ಬಂಟ್ವಾಳ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಮಣಿಹಳ್ಳ ಎಂಬಲ್ಲಿ ಎರಡು ಕಾರು ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮೃತರನ್ನು ಮೆಸ್ಕಾಂ ವಿಟ್ಲದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರವೀಣ್ ಜೋಶಿ (45) ಎಂದು ಗುರುತಿಸಲಾಗಿದೆ. ಅವರು ಪತ್ನಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೃತರು ಚಲಾಯಿಸುತ್ತಿದ್ದ ಕಾರು ಮತ್ತೊಂದು ಕಾರು ಮತ್ತು ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳು ಜೋಶಿಯನ್ನು ಕಾರಿನಿಂದ ಕೆಳಗಿಳಿಸಲು ಸ್ಥಳೀಯರು ಹರಸಾಹಸ ಪಟ್ಟರು.
ಅವರನ್ನು ಕಾರಿನಿಂದ ತೆಗೆದ ತಕ್ಷಣ ಅವರನ್ನು ತುಂಬೆ ಮತ್ತು ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆರಂಭದಲ್ಲಿ ಪ್ರವೀಣ್ ಚಲಾಯಿಸುತ್ತಿದ್ದ ಕಾರು ಹಾಗೂ ಬಂಟ್ವಾಳ ಕಡೆಯಿಂದ ವಗ್ಗಕ್ಕೆ ತೆರಳುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ. ಈ ನಡುವೆ ಹಿಂದಿನಿಂದ ಬಂದ ಬಸ್ ಎರಡೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ.


ಕ್ರೇನ್ ಬಳಸಿ ವಾಹನಗಳನ್ನು ಸ್ಥಳದಿಂದ ಹೊರ ತೆಗೆಯಲಾಯಿತು. ಘಟನಾ ಸ್ಥಳಕ್ಕೆ ಮೆಲ್ಕಾರ್ ಸಂಚಾರ ಎಸ್‌ಐ ಮೂರ್ತಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಈ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಕಾರಿನಲ್ಲಿದ್ದ ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.