ಮಧ್ಯಪ್ರದೇಶದ ಖಾರ್ಗೋನೆಯಲ್ಲಿ ಬೀದಿ ನಾಯಿಗಳ ದಾಳಿಗೆ 5 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಖಾರ್ಗೋನೆಯಲ್ಲಿ ಬೀದಿನಾಯಿಗಳ ಗುಂಪೊಂದು ಐದು ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.

ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಸೋನಿಯಾ ಎಂಬ ಬಾಲಕಿಯ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.
ಬೆಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಕಾವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ಬಾಲಕಿ ಸಮೀಪದ ಅಂಗಡಿಯಿಂದ ದಿನಸಿ ಖರೀದಿಸಲು ಹೋಗುತ್ತಿದ್ದಾಗ ರಸ್ತೆಯಲ್ಲಿ ಅರ್ಧ ಡಜನ್ ನಾಯಿಗಳು ದಾಳಿ ನಡೆಸಿವೆ. ಕೂಲಿ ಕೆಲಸ ಮಾಡುವ ಆಕೆಯ ತಂದೆ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ನಾಯಿಗಳು ಮಗಳ ಮೇಲೆ ದಾಳಿ ನಡೆಸಿವೆ.
ಆಕೆಯ ಅಳಲನ್ನು ಕೇಳಿದ ಸ್ಥಳೀಯರು ಆಕೆಗೆ ಸಹಾಯ ಮಾಡಲು ಧಾವಿಸಿದರು ಮತ್ತು ನಾಯಿಗಳನ್ನು ಓಡಿಸಿದರು, ಆದರೆ ಐದು ವರ್ಷದ ಮಗುವಿನ ಕುತ್ತಿಗೆ ಮತ್ತು ದೇಹದ ಭಾಗಗಳಿಗೆ ಅನೇಕ ಗಾಯಗಳಾಗಿವೆ.

ಆಕೆಯನ್ನು ಬೆಡಿಯಾದ ಸರ್ಕಾರಿ ಆಸ್ಪತ್ರೆಗೆ ಮತ್ತು ನಂತರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಗಾಯಗೊಂಡು ಸಾವನ್ನಪ್ಪಿದಳು ಎಂದು ಸಿವಿಲ್ ಸರ್ಜನ್ ಅನಾರ್ ಸಿಂಗ್ ಚೌಹಾಣ್ ಪಿಟಿಐಗೆ ತಿಳಿಸಿದ್ದಾರೆ.