ಉಡುಪಿ : ಹೆಗ್ಗುಂಜೆ ಗ್ರಾಮದ ಯಕ್ಷಗಾನ ಮದ್ದಲೆವಾದಕ ನೀರ್ಜೆಡ್ಡು ವಿಜಯ ನಾಯ್ಕ್ (ಮಡಾಮಕ್ಕಿ ಮೇಳ)ಇವರಿಗೆ ಮಣಿಪಾಲದ ಡಾ. ಸತೀಶ್‌ಕಾಮತ್ ಮತ್ತು ಶೀಲಾ ಕಾಮತ್ ಕುಟುಂಬಿಕರು, ಉಡುಪಿಯ ಗುರುಸ್ಮೃತಿ ಟ್ರಸ್ಟ್ ಹಾಗೂ ಗೋಕುಲ್ ಕಾಮತ್ ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಕುಸುಮ್ ವಿಹಾರ್’ ಇದರ ಉದ್ಘಾಟನೆಯನ್ನು ಕಾಸರಗೋಡಿನ ಶ್ರೀ ಎನ್. ರಾಮದಾಸ್ ಕಾಮತ್ (ನಿವೃತ್ತ ಮುಖ್ಯ ಶಿಕ್ಷಕರು) ಇವರು ದಿನಾಂಕ 22-10-2022ರಂದು ನೆರವೇರಿಸಿದರು.

ಗುರುಸ್ಮೃತಿ ಟ್ರಸ್ಟ್ ವರಿಷ್ಠರಾದ ಡಾ.ದೀಪಕ್ ಪ್ರಭು ಮಾತನಾಡಿ ತಮ್ಮ ಮಾವ, ಶತಾಯುಷಿ ಶ್ರೀ ಎನ್. ರಾಮದಾಸ್ ಕಾಮತ್‌ರ ಗೌರವಾರ್ಥ ಅರ್ಹಕ ಲಾವಿದನಿಗೆ ಮನೆ ನಿರ್ಮಿಸಲು ಅವಕಾಶ ಕಲ್ಪಿಸಿದ ಸಂಸ್ಥೆಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು.
ದೈಹಿಕ ಅನನುಕೂಲತೆಯ ನಡುವೆಯೂ ಶ್ರದ್ಧೆಯಿಂದ ತನ್ನ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಕುರಿತು ಪಿ.ಕಿಶನ್ ಹೆಗ್ಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಭ್ಯಾಗತರಾಗಿ ಅಜಿತ್ ಕಾಮತ್, ಡಾ. ನಮಿತ ಪ್ರಭು, ಶೇಡಿಕೋಡ್ಲು ವಿಠಲ ಶೆಟ್ಟಿ, ಬಿ. ಸೀತಾರಾಮ ಶೆಟ್ಟಿ, ಪಂಚಾಯತ್ ಸದಸ್ಯ ಸುಕುಮಾರ ಶೆಟ್ಟಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರುಗಳಾದ ಎಸ್.ವಿ. ಭಟ್,ವಿ.ಜಿ. ಶೆಟ್ಟಿ, ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಭುವನಪ್ರಸಾದ್ ಹೆಗ್ಡೆ, ಬಿ.ಸಂತೋಷ್‌ಕುಮಾರ್ ಶೆಟ್ಟಿ, ವಿಜಯ್‌ಕುಮಾರ್ ಮುದ್ರಾಡಿ, ಎಸ್. ಗಣರಾಜ ಭಟ್, ಹೆಚ್.ಎನ್ ಶೃಂಗೇಶ್ವರ, ಎ. ನಟರಾಜ ಉಪಾಧ್ಯ, ಅನಂತರಾಜ ಉಪಾಧ್ಯ, ಅಶೋಕ್.ಎಂ,ರಾಜೀವಿ, ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.
ವಿಜಯ ನಾಯ್ಕರಿಗೆ ಎಲ್ಲ ರೀತಿಯಲ್ಲಿ ಸಹಕರಿಸುತ್ತಿರುವ ಮಡಾಮಕ್ಕಿ ಮೇಳದ ಭಾಗವತ ಬಸವರಾಜ ಇವರನ್ನು ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರರಾವ್ ಸ್ವಾಗತಿಸಿದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಧನ್ಯವಾದ ಸಲ್ಲಿಸಿದರು.

ಇದು ಸಂಸ್ಥೆ ದಾನಿಗಳ ನೆರವಿನಿಂದ ಈವರೆಗೆ ನಿರ್ಮಿಸಿಕೊಟ್ಟ 34ನೇಯ ಮನೆಯಾಗಿದ್ದು, ಕಲಾವಿದರಿಗೆ ನಿರ್ಮಿಸಿದ 6ನೇಯ ಮನೆಯಾಗಿದೆ.
