Saturday, January 18, 2025
Homeಯಕ್ಷಗಾನಯಕ್ಷಾಂಗಣ ದಶಮಾನ ಸಡಗರ - ಯಕ್ಷಗಾನ ತಾಳಮದ್ದಳೆ ಸಪ್ತಾಹ 2022 : ಹತ್ತನೇ ವರ್ಷದ ನುಡಿ...

ಯಕ್ಷಾಂಗಣ ದಶಮಾನ ಸಡಗರ – ಯಕ್ಷಗಾನ ತಾಳಮದ್ದಳೆ ಸಪ್ತಾಹ 2022 : ಹತ್ತನೇ ವರ್ಷದ ನುಡಿ ಹಬ್ಬ, ನವೆಂಬರ 21-27

ಮಂಗಳೂರು : ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವ ವಿದ್ಯಾನಿಲಯ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ (ರಿ) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಹತ್ತನೇ ವರ್ಷದ ನುಡಿಹಬ್ಬವನ್ನು ಇದೇ 2022 ನವೆಂಬರ 21 ರಿಂದ 27 ರವರೆಗೆ ‘ದಶಮಾನ ಸಡಗರ’ವಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ಸಂಜೆ ಸರಣಿ ತಾಳಮದ್ದಳೆ, ಸಾಧಕ ಸಮ್ಮಾನ, ಪ್ರಶಸ್ತಿ ಪ್ರದಾನ ಮತ್ತು ಸಂಸ್ಮರಣ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.

ಉದ್ಘಾಟನೆ ಮತ್ತು ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ :
ನವೆಂಬರ 21 ರಂದು ಸೋಮವಾರ ಸಂಜೆ ಗಂ. 4ಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ಸರಣಿಯನ್ನು ಉದ್ಘಾಟಿಸುವರು. ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಯಕ್ಷಾಂಗಣದ ದಶಮಾನ ಜ್ಯೋತಿ ಬೆಳಗುವರು. ಕಲಾ ಪೋಷಕ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿಯವರಿಗೆ ಮಂಗಳೂರು ವಿ.ವಿ. ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಅವರು ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ವನ್ನು ಪ್ರದಾನ ಮಾಡುವರು.

ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ‘ಸಾರ್ವಭೌಮ’ ಗ್ರಂಥಾರ್ಪಣೆ ಮಾಡುವರು. ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಯವರು ಅಧ್ಯಕ್ಷತೆ ವಹಿಸಲಿದ್ದು ಮೇಯರ್ ಜಯಾನಂದ ಅಂಚನ್, ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ರಮೇಶ್ ಭಟ್, ಶಶಿಧರ ಶೆಟ್ಟಿ ಬರೋಡ, ಪ್ರದೀಪ್ ಕುಮಾರ ಕಲ್ಕೂರ, ವೇಣುಗೋಪಾಲ್ ಎಲ್ ಶೆಟ್ಟಿ ಥಾಣೆ, ವಿ. ಕರುಣಾಕರ, ಶಶಿಕುಮಾರ್ ರೈ ಬಾಲ್ಯೊಟ್ಟು, ಕೆ.ಕೆ. ಶೆಟ್ಟಿ ಅಹ್ಮದ್ ನಗರ, ಡಾ. ಅನಸೂಯ ರೈ, ಸಿ.ಎಸ್.ಭಂಡಾರಿ ಅತಿಥಿಗಳಾಗಿರುವರು.

‘ಸಪ್ತ ವಿಜಯ’ ಸರಣಿ ತಾಳಮದ್ದಳೆ :
ಹತ್ತನೇ ವರ್ಷದ ತಾಳಮದ್ದಳೆ ಸಪ್ತಾಹದಲ್ಲಿ ‘ಸಪ್ತ ವಿಜಯ’ ಸರಣಿ ಪ್ರಸಂಗಗಳನ್ನು ಆಯ್ದುಗೊಳ್ಳಲಾಗಿದೆ. ನ. 21 ರಿಂದ ಕ್ರಮವಾಗಿ ಷಡಾನನ ವಿಜಯ, ವಾನರೇಶ್ವರ ವಿಜಯ, ವೀರಾಂಜನೇಯ ವಿಜಯ, ಭೀಮಸೇನ ವಿಜಯ, ಸ್ವರಾಜ್ಯ ಸ್ವಾತಂತ್ರ್ಯ ವಿಜಯ, ವಿಕ್ರಮಾರ್ಜುನ ವಿಜಯ ಮತ್ತು ಯಕ್ಷಲೋಕ ವಿಜಯ ಆಖ್ಯಾನಗಳಿದ್ದು, ಸಮಾರೋಪಕ್ಕೆ ಮುನ್ನ ಸಿರಿಕಿಟ್ಣ ವಿಜಯೊ ಎಂಬ ತುಳು ಪ್ರಸಂಗವನ್ನು ಸಂಯೋಜಿಸಲಾಗಿದೆ.

ಸಂಸ್ಮರಣೆ – ಸನ್ಮಾನ :
ಪ್ರತಿ ದಿನದ ಕಾರ್ಯಕ್ರಮದಲ್ಲಿ ಕೀರ್ತಿಶೇಷ ಕಲಾವಿದರು ಮತ್ತು ಕಲಾಪೋಷಕರ ಸಂಸ್ಮರಣೆಯೂ ನಡೆಯಲಿದೆ. ಕವಿಭೂಷಣ ಕೆ.ಪಿ. ವೆಂಕಪ್ಪ ಶೆಟ್ಟಿ, ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ವಿದ್ವಾನ್ ಕೆ. ಕಾಂತ ರೈ ಮೂಡಬಿದ್ರೆ, ಅತ್ತಾವರ ಶಿವಾನಂದ ಕರ್ಕೇರ, ದಿ| ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ, ಹಾಗೂ ದಿ| ಎನ್. ಎಸ್. ಕಿಲ್ಲೆ ಅವರ ನುಡಿ ನಮನದಲ್ಲಿ ಹಿರಿಯ ಸಾಧಕರಾದ ಬಿ. ಭುಜಬಲಿ ಧರ್ಮಸ್ಥಳ, ಪಟ್ಲ ಗುತ್ತು, ಮಹಾಬಲ ಶೆಟ್ಟಿ, ಪ್ರೊ| ಜಿ.ಆರ್. ರೈ, ಕೃಷ್ಣ ಶೆಟ್ಟಿ ಕುಡುಮಲ್ಲಿಗೆ, ಕೆ.ಕೆ. ಪೂಂಜಾ ಫರಂಗಿಪೇಟೆ ಅವರನ್ನು ಸನ್ಮಾನಿಸಲಾಗುವುದು.
ಯಕ್ಷಾಂಗಣ ಪ್ರಶಸ್ತಿ ಪ್ರದಾನ :

ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಭಾಗವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ. ರಮೇಶಾಚಾರ್ಯ ಅವರಿಗೆ 2021-22 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಪ್ರದಾನ ಮಾಡುವರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ದೀಪ ಪ್ರಜ್ವಲನೆ ಮಾಡುವರು. ಡಾ. ಹರಿಕೃಷ್ಣ ಪುನರೂರು, ಸೌಂದರ್ಯ ರಮೇಶ್, ಬಾಬು ಶೆಟ್ಟಿ ಪೆರಾರ, ಅಗರಿ ರಾಘವೇಂದ್ರ ರಾವ್, ವಿಜಯ ಕುಮಾರ್ ಶೆಟ್ಟಿ, ಡಾ. ಸುಭಾಷಿಣಿ ಶ್ರೀವತ್ಸ, ಕಡಮಜಲು ಸುಭಾಷ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.


ಯಕ್ಷಾಂಗಣ ದಶಮಾನೋತ್ಸವ ಅಂಗವಾಗಿ ಸಪ್ತಾಹದ ಏಳು ದಿನಗಳಲ್ಲಿ ವಿವಿಧ ಗಣ್ಯರು ಅತಿಥಿಗಳಾಗಿ ಸಭಾ ಕಲಾಪಗಳನ್ನು ನಡೆಸಿಕೊಡುವುದರೊಂದಿಗೆ ಕರಾವಳಿ ಜಿಲ್ಲೆಗಳ 70 ಕ್ಕೂ ಮಿಕ್ಕಿದ ಪ್ರಸಿದ್ಧ ಕಲಾವಿದರು ತಾಳಮದ್ದಳೆ ಸರಣಿಯ ಹಿಮ್ಮೇಳ ಮುಮ್ಮೇಳಗಳಲ್ಲಿ ಕಾಣಿಸಿಕೊಳ್ಳುವರು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ  ಭಾಸ್ಕರ ರೈ ಕುಕ್ಕುವಳ್ಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ  ಬೆಟ್ಟಂಪಾಡಿ ಸುಂದರ ಶೆಟ್ಟಿ (ಉಪಾಧ್ಯಕ್ಷ), ತೋನ್ಸೆ ಪುಷ್ಕಳ ಕುಮಾರ್ (ಪ್ರಧಾನ ಕಾರ್ಯದರ್ಶಿ), ಕೆ. ರವೀಂದ್ರ ರೈ ಕಲ್ಲಿಮಾರು  (ಸಂಚಾಲಕರು), ಕೆ. ಲಕ್ಷ್ಮೀನಾರಾಯಣ ರೈ ಹರೇಕಳ (ಜತೆ ಕಾರ್ಯದರ್ಶಿ), ನಿವೇದಿತಾ ಎನ್. ಶೆಟ್ಟಿ (ಮಹಿಳಾ ಪ್ರತಿನಿಧಿ) ಯವರು ಉಪಸ್ಥಿತರಿದ್ದರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments