವೈವಿಧ್ಯಮಯ ಪ್ರತಿಭೆಗಳನ್ನು ಹೊಂದಿದ್ದು ಅವರ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಿದೆ. ವಿವಿಧ ವಯೋಮಾನಗಳಲ್ಲಿ ಪ್ರತಿಯೊಬ್ಬರೂ ವಿಶೇಷ ಸಾಧನೆಯನ್ನು ಮೆರೆಯುತ್ತಾರೆ. ಆದ್ದರಿಂದ ಮಕ್ಕಳು ಪ್ರಶಸ್ತಿ ಗಳಿಸದಿದ್ದರೂ ಒತ್ತಡ ಹೇರುವ ಅಗತ್ಯವಿಲ್ಲ. ಅವರ ಅಭಿರುಚಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ನಡೆಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಮಾತನಾಡಿ ಮಕ್ಕಳ ಭವಿಷ್ಯ ರೂಪಿಸುವುದು ಪೋಷಕರು ನಿರ್ವಹಿಸಬೇಕಾದ ಅತೀ ದೊಡ್ಡ ಜವಾಬ್ದಾರಿಯಾಗಿದೆ. ಮಕ್ಕಳು ಸಾಧನೆ ಮಾಡಿದಾಗ ಪ್ರೋತ್ಸಾಹಿಸುವುದು, ದಾರಿ ತಪ್ಪಿ ನಡೆದಾಗ ಬುದ್ಧಿ ಹೇಳಿ ಅವರನ್ನು ಸರಿ ದಾರಿಗೆ ತರುವ ಕಾರ್ಯವನ್ನೂ ಸಮರ್ಥವಾಗಿ ನಿರ್ವಹಿಸುವುದು ಅಗತ್ಯ. ಯುವಜನತೆ ದೇಶದ ಶಕ್ತಿಯಾಗಿದ್ದು, ಅವರು ಸಾಧನೆಯ ಉತ್ತುಂಗ ಶಿಖರಕ್ಕೆ ಏರುವುದನ್ನು ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳನ್ನು ಸಮರ್ಥವಾಗಿ ರೂಪಿಸುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ಗುಂಪು ವಿಭಾಗದಲ್ಲಿ ಐರಾವತ ತಂಡ ಚಾಂಪಿಯನ್‌ಷಿಪ್ ಪಡೆದರೆ, ಅಮೃತಾ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.
ಶಾಲಾ ಮಕ್ಕಳು ‘ಪಾಂಚಜನ್ಯ’ ಹಾಗೂ ‘ಏಕಾದಶಿ ಮಹಾತ್ಮೆ’ ಪ್ರಸಂಗ ಯಕ್ಷಗಾನ ಪ್ರದರ್ಶನ ನೀಡಿದ್ದು ನೆರೆದಿದ್ದವರ ಮನಸ್ಸನ್ನು ಸೂರೆಗೊಂಡಿತು. ಜತೆಗೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಸತ್ಯ ಪ್ರಸಾದ್ ಕೋಟೆ, ಶಿಕ್ಷಕ-ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಸ್ಕೃತಿ ಎಸ್. ಶೆಟ್ಟಿ, ಮನ್ವಿತ್ ಎಸ್. ಉಪಸ್ಥಿತರಿದ್ದರು.
ಉಪಪ್ರಾಂಶುಪಾಲೆ ಸುಜನಿ ಎಂ. ಬೋರ್ಕರ್ ಸ್ವಾಗತಿಸಿದರು. ಪ್ರಾಂಶುಪಾಲೆ ಮಾಲತಿ ಡಿ. ವಂದಿಸಿದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions