‘ನನಗೆ ಗಂಡು ಮಗು ಬೇಡ’ ಎಂದು 20 ದಿನಗಳ ಹಸುಳೆಯನ್ನು ತಾಯಿಯೊಬ್ಬಳು ಬಾವಿಗೆ ಎಸೆದಿದ್ದಾಳೆ. ಈ ಘಟನೆ ನಡೆದದ್ದು ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದಲ್ಲಿ.

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ತಾಲೂಕಿನ ಕೂತ್ಕುಂಜ (Kuthkunja) ಗ್ರಾಮದ ಬಸ್ತಿಕಾಡು (bastikadu) ಎಂಬಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಗುವನ್ನು ಬಾವಿಗೆ ಎಸೆದ ಕರುಣೆಯಿಲ್ಲದ ತಾಯಿ ಪವಿತ್ರ (Pavithra) ಎಂದು ಗುರುತಿಸಲಾಗಿದ್ದು, ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.
ಆಕೆ ಮಗುವನ್ನು ಬಾವಿಗೆಸೆಯುವ ಹೊತ್ತಿನಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ವರದಿಗಳ ಪ್ರಕಾರ ಪವಿತ್ರಾಳಿಗೆ ಮೊದಲೊಂದು ಮದುವೆಯಾಗಿತ್ತು. ನಾಲ್ಕು ವರ್ಷಗಳ ಹಿಂದೆ ಆದ ಮದುವೆ ಪತಿ-ಪತ್ನಿಯರ ನಡುವಿನ ಸಾಮರಸ್ಯದ ಕೊರತೆಯಿಂದ ವಿಚ್ಛೇದನದಲ್ಲಿ ಕೊನೆಗೊಂಡಿತ್ತು.
ಆಮೇಲೆ ಒಂದು ವರ್ಷದ ಹಿಂದೆ ಇನ್ನೊಬ್ಬನನ್ನು ಮದುವೆಯಾಗಿದ್ದರು. ಎರಡು ತಿಂಗಳ ನಂತರ ಗರ್ಭಿಣಿಯಾಗಿದ್ದ ಪವಿತ್ರಾ ತಾಯಿ ಮನೆಗೆ ಬಂದು ವಾಸಿಸುತ್ತಿದ್ದರು. ಆಗಲೇ ಗರ್ಭಿಣಿಯಾಗಿದ್ದ ಸಮಯದಲ್ಲೇ ತನಗೆ ಹೆಣ್ಣು ಮಗುವೆಂದರೆ ಇಷ್ಟ ಎಂದು ಆಕೆ ಹೇಳುತ್ತಿದ್ದಳಂತೆ.
ಆ ಸಮಯದಲ್ಲಿ ಮಾನಸಿಕ ಖಿನ್ನತೆಗಾಗಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು. ಅಕ್ಟೊಬರ್ 10ರಂದು ಪ್ರಸವಿಸಿದ ಆಕೆ ಗಂಡು ಮಗು ಹುಟ್ಟಿದ ನಿರಾಸೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಇಷ್ಟವಿಲ್ಲದ ಗಂಡು ಮಗು ನನಗೆ ಬೇಡ ಎಂದು ಹೇಳಿ ಆಕೆ ಮಗುವನ್ನು ನಿನ್ನೆ ಬಾವಿಗೆಸೆದಿದ್ದಳು. ಸ್ಥಳೀಯರು ಕೂಡಲೇ ಮಗುವನ್ನು ಬಾವಿಯಿಂದ ಮೇಲಕ್ಕೆತ್ತಿ ಪಂಜ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ‘ಮಗು ಈಗಾಗಲೇ ಮೃತಪಟ್ಟಿದೆ’ ಎಂದು ವೈದ್ಯರು ಹೇಳಿದ್ದಾರೆ.
ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಧಾವಿಸಿದ್ದು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
