ಶ್ರೀ ಪ್ರಭಾಕರ ಚಿಟ್ಟಾಣಿ ಅವರು ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಅನುಭವೀ ಕಲಾವಿದರು. ಕಳೆದ ನಲುವತ್ತು ವರ್ಷಗಳಿಂದ ಗಂಡು ಕಲೆಯಾದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕೃಷಿ ಮತ್ತು ಯಕ್ಷಗಾನ ಹಿನ್ನೆಲೆಯುಳ್ಳ ಮನೆತನದಲ್ಲಿ ಜನಿಸಿದ ಇವರು ಕೃಷಿಕನಾಗಿ, ಯಕ್ಷಗಾನ ಕಲಾವಿದನಾಗಿ, ಸಂಘಟಕನಾಗಿಯೂ ಗುರುತಿಸಿಕೊಂಡಿದ್ದಾರೆ. ಸರಳ ಸಜ್ಜನರಾದ ಇವರು ತೆರೆದು ಕಾಣಿಸಿಕೊಳ್ಳುವ ಸ್ವಭಾವದವರಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವವನ್ನು ಹೊಂದಿದ ಸಾತ್ವಿಕರು.
ಒಡ್ಡೋಲಗ ವೇಷಗಳಲ್ಲಿ ಇವರಿಗೆ ಆಸಕ್ತಿ. ಹಿತಮಿತವಾದ ಕುಣಿತ ಮತ್ತು ಮಾತುಗಳಿಂದ ಪರಂಪರೆಯ ಚೌಕಟ್ಟಿನೊಳಗೆ ಪಾತ್ರಗಳನ್ನು ಚಿತ್ರಿಸುತ್ತಾರೆ. ದೇವೇಂದ್ರ, ಅರ್ಜುನ, ಧರ್ಮರಾಯ, ಶತ್ರುಘ್ನ, ಮೊದಲಾದ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇವರು ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಬಲ್ಲ ಸಮರ್ಥರು. 2003ರಿಂದ ತೊಡಗಿ ಕಳೆದ ಹತ್ತೊಂಭತ್ತು ವರ್ಷಗಳಿಂದ ಸಂಚಾಲಕರಾಗಿ, ಕಲಾವಿದರಾಗಿ ಗುಂಡಬಾಳಾ ಮೇಳವನ್ನು ಮುನ್ನಡೆಸುತ್ತಿದ್ದಾರೆ.
ಊರ, ಪರವೂರ ಅನೇಕ ಕಡೆ ಸನ್ಮಾನ, ಗೌರವಗಳನ್ನು ಸ್ವೀಕರಿಸಿದ ಶ್ರೀಯುತರು ಕಲಾವಿದನಾಗಿ, ಸಂಚಾಲಕನಾಗಿ ಕೃಷಿಕನಾಗಿ ಯಶಸ್ವಿ ಬದುಕನ್ನು ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಜತೆ ಮುಂಬಯಿ, ಬೆಂಗಳೂರು ಮೊದಲಾದ ಕಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಕೆರೆಮನೆ ತಂಡದ ಸದಸ್ಯನಾಗಿ ಲಡಾಕ್ ಮತ್ತು ಕಾರ್ಗಿಲ್ ಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸುವ ಅವಕಾಶವು ಶ್ರೀ ಪ್ರಭಾಕರ ಚಿಟ್ಟಾಣಿಯವರಿಗೆ ಸಿಕ್ಕಿತ್ತು.
ಬಡಗು ತಿಟ್ಟಿನ ಅನುಭವೀ ಕಲಾವಿದ, ಗುಂಡಬಾಳಾ ಮೇಳದ ಸಂಚಾಲಕರಾದ ಶ್ರೀ ಪ್ರಭಾಕರ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ. 1956ನೇ ಇಸವಿ ನವೆಂಬರ್ 18ರಂದು ಶ್ರೀ ಚಿಟ್ಟಾಣಿ ವೆಂಕಟ್ರಮಣ ಹೆಗಡೆ ಮತ್ತು ಶ್ರೀಮತಿ ಮಹಾಲಕ್ಷ್ಮಿ ದಂಪತಿಗಳ ಪುತ್ರನಾಗಿ ಜನನ. ಶ್ರೀ ಪ್ರಭಾಕರ ಚಿಟ್ಟಾಣಿ ಅವರ ಕುಟುಂಬದವರೆಲ್ಲಾ ಕಲಾವಿದರೂ, ಕಲಾಸಕ್ತರೂ ಆಗಿದ್ದರು. ತಂದೆ ಶ್ರೀ ವೆಂಕಟ್ರಮಣ ಹೆಗಡೆ ಯಕ್ಷಗಾನ ಕಲಾವಿದರು. ದೊಡ್ಡಪ್ಪ ಹಿರೇಮಕ್ಕಿ ಸುಬ್ರಾಯ ಹೆಗಡೆ ಮತ್ತು ಚಿಕ್ಕಪ್ಪ ಮಾಗೋಡು ರಾಮ ಹೆಗಡೆಯವರು ಯಕ್ಷಗಾನ ಕಲಾವಿದರಾಗಿದ್ದರು. ದೊಡ್ಡಪ್ಪ ಹಿರೇಮಕ್ಕಿ ಸುಬ್ರಾಯ ಹೆಗಡೆ ಅವರ ಪುತ್ರ ಹಿರೇಮಕ್ಕಿ ವಿಷ್ಣು ಹೆಗಡೆ ಭಾಗವತರಾಗಿ ಕಲಾಭಿಮಾನಿಗಳಿಗೆ ಪರಿಚಿತರು. ಇವರು ಪ್ರಾಚಾರ್ಯ ಭಾಗವತ ಶ್ರೀ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿದ್ದರು.
ಶ್ರೀ ಪ್ರಭಾಕರ ಚಿಟ್ಟಾಣಿ ಅವರು ಓದಿದ್ದು ಹತ್ತನೇ ತರಗತಿ ವರೆಗೆ. 7ನೇ ತರಗತಿ ವರೆಗೆ ಭಾಸ್ಕೇರಿ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಕವಲಕ್ಕಿಯ ಎಸ್.ಎಸ್. ಹೈಸ್ಕೂಲಿನಲ್ಲಿ. ಇವರಿಗೆ ಯಕ್ಷಗಾನವು ರಕ್ತಗತವಾಗಿಯೇ ಬಂದಿತ್ತು. ಅದು ಹಿರಿಯರಿಂದ ಬಳುವಳಿಯಾಗಿ ಬಂದ ಕಲಾ ಸಂಪತ್ತು. ಎಳವೆಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯುಂಟಾಗಿತ್ತು. ಶಾಲಾ ಪ್ರದರ್ಶನಗಳಲ್ಲಿ ಇವರಿಗೆ ವೇಷ ಮಾಡುವ ಅವಕಾಶವೂ ಸಿಕ್ಕಿತ್ತು.
ಎಂಟನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ರುಕ್ಮಾಂಗದ ಚರಿತ್ರೆ ಪ್ರಸಂಗದಲ್ಲಿ ಧರ್ಮಾಂಗದನಾಗಿ ರಂಗಪ್ರವೇಶ. ಒಂಭತ್ತನೇ ತರಗತಿಯಲ್ಲಿ ಓದುತ್ತಿರುವಾಗ ಅದೇ ಪ್ರಸಂಗದಲ್ಲಿ ಬಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ವರ್ಷ ಕರ್ಣ ಪರ್ವ ಪ್ರಸಂಗದಲ್ಲಿ ಕರ್ಣ ಪಾತ್ರವನ್ನು ನಿರ್ವಹಿಸಿದ್ದರು. ಗುಂಡಿಬೈಲು ಸುಬ್ರಾಯ ಭಟ್ಟ ಮತ್ತು ಗುಡ್ಡೆಬಾಳು ಗೋವಿಂದ ಭಟ್ಟರಿಂದ ತರಬೇತಿ ಪಡೆದು ಶಾಲಾ ಪ್ರದರ್ಶನಗಳಲ್ಲಿ ಈ ಮೂರು ಪಾತ್ರಗಳನ್ನು ಮಾಡಿದ್ದರು. ಇವರ ನಿರ್ವಹಣೆಯನ್ನು ಎಲ್ಲರೂ ಮೆಚ್ಚಿಕೊಂಡ ಕಾರಣ ಮೇಳಕ್ಕೆ ಸೇರಬೇಕೆಂಬ ಆಸೆಯುಂಟಾಗಿತ್ತು.
ತಿರುಗಾಟ ನಡೆಸಬೇಕೆಂಬ ಆಸೆಯಿಂದ ಗುಂಡಬಾಳಾ ಮೇಳಕ್ಕೆ. ವೇಷಭೂಷಣಗಳನ್ನು ಧರಿಸಲು ಕಷ್ಟವಾಗಿ ಹತ್ತೇ ದಿನದಲ್ಲಿ ಮನೆಗೆ ಮರಳಿದ್ದರು. ಮುಂದಿನ ವರ್ಷ ಮಾಗೋಡು ರಾಮ ಹೆಗಡೆ ಅವರ ಜತೆ ಅಮೃತೇಶ್ವರೀ ಮೇಳಕ್ಕೆ. ಅಲ್ಲಿ ಪೀಠಿಕಾ ಸ್ತ್ರೀ ವೇಷ ನಿರ್ವಹಣೆ. ಅಲ್ಲಿ ಕೇವಲ ಹದಿಮೂರು ದಿನಗಳ ತಿರುಗಾಟ ನಡೆಸಿ ಮನೆಗೆ ಮರಳಿದ್ದರು. ಬಳಿಕ ಏಳು ವರ್ಷಗಳ ಕಾಲ ಮನೆಯಲ್ಲೇ ಇದ್ದು ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಸಮಯದಲ್ಲಿ ಊರ ಪರವೂರ ಪ್ರದರ್ಶನಗಳಲ್ಲಿ ಅಪರೂಪಕ್ಕೆ ಭಾಗವಹಿಸುತ್ತಿದ್ದರು.
1982ರಲ್ಲಿ ಮೇಳದ ತಿರುಗಾಟದಲ್ಲಿ ಮತ್ತೆ ತೊಡಗಿಸಿಕೊಳ್ಳುವ ನಿರ್ಧಾರ. ಹಡಿನಬಾಳಾ ಶ್ರೀ ಸತ್ಯ ಹೆಗಡೆಯವರ ನಾಯಕತ್ವದ ಗುಂಡಬಾಳಾ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಮೇಳಕ್ಕೆ ತೆರಳುವಾಗ ಮೂರೂರು ಶ್ರೀ ರಾಮ ಹೆಗಡೆಯವರು ಒಡ್ಡೋಲಗ ವೇಷಗಾರಿಕೆಗೆ ಬೇಕಾದ ವೇಷಭೂಷಣಗಳನ್ನು ಇವರಿಗೆ ಹಣ ತೆಗೆದುಕೊಳ್ಳದೇ ನೀಡಿದ್ದರು. ಆ ವರ್ಷ ಧರ್ಮರಾಯ, ದೇವೇಂದ್ರ ಮೊದಲಾದ ಒಡ್ಡೋಲಗದ ಪಾತ್ರಗಳನ್ನು ನಿರ್ವಹಿಸಿ ಅನುಭವವನ್ನು ಗಳಿಸಿದ್ದರು. ಈ ಸಮಯದಲ್ಲಿ ಶ್ರೀ ಪ್ರಭಾಕರ ಚಿಟ್ಟಾಣಿ ಅವರು ಒಡ್ಡೋಲಗದ ವೇಷಗಳಲ್ಲಿ ಅನುಭವಿಯಾಗಿ ಆ ಸ್ಥಾನವನ್ನು ಅರ್ಹತೆಯಿಂದ ಪಡೆದುಕೊಂಡಿದ್ದರು.
1983ರಲ್ಲಿ ಪಳ್ಳಿ ಶ್ರೀ ಸೋಮನಾಥ ಹೆಗ್ಡೆ ಮತ್ತು ಶ್ರೀ ಬಿ.ವಿ. ಶೆಟ್ಟರ ಸಂಚಾಲಕತ್ವದ ಅಮೃತೇಶ್ವರೀ ಟೆಂಟ್ ಮೇಳದಲ್ಲಿ ಒಡ್ಡೋಲಗ ವೇಷಧಾರಿಯಾಗಿ ವ್ಯವಸಾಯ. 1984ರಲ್ಲಿ ಪುರ್ಲೆ ರಾಮಚಂದ್ರ ಹೆಗಡೆ ಅವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ 5 ವರ್ಷ ವ್ಯವಸಾಯ. ಈ ಮೇಳದಲ್ಲಿ ಕಪ್ಪೆಕೆರೆ ಸುಬ್ರಾಯ ಭಾಗವತ, ನೆಬ್ಬೂರು ನಾರಾಯಣ ಭಾಗವತ, ಕೊಳಗಿ ಅನಂತ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸಾಲ್ಕೋಡು ಗಣಪತಿ ಹೆಗಡೆ, ಕುಂಜಾಲು ರಾಮಕೃಷ್ಣ, ಗೋಡೆ ನಾರಾಯಣ ಹೆಗಡೆ, ಬಳ್ಕೂರು ಕೃಷ್ಣಯಾಜಿ, ತೀರ್ಥಹಳ್ಳಿ ಗೋಪಾಲ ಆಚಾರ್ಯ, ಮೊದಲಾದವರ ಒಡನಾಟವು ದೊರೆತಿತ್ತು.
