ಉಪಾನ್ಯಾಸಕಿಯೊಬ್ಬರು ತಾನು ಹೋಗಬೇಕಾಗಿದ್ದ ರೈಲನ್ನು ಬಿಟ್ಟು ಹೃದಯಾಘಾತಗೊಂಡು ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ನೆಲ್ಯಾಡಿಯಲ್ಲಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಬಿ. ಸಿ ರೋಡು ನಿವಾಸಿ ಹೇಮಾವತಿ ಅವರು ಬೆಂಗಳೂರಿನಲ್ಲಿರುವ ಮಗಳ ಮನೆಗೆ ಹೋಗಲೆಂದು ಬಂಟ್ವಾಳ ರೈಲು ನಿಲ್ದಾಣದಲ್ಲಿ ನಿಂತಿದ್ದರು. ಆಗ ಅಲ್ಲಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಗೊಂಡು ಬಿದ್ದಿದ್ದರು. ಅದನ್ನು ಕಂಡು ಹೇಮಾ ಅವರ ರಕ್ಷಣೆಗೆ ಧಾವಿಸಿದ್ದಾರೆ.
ಸಹಾಯಕ್ಕೆ ಕೂಗಿದಾಗ ಯಾರೂ ಸ್ಪಂದಿಸಿರಲಿಲ್ಲ. ಅಷ್ಟರಲ್ಲಿ ಹೇಮಾವತಿಯವರು ಹೋಗಬೇಕಾಗಿದ್ದ ರೈಲು ಕೂಡಾ ಬಂದಿತ್ತು. ಹೇಮಾವತಿಯವರ ಕರ್ತವ್ಯಪ್ರಜ್ಞೆ ಜಾಗೃತಗೊಂಡು ಅವರು ಬೆಂಗಳೂರು ರೈಲಿಗೆ ಹತ್ತದೆ ರಿಕ್ಷಾವೊಂದರಲ್ಲಿ ಆ ವ್ಯಕ್ತಿಯನ್ನು ಬಿ.ಸಿ ರೋಡಿನ ಆಸ್ಪತ್ರೆಗೆ ಸಾಗಿಸಿದರು.
ಅಲ್ಲಿಯ ಪ್ರಥಮ ಚಿಕಿತ್ಸೆಯ ನಂತರ ವ್ಯಕ್ತಿಯನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ಸಾಗಿಸಲಾಯಿತು. ಮರುದಿನ ಕೂಡಾ ಮಂಗಳೂರಿನ ಆಸ್ಪತ್ರೆಗೆ ತೆರಳಿ ಅವರ ಅರೋಗ್ಯ ವಿಚಾರಿಸಿ ಬೆಂಗಳೂರಿಗೆ ತೆರಳಿದ್ದರು.
ಆಮೇಲೆ ಒಂದೆರಡು ದಿನಗಳ ನಂತರ ತನ್ನ ತಾಯಿಯನ್ನು ಚಿಕಿತ್ಸೆಗೆ ಕರೆದುಕೊಂಡು ಕೆ.ಎಂ.ಸಿ ಯ ಪ್ರಖ್ಯಾತ ಹೃದಯತಜ್ಞ ಡಾ| ಪದ್ಮನಾಭ ಕಾಮತರಲ್ಲಿಗೆ ಹೋದಾಗ ತಾನು ರಕ್ಷಿಸಿದ ವ್ಯಕ್ತಿಯ ಭೇಟಿಯಾಯಿತು.

ಅವರಿಂದ ಹೇಮಾ ಮಾಡಿದ ಸಹಾಯದ ಬಗ್ಗೆ ತಿಳಿದುಕೊಂಡ ಡಾ| ಪದ್ಮನಾಭ ಕಾಮತರು ಹೇಮಾವತಿ ಅವರಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದರು. ಉಪಾನ್ಯಾಸಕಿ ಹೇಮಾವತಿ ಅವರ ಮಾನವೀಯ ಕಾರ್ಯಕ್ಕೆ ಈಳೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.