ಪ್ರಸಿದ್ಧ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರಿಗೆ ಕಳೆದ ವರ್ಷ 90ರ ವೈಭವವನ್ನು ಅವರ ಕುಟುಂಬಿಕರ ಸಹಕಾರದಿಂದ ಯಕ್ಷಗಾನ ಕಲಾರಂಗ ವಿಶಿಷ್ಟವಾಗಿ ಆಚರಿಸಿತ್ತು.

ಈ ವರ್ಷ ಅವರ ಮಕ್ಕಳು ಸಂಸ್ಥೆಯ ಸದಸ್ಯರನ್ನೆಲ್ಲ ಆಮಂತ್ರಿಸಿ 91ರ ಹುಟ್ಟುಹಬ್ಬವನ್ನು ಅವರ ಮನೆಯಂಗಳದಲ್ಲಿ ನೆರೆಕರೆಯವರು ಮತ್ತು ಬಂಧುಗಳೊಂದಿಗೆ ಆತ್ಮೀಯವಾಗಿ ಆಚರಿಸಿದರು. ಕೋಳ್ಯೂರರ ಪ್ರಸಿದ್ಧ ಪಾತ್ರಗಳಲ್ಲಿ ಒಂದಾದ ದಾಕ್ಷಾಯಿಣಿಯ ವಿಶಿಷ್ಟ ಅರ್ಥವನ್ನು ಕೇಳುವ ಅವಕಾಶ ಒದಗಿಬಂತು.
ಯುಗಳ ಸಂವಾದ ತಾಳಮದ್ದಲೆಯಲ್ಲಿ ಪ್ರೊ.ಎಂ.ಎಲ್. ಸಾಮಗರು ಈಶ್ವರನ ಪಾತ್ರ ನಿರ್ವಹಿಸಿದರು. ಅನಂತರ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಶಾಲು, ಸ್ಮರಣಿಕೆ, ಅಭಿನಂದನ ಪತ್ರದೊಂದಿಗೆ ಕೋಳ್ಯೂರು ದಂಪತಿಗಳನ್ನು ಅಭಿನಂದಿಸಿದರು.
ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಕೋಳ್ಯೂರರ ಕಲಾಪ್ರತಿಭೆ, ಸಂಸ್ಥೆಯ ಕಾರ್ಯ ಚಟುವಟಿಕೆಯ ಕುರಿತು ಅವರಿಗಿರುವ ಪ್ರೀತಿ, ವೃದ್ಧಾಪ್ಯದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಪರಿಯನ್ನು ಸ್ಮರಿಸಿಕೊಂಡರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪಿ.ಕಿಶನ್ ಹೆಗ್ಡೆ, ಪ್ರೊ.ಎಂ.ಎಲ್. ಸಾಮಗ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೋಳ್ಯೂರರ ಸುಪುತ್ರಿ ಮೀರಾ ಅವರ ಮಗ ನಟರಾಜ್ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಮೆಚ್ಚಿ ಸೇವಾ ರೂಪದಲ್ಲಿ ಮುಂಬಯಿಯ ವಿಕ್ಷಲಾ ವೆಂಚರ್ ಪ್ರೈ. ಲಿ. ಮೂಲಕ ಯಕ್ಷಗಾನ ಕಲಾರಂಗದ ವೆಬ್‌ಸೈಟನ್ನು ವಿನ್ಯಾಸಗೊಳಿಸಿ ಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಕೋಳ್ಯೂರರ ಪುತ್ರ ಶ್ರೀಧರ ರಾವ್ ತಮ್ಮ ಸಹೋದರ, ಸಹೋದರಿಯರೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಭೋಜನಾ ನಂತರ ಕೋಳ್ಯೂರರ ಮನೆಯ ಅಂಗಳದಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನವೆಂಬರ್ 13ರಂದು ಜರಗಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಸಿದ್ಧತೆಯ ಕುರಿತು ಸಮಾಲೋಚಿಸಲಾಯಿತು.

