ಸಾರ್ವಜನಿಕವಾಗಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಭೀಕರ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜೈಪುರ: ಆಸ್ತಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಸಾರ್ವಜನಿಕವಾಗಿ ಥಳಿಸಿ ಕೊಂದಿರುವ ಘಟನೆ ಜೈಪುರದ ಕರ್ಣಿ ವಿಹಾರ್ ಪ್ರದೇಶದಲ್ಲಿ ನಡೆದಿದೆ. ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಮೃತ ಆಸ್ತಿ ವ್ಯಾಪಾರಿಯನ್ನು ವಿಜೇಂದ್ರ ಸಿಂಗ್ ಗುಲಾಬ್ ಅಲಿಯಾಸ್ ವಿಜ್ಜು ಬನ್ನಾ ಎಂದು ಗುರುತಿಸಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ದುಷ್ಕರ್ಮಿಗಳು ರಾಡ್, ಚಾಕು, ಕತ್ತಿ, ಸುತ್ತಿಗೆಗಳಿಂದ ಉದ್ಯಮಿಯನ್ನು ಅಮಾನುಷವಾಗಿ ಥಳಿಸುತ್ತಿರುವುದು ಕಂಡು ಬಂದಿದ್ದು, ಸುತ್ತಮುತ್ತ ಮೂಕಪ್ರೇಕ್ಷಕರಾಗಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.
ಜೈಪುರದ ಕರ್ನಿ ವಿಹಾರ್ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಮೂರು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಆಸ್ತಿ ಉದ್ಯಮಿಯೊಬ್ಬರ ಮೇಲೆ ಏಕಾಏಕಿ ಹಲ್ಲೆ ನಡೆಸಿ ದೊಣ್ಣೆಗಳಿಂದ ಥಳಿಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಗುರುವಾರ ಬೆಳಿಗ್ಗೆ ಉದ್ಯಮಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಉದ್ಯಮಿಯ ಸಾವಿನ ನಂತರ, ಶವವನ್ನು ಎಸ್‌ಎಂಎಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸದ್ಯ ಮೂವರು ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
