ಚಿಟ್ಟಾಣಿ ಅಭಿಮಾನಿ ಬಳಗ, ಉಡುಪಿ ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಚಿಟ್ಟಾಣಿ ಯಕ್ಷಗಾನ ಸಪ್ತಾಹವು ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಅಕ್ಟೋಬರ್ 27ರಿಂದ ನವಂಬರ್ 2ರ ವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.

27ರಂದು ಸಂಜೆ 6.30ಕ್ಕೆ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗ0ಗಾಧರ ರಾವ್ ಉಪಸ್ಥಿತರಿರುತ್ತಾರೆ.
ನವಂಬರ್ 2ರಂದು ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದ್ದು, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಹಿರಿಯ ಕಲಾವಿದ ಕೆ.ಗೋವಿಂದ ಭಟ್ಟರಿಗೂ, ಟಿ.ವಿ. ರಾವ್ ಪ್ರಶಸ್ತಿಯನ್ನು ಹವ್ಯಾಸಿ ಕಲಾವಿದೆ ಶ್ರೀಮತಿ ಸತ್ಯವತಿ ಟಿ. ಹೆಬ್ಬಾರರಿಗೂ ಪ್ರದಾನ ಮಾಡಲಾಗುವುದು.
ಪೂಜ್ಯ ವಿದ್ಯಾಸಾಗರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು, ಹೈಟೆಕ್ ಮಡಿಕೇರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಟಿ. ಎಸ್. ರಾವ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಪ್ರತಿದಿನ ಸಂಜೆ 6.30ರಿಂದ ಅನುಕ್ರಮವಾಗಿ ಚಂದ್ರಹಾಸ ಚರಿತ್ರೆ, ವೀರಮಣಿ ಕಾಳಗ, ರಾಜಯಯಾತಿ, ಶ್ರೀಕೃಷ್ಣ ಸಂದಾನ, ಮೈಂದ-ದ್ವಿವಿದ ಕಾಳಗ, ತಾಮ್ರಧ್ವಜ ಕಾಳಗ ಮತ್ತು ಜ್ವಾಲಾಪ್ರತಾಪ ಪ್ರಸಂಗಗಳು ಪ್ರಸ್ತುತಗೊಳ್ಳಲಿವೆ ಎಂದು ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



