ವಿಶ್ವ ವಿನೋದ 75 ಯಕ್ಷಕಲಾರವ ಅಭಿನಂದನಾ ಸಮಾರಂಭ ಯಕ್ಷ ವೈವಿಧ್ಯ:
ಜನ್ಮದಾರಭ್ಯ ಬಂದಿರಬಹುದಾದ ಸಂಸ್ಕಾರ ,‘ಆಶು ಕವಿತ್ವ’ ಭಾಗವತಿಕೆಯಲ್ಲಿ ಅಸಂಖ್ಯ ಶಿಷ್ಯಂದಿರನ್ನು ತಯಾರಿಗೊಳಿಸಿದ ಒಂದು ವಿಶಿಷ್ಟ ಪ್ರತಿಭೆ ಪ್ರಸಂಗ ರಚನೆಯಲ್ಲಿ ವಿನೂತನವಾದ ಸಾಧನೆ, ರಂಗ ನಡೆಯ ಬಗ್ಗೆ ಸ್ಪಷ್ಟವಾದ ನಿಲುವು ಇವೆಲ್ಲವುಗಳು ಏಕತ್ರಗೊಂಡ ಓರ್ವ ಮಹನೀಯರ ಬಗ್ಗೆ ಈ ಲೇಖನದಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸಲಾಗುತ್ತದೆ.
ಯಕ್ಷಗಾನ ರಂಗದಲ್ಲಿ ಅರ್ಥಗಾರಿಕೆ ಪ್ರಸಂಗ ರಚನೆ ಶಿಷ್ಯಂದಿರನ್ನು ಕಲಾವಿದರಾಗಿ ತಯಾರಿ ಇವುಗಳ ಮೂಲಕ ಭೂಮ ವ್ಯಕ್ತಿತ್ವವನ್ನು ಹೊಂದಿದ ಆಚಾರ್ಯ ಪುರುಷರು ಕೀರಿಕ್ಕಾಡು ಮಾಸ್ತರು ವಿಷ್ಣು ಭಟ್ ರವರು. ಇವರ ಸುಪುತ್ರರಾದ ಶ್ರೀಯುತ ವಿಶ್ವ ವಿನೋದ ಬನಾರಿಯವರು ಈ ಮೇಲಿನ ವಿಶೇಷಣಗಳಿಗೆ ಸೂಕ್ತವಾಗಿ ಹೊಂದಿಕೆಯಾಗುವ ಓರ್ವ ವಿಶಿಷ್ಟ ಸಾಧಕ. ಕೀರಿಕ್ಕಾಡು ಮಾಸ್ತರ್ ರವರ ಧರ್ಮಪತ್ನಿ ಶ್ರೀಮತಿ ಪರಮೇಶ್ವರಮ್ಮ. ಇವರ ಸುಪುತ್ರರಾಗಿ ಶ್ರೀ ಬನಾರಿಯವರು 1947ರಲ್ಲಿ ಜನ್ಮ ತಾಳುತ್ತಾರೆ.
ಬನಾರಿಯವರು ಶಾಲಾ ಹಂತದಲ್ಲಿರುವಾಗ ಯಕ್ಷಗಾನ ನಾಟಕ ಪಾತ್ರಧಾರಿ. ಇವರ ತಂದೆಯವರಿಗೆ ಇವರನ್ನು ಚಂಡೆ ಮದ್ಲೆಯಲ್ಲಿ ಪಳಗಿಸಬೇಕೆಂಬುದು ಆಶಯವಾಗಿತ್ತು .ಇದೇ ಸಂದರ್ಭದಲ್ಲಿ ಇವರ ಹಿರಿಯ ಅಣ್ಣ ಕೀರ್ತಿಶೇಷ ವನಮಾಲ ಕೇಶವಭಟ್ಟರು ನಡುಮನೆ ಜತ್ತಪ್ಪ ರೈಯವರಿಂದ ಯಕ್ಷಗಾನ ಭಾಗವತಿಕೆಯನ್ನು ಅಭ್ಯಾಸ ಮಾಡುತ್ತಿದ್ದರು. ವಿಶ್ವವಿನೋದರಿಗೆ ಚಂಡೆ ಮದ್ದಳೆಯ ನಾದಕಿಂತಲೂ ಭಾಗವತಿಕೆಯೇ ಆಪ್ಯಾಯಮಾನವಾಗಿ ಕಂಡುದು ವಿಶೇಷ.
ಆ ಸಂದರ್ಭದಲ್ಲಿ ಯಕ್ಷಗಾನದ ಸರ್ವಾಂಗಗಳನ್ನು ಬಲ್ಲ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬನಾರಿಯಲ್ಲಿ ಹಿಮ್ಮೇಳದ ತರಗತಿಗಳನ್ನು ನಡೆಸುತ್ತಿದ್ದರು. ಹಾಗಾಗಿ ಬನಾರಿಯವರು ಮಾಂಬಾಡಿಯವರಲ್ಲಿ ಭಾಗವತಿಗೆಯನ್ನು ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಮಾಂಬಾಡಿಯವರು ಇದನ್ನು ಪುರಸ್ಕರಿಸುತ್ತಾರೆ.
ಹಾಗಾಗಿ ಬನಾರಿಯವರಿಂದ ಭಾಗವತಿಗೆಯ ಅಭ್ಯಾಸ ಆರಂಭವಾಯಿತು ತಂದೆಯವರ ಸಕಾಲಿಕ ಮಾರ್ಗದರ್ಶನ ನಿರಂತರ ಅಭ್ಯಾಸ ಚಿಂತನೆ ಇದರ ಫಲರೂಪವಾಗಿ ಬನಾರಿಯವರ ಹಾಡುಗಾರಿಕೆ ಪಕ್ವಗೊಂಡುದರಲ್ಲಿ ಆಶ್ಚರ್ಯವಿಲ್ಲ ಬನಾರಿ ಕಲಾಮಂದಿರದಲ್ಲಿ ನಿರಂತರ ಯಕ್ಷಗಾನ ಕಾರ್ಯಕ್ರಮಗಳು ಬನಾರಿಯವರ ಸಕ್ರಿಯ ಪಾತ್ರ ಜೊತೆಗೆ ಪರವೂರ ಕಾರ್ಯಕ್ರಮಗಳಲ್ಲೂ ಭಾಗಿ. ಮಂಗಳೂರು ಆಕಾಶವಾಣಿಯಲ್ಲಿ ಯಕ್ಷಗಾನವನ್ನು ಪ್ರಸ್ತುತಪಡಿಸಿದರು. ಒಂದರ್ಥದಲ್ಲಿ ಯಕ್ಷಗಾನ ಭಾಗವತಿಕೆಯಲ್ಲಿ ಸಾಧನೆಯ ಸೋಪಾನಗಳನ್ನು ಏರಿದರು ಎನ್ನಬಹುದು.
ಈ ಸಂದರ್ಭದಲ್ಲಿ ಜೀವನದಲ್ಲಿ ಘಟಿಸಿದ ಒಂದು ಅಪಘಾತದಿಂದ ಭಾಗವತಿಯಲ್ಲಿ ಸ್ವರ ಸಂಚಾರಕ್ಕೆ ಪೂರ್ಣವಲ್ಲದಿದ್ದರೂ ಭಾಗಶಃ ತೊಂದರೆ ಉಂಟಾಯಿತು. ಹಾಗಾಗಿ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಭಾಗವತಿಕೆ. ಈ ಸನ್ನಿವೇಶದಲ್ಲಿ ಪ್ರಸಂಗ ಸಾಹಿತ್ಯದ ರಚನೆ ಕಡೆಗೆ ಬನಾರಿಯವರು ಮನಸ್ಸು ಮಾಡುತ್ತಾರೆ “ಶ್ರೀ ಶಬರಿಮಲೆ ಅಯ್ಯಪ್ಪ” ಎನ್ನುವ ಕೃತಿಯ ಪ್ರದರ್ಶನ ರಂಗದಲ್ಲಿ ಮೊದಲೇ ಆಗುತ್ತಿದ್ದರೂ ಇಡೀ ರಾತ್ರಿಯ ಪ್ರದರ್ಶನಕ್ಕೆ ಸಾಕಾಗುವ ಪದ್ಯಗಳು ಇಲ್ಲದೆ ಇರುವ ಕೊರತೆ ಬಾಧಿಸುತ್ತಿತ್ತು.
ಹಾಗಾಗಿ ಈ ಪ್ರಸಂಗಕ್ಕೆ ಅಗತ್ಯವಾದಂತಹ ಪದ್ಯಗಳನ್ನು ಬನಾರಿಯವರು ಹೊಸೆಯುತ್ತಾರೆ ಇದಕ್ಕೆ ಮೊದಲೇ ‘ಸೌಭಾಗ್ಯ ವಿಜಯ’ ಎನ್ನುವ ಕಾಲ್ಪನಿಕ ಕಥಾಧಾರಿತ ಪ್ರಸಂಗವನ್ನು ಇವರು ಬರೆದಿದ್ದು ಆದಿ ಸುಬ್ರಹ್ಮಣ್ಯ ಮೇಳದವರಿಂದ ಸಾಕಷ್ಟು ಪ್ರದರ್ಶನ ಕೂಡ ಆಗಿದೆ ಸುಳ್ಯ ಸೀಮೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ತೊಡಿಕಾನದ ಚರಿತ್ರೆ ಆಧರಿಸಿದ “ ತೊಡಿಕಾನ ಕ್ಷೇತ್ರ ಮಹಾತ್ಮೆ“ ಇವರ ಲೇಖನಿಯಿಂದ ಹೊಮ್ಮಿದ ಮತ್ತೊಂದು ಕಲಾ ಕುಸುಮ.