ಬಳಿಕ ಆರು ವರ್ಷಗಳ ಕಾಲ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟರ ಸಂಚಾಲಕತ್ವದ ಬಚ್ಚಗಾರು ಮೇಳದಲ್ಲಿ ವ್ಯವಸಾಯ. ಇಲ್ಲಿ ಕೆರೆಮನೆ ಮಹಾಬಲ ಹೆಗಡೆ, ಕೊಳಗಿ ಅನಂತ ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಕುಂಜಾಲು ರಾಮಕೃಷ್ಣ, ಮಂಟಪ ಪ್ರಭಾಕರ ಉಪಾಧ್ಯ, ಕೊಳಗಿ ಕೇಶವ ಹೆಗಡೆ ಮೊದಲಾದವರ ಒಡನಾಟವು ದೊರೆತಿತ್ತು. ಬಳಿಕ ಒಂದು ವರ್ಷ ಕುಮಟಾ ಗೋವಿಂದ ನಾಯ್ಕ್ ಅವರ ಕುಮಟಾ ಮೇಳದಲ್ಲಿ ವ್ಯವಸಾಯ. ಬಳಿಕ ಎರಡು ವರ್ಷ ಕಿಶನ್ ಕುಮಾರ್ ಹೆಗ್ಡೆ ಸಂಚಾಲಕತ್ವದ ಬಚ್ಚಗಾರು ಮೇಳದಲ್ಲಿ ತಿರುಗಾಟ. ಬಳಿಕ ಕೃಷ್ಣ ನಾಯ್ಕ್ ನಾಯಕತ್ವದ ಶಿರಸಿ ಮಾರಿಕಾಂಬಾ ಮೇಳದಲ್ಲಿ ವ್ಯವಸಾಯ ಮಾಡಿ ತಿರುಗಾಟ ನಿಲ್ಲಿಸಿದ್ದರು.
ಬಳಿಕ ಎರಡು ವರ್ಷ ಮನೆಯಲ್ಲಿದ್ದು ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ೨೦೦೩ರಲ್ಲಿ ಮರಳಿ ಯಕ್ಷಗಾನ ಕಲೆಯು ಕೈಬೀಸಿ ಕರೆದಿತ್ತು. 2003ರಿಂದ ತೊಡಗಿ ಕಳೆದ ಹತ್ತೊಂಭತ್ತು ವರ್ಷಗಳಿಂದ ಗುಂಡಬಾಳಾ ಮೇಳವನ್ನು ಸಂಚಾಲಕನಾಗಿ, ಕಲಾವಿದನಾಗಿ ಮುನ್ನಡೆಸುತ್ತಿದ್ದಾರೆ. ತಾನು ಮೊತ್ತಮೊದಲು ತಿರುಗಾಟ ಮಾಡಿದ ಮೇಳವನ್ನು ಸಂಚಾಲಕನಾಗಿ ಮುನ್ನಡೆಸುವ ಭಾಗ್ಯವು ಶ್ರೀ ಪ್ರಭಾಕರ ಚಿಟ್ಟಾಣಿ ಅವರಿಗೆ ದೊರೆತಿತ್ತು.
ಶ್ರೀಯುತರು ಯಕ್ಷಗಾನ ಕಲಾ ವ್ಯವಸಾಯಿಯಾಗಿಯೂ ಸಾಂಸಾರಿಕವಾಗಿಯೂ ತೃಪ್ತರು. ಇವರ ಪತ್ನಿ ಶ್ರೀಮತಿ ಸುಧಾ. ಇವರು ಗೃಹಣಿ. ಪ್ರಭಾಕರ ಚಿಟ್ಟಾಣಿ, ಸುಧಾ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ನಾಗರಾಜ ಪ್ರಭಾಕರ ಹೆಗಡೆ ಬೆಂಗಳೂರಿನಲ್ಲಿ ಉದ್ಯೋಗಿ. ಕಿರಿಯ ಪುತ್ರ ಶ್ರೀ ಗಣೇಶ ಪ್ರಭಾಕರ ಹೆಗಡೆ ಕೃಷಿಕರು. ಶ್ರೀ ಪ್ರಭಾಕರ ಹೆಗಡೆ ಚಿಟ್ಟಾಣಿ ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಇನ್ನಷ್ಟು ಕಲಾವ್ಯವಸಾಯವು ನಡೆಯುವಲ್ಲಿ ಅವರಿಗೆ ಕಲಾಮಾತೆಯ ಅನುಗ್ರಹವು ದೊರೆಯಲಿ ಎಂಬ ಹಾರೈಕೆಗಳು.
ಶ್ರೀ ಪ್ರಭಾಕರ ಚಿಟ್ಟಾಣಿ, ಮೊಬೈಲ್: 9448924978
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions