ಶೈಕ್ಷಣಿಕ ಹಾಗೂ ಕೌಟುಂಬಿಕ ಜೀವನವನ್ನು ಹೊಂದಾಣಿಕೆ ಮಾಡಿಕೊಂಡು ನಡೆಸುವ ಜೀವನ ಮಾನವನ ಬದುಕಿನಲ್ಲಿ ಅತ್ಯಮೂಲ್ಯ ಎಂದು ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೆ.ಆರ್. ಗೋಪಾಲಕೃಷ್ಣ ಹೇಳಿದರು.

ಅವರು ಪೆರ್ನಾಜೆ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನ 1991-92ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಹಾಗೂ ನಿವೃತ್ತ ಗುರುಗಳ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮನುಷ್ಯನ ಹೃದಯ ದೇವಾಲಯ ಸಮಾನ. ನಾವು ಮಾಡುವ ಕೆಲಸವನ್ನು ಪ್ರೀತಿಸಿದಾಗ ಸಮಾಜ ಮತ್ತು ಜನರು ನಮ್ಮನ್ನು ಗುರುತಿಸುತ್ತಾರೆ. ಸಮಾಜದಲ್ಲಿ ಗುರು ಮತ್ತು ಶಿಷ್ಯರ ನಡುವೆ ಬಂಧುತ್ವ ಇರಬೇಕು. ಆಗ ಗುರು ಮತ್ತು ಶಿಷ್ಯರ ಜೀವನ ಪರಿಪೂರ್ಣವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಶಿಕ್ಷಕಿ ಶ್ರೀಮತಿ ಸರೋಜಿನಿ ನಾಗಪ್ಪಯ್ಯ ಶುಭ ಹಾರೈಸಿ ಹಿರಿಯ ವಿದ್ಯಾರ್ಥಿಗಳು ಮಾಡುತ್ತಿರುವ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಶ್ರೀ ಮಂಟಯ್ಯ ಮಾತನಾಡಿ ಕಿರಿಯರು ಹಿರಿಯರ ನಡೆ-ನುಡಿಗಳನ್ನು ನೋಡಿ ಅನುಸರಿಸುತ್ತಾರೆ. ಹಿರಿಯರು ತೋರಿಸಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಈ ವರ್ಷ ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ಸಮಾಜ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಚಂದ್ರಮುಖಿ ಹಾಗೂ ಕಛೇರಿ ಸಹಾಯಕ ಸಿಬ್ಬಂದಿ ಶ್ರೀಮತಿ ಚಿತ್ರಾವತಿ ಇವರನ್ನು ಶಾಲು ಹೊದಿಸಿ, ಹಾರ, ಹಣ್ಣು ಹಂಪಲುಗಳನ್ನು ಸಮರ್ಪಿಸಿ ಗೌರವಿಸಲಾಯಿತು. ಶ್ರೀಮತಿ ತೇಜಕುಮಾರಿ ಮತ್ತು ಶ್ರೀಮತಿ ನಳಿನಿ ರೈ ಸನ್ಮಾನಿತರ ಪರಿಚಯ ಮಾಡಿದರು.
ಈ ಸಂದರ್ಭದಲ್ಲಿ ಸತತವಾಗಿ 47 ಬಾರಿ ರಕ್ತದಾನ ಮಾಡಿದ ಸದ್ರಿ ವಿದ್ಯಾರ್ಥಿ ಬಳಗದ ಶ್ರೀ ಪದ್ಮನಾಭ ರೈ ಅರೆಪ್ಪಾಡಿ, ಹಾಗೂ ಪ್ರಸ್ತುತ ಮೂಡಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ, ಪ್ರಶಸ್ತಿ ಪುರಸ್ಕೃತ ಆರೋಗ್ಯ ಸಹಾಯಕಿ ಶ್ರೀಮತಿ ಸರಸ್ವತಿ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ವಿದ್ಯಾರ್ಥಿ ಬಳಗದ ಪರವಾಗಿ ಶ್ರೀ ದಿನೇಶ್ ಅಡ್ಕಾರು, ಶ್ರೀ ಈಶ್ವರ ಉಳಿತ್ತಾಯ, ಶ್ರೀ ಪುಷ್ಪರಾಜ್, ಶ್ರೀ ರಮೇಶ್ ರಾವ್ ಮತ್ತು ವೆಂಕಟೇಶ್ ಪ್ರಸಾದ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶ್ರೀ ಪ್ರಕಾಶ್ ವಾಗ್ಲೆ ಪ್ರಾರ್ಥಿಸಿದರು. ಶ್ರೀ ಜಯಪ್ರಕಾಶ್ ಬೈತಡ್ಕ ಸ್ವಾಗತಿಸಿ, ಶ್ರೀ ನವೀನ್ ರೈ ಬಿಜಳ ವಂದಿಸಿದರು. ಶ್ರೀ ಹರೀಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕಿ ಶ್ರೀಮತಿ ಸುಕನ್ಯ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಜಾತ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ 1991-92ನೇ ಸಾಲಿನ ವಿದ್ಯಾರ್ಥಿ ಬಳಗದ ಪರವಾಗಿ ಸಹ ಭೋಜನ ಏರ್ಪಡಿಸಲಾಯಿತು.

ಕಾರ್ಯಕ್ರಮಕ್ಕೆ ಹಾಜರಿದ್ದ ಹಿರಿಯ ವಿದ್ಯಾರ್ಥಿಗಳು ತಮ್ಮ ಕೈಲಾದ ರೀತಿಯಲ್ಲಿ ಸಹಕಾರ ನೀಡುವ ಭರವಸೆಯೊಂದಿಗೆ ಸಂಸ್ಥೆಯ ಅಭಿವೃದ್ಧಿ ನಿಧಿಗೆ ದೇಣಿಗೆಯನ್ನು ಸಂಗ್ರಹಿಸಿ ಪ್ರಾಂಶುಪಾಲರ ಮೂಲಕ ಹಸ್ತಾಂತರಿಸಲಾಯಿತು.
