ಪುತ್ತೂರು, ನವೆಂಬರ್ 03: ಕ್ರೀಡೆಗಳು ಮನಸ್ಸಿಗೆ ಮುದ ನೀಡುವಂತೆ ದೈಹಿಕ ಪೋಷಣೆಗಳಿಗೂ ಸಹಾಯಕವಾಗುತ್ತವೆ. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ, ಶಿಸ್ತು, ಸಹಬಾಳ್ವೆಗಳಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಬ0ಧಗಳ ವೃದ್ಧಿಗಳಿಗೂ ಕ್ರೀಡೆಗಳು ಅಗತ್ಯವಾಗಿವೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದೊ0ದಿಗೆ ದಿಟ್ಟ ಹೆಜ್ಜೆಗಳನ್ನು ಇರಿಸಬೇಕು.

ಆಲೋಚನೆಗಳು, ನಿರ್ಧಾರಗಳು ಅಚಲವಾಗಿದ್ದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಪುತ್ತೂರಿನ ಡಿವೈಎಸ್‌ಪಿ ಡಾ. ವೀರಯ್ಯ ಹಿರೇಮಠ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2022-23ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಮೂಡಿಸಲು ಸಹಾಯ ಮಾಡುತ್ತದೆ. ಶಾಲಾ ಕಾಲೇಜು ಮಟ್ಟದ ಕ್ರೀಡಾ ಕೂಟಗಳಿಂದ ಸ್ನೇಹ ಸೌಹಾರ್ದತೆಗಳು ಏರ್ಪಡುತ್ತವೆ. ಕ್ರೀಡಾಪಟುಗಳಿಗೆ ದೇಶ ವಿದೇಶ ಮಟ್ಟದಲ್ಲಿ ವಿಶೇಷ ಮನ್ನಣೆಯಿದೆ. ರಾಷ್ಟ್ರೀಯ ಸಂಬ0ಧಗಳ ವೃದ್ಧಿಗೆ ಕ್ರೀಡೆಗಳ ಕೊಡುಗೆ ಅಪಾರವಾಗಿದೆ. ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ ಎಂದರು.
ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಾದ ರಿತೇಶ್, ಅಖಿಲೇಶ್, ವಿಘ್ನೇಶ್, ರಜತ್, ನಿತೀನ್ ಖುಷಿ, ಪವಿತ್ರ, ಜೈಶೀಲ್ ರೈ, ಧನುಷ್, ಲೋಹಿತ್, ಗಗನ್, ಕೃಪೇಶ್, ಪವನ್ ಮತ್ತು ಪ್ರಣವ್ ಕ್ರೀಡಾಜ್ಯೋತಿಯನ್ನು ತರುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಕರ್ಷಕ ಪಥಸಂಚಲನ:
ಸುಮಾರು 25 ತರಗತಿಗಳ ಶಿಸ್ತುಬದ್ಧ ಪಥ ಸಂಚಲನ ನಡೆಯಿತು. ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಕಾಲೇಜಿನ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಕ್ರೀಡಾ ಮೈದಾನಕ್ಕೆ ಆಕರ್ಷಕವಾಗಿ ಹೊತ್ತು ಸಾಗಿ ಬಂದರು.

ದ್ವಿತೀಯ ಪಿಯುಸಿ ವಿಜ್ಞಾನದ‘ಎ’ ವಿಭಾಗವು ಪ್ರಥಮ ಸ್ಥಾನವನ್ನೂ ದ್ವಿತೀಯ ಪಿಯುಸಿ ವಿಜ್ಞಾನದ ‘ಡಿ’ ವಿಭಾಗವು ದ್ವಿತೀಯ ಸ್ಥಾನವನ್ನೂ ದ್ವಿತೀಯ ಪಿಯುಸಿ ವಾಣಿಜ್ಯದ ‘ಎ’ ವಿಭಾಗವು ತೃತೀಯ ಬಹುಮಾನವನ್ನೂ ಪಡೆದುಕೊಂಡಿತು.
ವಿವೇಕಾನಂದ ಪದವಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಪಥಸಂಚಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.
ರಕ್ಷಕ-ಶಿಕ್ಷಕ ಸಂಘದ ಕೋಶಾಧಿಕಾರಿ ಕೃಷ್ಣಪ್ರಕಾಶ್ ಬಳ್ಳಂಬೆಟ್ಟು ಮಾತನಾಡಿ ಕ್ರೀಡೆಯು ದೇಹಕ್ಕೆ ವ್ಯಾಯಾಮ ನೀಡುವುದರ ಜೊತೆಗೆ ಮಾನಸಿಕ ಏಕಾಗ್ರತೆಗೂ ಸಹಕಾರಿಯಾಗುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಧೃತಿಗೆಡದೆ ಆತ್ಮವಿಶ್ವಾಸದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶುಭಾಶಯದ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಕೃಷ್ಣಪ್ರಸನ್ನ ಮಾತನಾಡಿ ಕ್ರೀಡಾಕೂಟವು ಗುರಿಯನ್ನು ನಿಶ್ಚಯ ಮಾಡುವ ಪಾಠ. ಕ್ರೀಡೆಯು, ಆತ್ಮವಿಶ್ವಾಸ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ. ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯ ಮೂಲವಾಗಿದೆ. ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ. ಸಂಯಮ, ಇಚ್ಛಾಶಕ್ತಿ, ಸ್ವಾಭಿಮಾನ, ಏಕಾಗ್ರತೆಗಳನ್ನು ಬೆಳೆಸುತ್ತದೆ. ಸೋಲೇ ಗೆಲುವಿನ ಸೋಪಾನ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಕೂಡ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತವೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಎಂ. ಗೋಪಾಲಕೃಷ್ಣ ಭಟ್, ಕೋಶಾಧಿಕಾರಿ ಸಚಿನ್ ಶೆಣ್ಯೆ ಕೆ, ಸದಸ್ಯ ಡಾ. ಕೆ. ಎನ್ ಸುಬ್ರಹ್ಮಣ್ಯ, ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ, ಯತೀಶ್,ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುದತ್ ನಾಯಕ್ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾಲೇಜಿನ ಕ್ರೀಡಾ ಪ್ರತಿನಿಧಿ ಗಣಪತಿ ಭಟ್ ಸ್ವಾಗತಿಸಿ ಕ್ರೀಡಾ ಸಂಘದ ಕಾರ್ಯದರ್ಶಿ ರಜತ್ ಆರ್ ಭಟ್ ವಂದಿಸಿದರು.ಕಾಲೇಜಿನ ಆ0ಗ್ಲ ವಿಭಾಗದ ಮುಖ್ಯಸ್ಥ ಪಿ.ಕೆ. ಪರಮೇಶ್ವರ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳು ನಡೆದವು.