ಹವ್ಯಕ ಮಾತೃಭಾಷೆಯನ್ನು ಹೊಂದಿರುವ ಇವರು ತಮ್ಮ ಭಾಷೆಯಲ್ಲಿ ದಕ್ಷಾದ್ವರ ಎನ್ನುವ ಪ್ರಸಂಗವನ್ನು ಬರೆದಿದ್ದು ಬಹುಶಃ ಅದು ಈ ಭಾಷೆಯ ಪ್ರಥಮ ಪ್ರಕಟಿತ ಕೃತಿ (ಪ್ರಕಟಣೆ 1991) ‘ಮಾಗಧ ವಧೆ ‘ ಎನ್ನುವ ಮತ್ತೊಂದು ಹವ್ಯಕ ಭಾಷೆ ಕೃತಿ ಕೂಡ ಇವರ ಲೇಖನಿಯಿಂದ ಹೊರ ಹೊಮ್ಮಿದೆ. ಮೇಲೆ ಉಲ್ಲೇಖಿಸಿದ ಪ್ರಸಂಗಗಳು ಮಾತ್ರವಲ್ಲದೆ ದೂರದರ್ಶನಕ್ಕಾಗಿ ಇವರು ‘ಉಳ್ಳಾಲದ ರಾಣಿ ಅಬ್ಬಕ್ಕ’ ಮತ್ತು ‘ಕೆಳದಿ ಚೆನ್ನಮ್ಮ’ ಎಂಬ ಪ್ರಸಂಗಗಳನ್ನು ಬರೆದಿದ್ದು ಇವು ದೂರದರ್ಶನದಲ್ಲಿ ಪ್ರಸಾರಗೊಂಡಿವೆ ಇನ್ನೂ ಹಲವಾರು ಆಶು ಕವಿತ್ವವನ್ನು ಕಲಾಮಂದಿರದಲ್ಲಿ ನಡೆಯುವ ಯಕ್ಷ ಕಾರ್ಯಕ್ರಮಗಳಲ್ಲಿ ಅವರು ಪ್ರಸ್ತುತಪಡಿಸಿದ್ದಾರೆ.
ಅನುಭವಿ ಭಾಗವತರಾದ ಬನಾರಿಯವರು ತಾನು ಕಲಿತ ವಿದ್ಯೆಯನ್ನು ಅಸಂಖ್ಯ ಶಿಷ್ಯಂದಿರಿಗೆ ಕಲಿಸಿಕೊಡುವುದರ ಮೂಲಕ ಮಾದರಿ ವ್ಯಕ್ತಿತ್ವವನ್ನು ಹೊಂದಿದ್ದಾರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಎಂದರೆ ಶಿಷ್ಯಂದಿರಿಂದ ಯಾವುದೇ ಫಲಾ ಪೇಕ್ಷೆಯನ್ನು ಬಯಸದೆ ಅವರಿಗೆ ಕಲಿಸಿ ಕೊಟ್ಟಿದ್ದಾರೆ. ಉಮಾ ಪರಮೇಶ್ವರಿಯವರನ್ನು ಬಾಳ ಸಂಗಾತಿಯಾಗಿ ಪಡೆದ ಬನಾರಿಯರದು 3 ಹೆಣ್ಣು ಮತ್ತು ಒಂದು ಗಂಡು ಮಗುವಿನ ಸಂತೃಪ್ತ ಸಂಸಾರಿ.
ದೇಲಂಪಾಡಿ ಪರಿಸರದಲ್ಲಿ ಖ್ಯಾತರಾದ ವೈದ್ಯರು ಆಗಿರುವ ಇವರು ಈ ಆಸುಪಾಸಿನ ಜನರ ನೋವು ನಲಿವಿಗೆ ಸ್ಪಂದಿಸುವ ಸಹೃದಯಿ ಶ್ರೀಯುತ ವಿಶ್ವ ವಿನೋದ ಬನಾರಿಯವರಿಗೆ ಈಗ 75 ರ ಹರೆಯ ಅಸಾಮಾನ್ಯ ಸಾಧಕರಾದ ಶ್ರೀಯುತ ಬನಾರಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವ ಒಂದು ಸದವಕಾಶ ಒದಗಿ ಬಂದಿರುತ್ತದೆ.
ಈಗಾಗಲೇ ಬನಾರಿಯಲ್ಲಿ ಅಭಿನಂದನಾ ಸಮಿತಿಯೊಂದನ್ನು ರಚಿಸಲಾಗಿದೆ. ಇದರ ಆಶ್ರಯದಲ್ಲಿ ಮುಂದಿನ ನವೆಂಬರ್ 13ರಂದು ಬೆಳಗ್ಗೆನಿಂದ ತೊಡಗಿ ರಾತ್ರಿಯವರೆಗೆ ವಿವಿಧ ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮೂಡಿ ಬರಲಿವೆ.
ಲೇಖಕ:ಶ್ರೀ ನಾರಾಯಣ ತೋರಣಗುಂಡಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions