ಪುತ್ತೂರು: ಕಬಕದಿಂದ ವಿಟ್ಲ ರಸ್ತೆಯನ್ನು ನೋಡಿದರೆ ‘ಅಯ್ಯೋ ಪ್ರಯಾಣಿಕರ ದುರವಸ್ಥೆಯೇ’ ಎನ್ನದೆ ವಿಧಿಯಿಲ್ಲ. ಹಾಗಾಗಿದೆ ಈ ರಸ್ತೆಯ ಪರಿಸ್ಥಿತಿ. ಬಸ್ಸು ಕಾರುಗಳು ಹೊಂಡಗಳಿಗೆ ಇಳಿಯುತ್ತಾ, ಜಗ್ಗಾಡುತ್ತಾ ಹೋಗುವುದನ್ನು ಕಂಡಾಗ ಖೇದವೆನಿಸದೆ ಇರಲಾರದು.

ಕಬಕದಿಂದಲೇ ಈ ರಸ್ತೆ ಹೊಂಡಗಳು ಪ್ರಾರಂಭವಾಗುತ್ತವೆ. ರಸ್ತೆ ಪೂರ್ತಿ ಹೊಂಡಗಳೇ ತುಂಬಿಕೊಂಡಿವೆ, ಅಲ್ಲಿ ಇಲ್ಲಿ ಎಂದು ಬೇರೆ ಬೇರೆ ಹೆಸರು ಹೇಳಬೇಕಾಗಿಲ್ಲ. ವಿಟ್ಲ ಚಂದಳಿಕೆಯ ವರೆಗೂ ಹೊಂಡಗಳಲ್ಲಿ ಏಳುತ್ತಾ ಬೀಳುತ್ತಾ ಸಾಗಬೇಕು.
ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದೇ ಭಾರೀ ಕಷ್ಟದಲ್ಲಿ ಸಾಗುಬೇಕು. ಆದರೆ ದ್ವಿಚಕ್ರ ವಾಹನಗಳಿಗೆ ಇಲ್ಲಿ ಒಂದು ಆಯ್ಕೆ ಇದೆ. ಹೊಂಡಗಳನ್ನು ತಪ್ಪಿಸಿ ಹೋಗಬಹುದಾದರೂ ಹೊಂಡಗಳನ್ನು ತಪ್ಪಿಸುವ ಭರದಲ್ಲಿ ರಾಂಗ್ ಸೈಡ್ ನಲ್ಲಿ ಸಂಚರಿಸಿ ಅಪಘಾತವಾಗುವ ಸಂಭವವೂ ಇದೆ.
ಈ ರಸ್ತೆ ಯಾಕೆ ಹೀಗೆ? ಇದನ್ನು ಸರಿಪಡಿಸಲು ಸಾಧ್ಯವಿಲ್ಲವೇ? ಸರಿಪಡಿಸುವ ಭಾದ್ಯತೆ ಇಲ್ಲವೇ?
ಸಂಬಂಧಪಟ್ಟವರನ್ನು ಕೇಳಿದರೆ “ಮಳೆಗಾಲವಾದ್ದರಿಂದ ರಸ್ತೆ ದುರಸ್ತಿ ಸಾಧ್ಯವಿಲ್ಲ, ಮಳೆ ಸಂಪೂರ್ಣ ಕಡಿಮೆಯಾದ ನಂತರ ಪ್ರತಿವರ್ಷದಂತೆ ದುರಸ್ತಿ ಕೈಗೊಳ್ಳಲಾಗುವುದು” ಎಂಬ ಉತ್ತರ ಸಿದ್ಧವಾಗಿರುತ್ತದೆ.
ಹಾಗಾದರೆ ಈ ವಿಟ್ಲ-ಕಬಕ ರಸ್ತೆಗೇ ಪ್ರತಿವರ್ಷ ಈ ದುರ್ಗತಿ ಯಾಕೆ? ಶಾಶ್ವತ ಪರಿಹಾರ ಸಾಧ್ಯವಿಲ್ಲವೇ? ಸುಮ್ಮನೆ ಪ್ರತಿವರ್ಷ ದುರಸ್ತಿ ಮಾಡಿಸುವುದಲ್ಲ, ದಿನಕ್ಕೆ ಸಾವಿರಗಟ್ಟಲೆ ವಾಹನ ಸಂಚರಿಸುವ ಈ ರಸ್ತೆಯನ್ನು ಉತ್ತಮ ಕಾಮಗಾರಿಯಿಂದ ಮೇಲ್ದರ್ಜೆಗೇರಿಸುವ ಅಗತ್ಯ ಈಗ ಇದೆ.





