Saturday, January 18, 2025
Homeಯಕ್ಷಗಾನಹಿರಿಯ ಮದ್ದಳೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಯವರಿಗೆ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ - 2022

ಹಿರಿಯ ಮದ್ದಳೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಯವರಿಗೆ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ – 2022

ಯಕ್ಷಗಾನದ ಪ್ರಸಿದ್ಧ ಹಿಮ್ಮೇಳ ವಾದಕರಾಗಿದ್ದ ಕಡಬ ನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಕಡಬ ವಿನಯ ಆಚಾರ್ಯರ ನೆನಪಿನಲ್ಲಿ “ಕಡಬ ಸಂಸ್ಮರಣಾ ಸಮಿತಿ” ನೀಡುವ ತೃತೀಯ ವರ್ಷದ ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ-2022’ನ್ನು ಹಿರಿಯ ಮದ್ದಳೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಇವರಿಗೆ ರೂ.10000/- ಗೌರವ ನಿಧಿಯೊಂದಿಗೆ ದಿವಂಗತ ಆನಂದ ಆಚಾರ್ಯ ಉಳೆಪಾಡಿ ವೇದಿಕೆಯಲ್ಲಿ ಕಳೆದ ಭಾನುವಾರ ಮಂಗಳೂರು ಕೈಕಂಬದ ಕಿನ್ನಿಕಂಬಳ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. 

ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರು ವಿದ್ವಾನ್ ಶ್ರೀಹರಿನಾರಾಯಣದಾಸ ಅಸ್ರಣ್ಣ ಶುಭಾಶೀರ್ವಚನದಲ್ಲಿ “ಭಾವಜೀವಿಯಾಗಿ ಉಳಿಯುವಲ್ಲಿ ಯಕ್ಷಗಾನ ಬೆಳೆಸಿದವರನ್ನು ನೆನೆಸುವುದಾದರೆ, ಅದಲ್ಲದೆ ಅವರ ದಾರಿಯಲ್ಲಿ ನಾವು ಪ್ರವೃತ್ತರಾದರೆ ಆವಾಗ ನಿಜವಾಗಿ ಯಕ್ಷಗಾನಕ್ಕೆ ಅಥವಾ ಅದನ್ನು ಅನುಸರಿಸಿದ ವ್ಯಕ್ತಿಗಳಿಗೆ ಕೊಡುವಂತ ಗೌರವ”. ಅದರಲ್ಲಿ ಕಡಬದ್ವಯರು ಮಹಾನ್ ಕಲಾವಿದರೆಂದರು.

ಹಿರಿಯ ಕಲಾವಿದ ಎಂ.ಕೆ.ರಮೇಶ ಆಚಾರ್ಯರು ಕಡಬ ವಿನಯ ಆಚಾರ್ಯ ಹೆಸರಿಗೆ ತಕ್ಕಂತೆ ವಿನಯವಾಗಿಯೇ ಇರುತ್ತಿದ್ದವ ಎಂದು ಸಂಸ್ಮರಣಾ ಭಾಷಣಗೈದರು. ಕಡಬ ನಾರಾಯಣಾಚಾರ್ಯರನ್ನು ಸನ್ಮಾನಿಸಿ ಎಂದಾಗ ನನಗಿಂತ ಮಿಗಿಲಾದ ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯರನ್ನು ಸನ್ಮಾನಿಸಿ ಎಂದು ಕಡಬ ತನಗಲ್ಲದ ಸೇವೆ ಮತ್ತೊಬ್ಬರಿಗೆ ನೀಡಿದರು ಎಂದು ಅವರ ಒಡನಾಟದಲ್ಲಿದ್ದ ಕಾಪು ಜನಾರ್ದನ ಆಚಾರ್ಯರು ನುಡಿದರು.

ಗೌರವ ಅತಿಥಿಗಳಾಗಿ ಅಗರಿ ರಾಘವೇಂದ್ರ ರಾವ್ ಹಿರಿಯರ ಸಂಸ್ಮರಣೆ ಮಾಡುವುದರಿಂದ ಯಕ್ಷಗಾನವು ಉಳಿಯುತ್ತದೆ ಎಂದರು. ವಿನಯ ಆಚಾರ್ಯರದ್ದು ಏಕಲವ್ಯ ಸಾಧನೆ ತಂದೆ ನುಡಿಸುವುದನ್ನು ನೋಡಿ ಕೇಳಿ ಬಾರಿಸುವಂಥ ಪ್ರತಿಭಾವಂತ ಕಲಾವಿದರೆಂದು ರಾಧಾಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾದ ಎಂ ನರಸಿಂಗ ರೈಗಳು ನುಡಿದರು. ಉದ್ಯಮಿಗಳು, ಶಿವಳ್ಳಿ ಸ್ಪಂದನ.ರಿ. ಕೈಕಂಬ ಇದರ ಅಧ್ಯಕ್ಷರಾದ ಶ್ರೀಧರ್ ರಾವ್ ರವರು ವೇಷಧಾರಿಗಳು ಜೊತೆಗೆ ಮದ್ದಳೆಗಾರರನ್ನು ಮೆಚ್ಚುವಂತಾದರೆ ಅದು ವಿನಯ ಆಚಾರ್ಯರನ್ನು ಮಾತ್ರ ಎಂದರು.

ರಾಜಲಕ್ಷ್ಮಿ ಜ್ಯುವೆಲ್ಲರ್ಸ್ ಕೈಕಂಬ ಇದರ ಮಾಲಕರಾದ ಗಣೇಶ ಆಚಾರ್ಯ ಅತಿಥಿಗಳ ಸ್ಥಾನದಲ್ಲಿ ಉಪಸ್ಥಿತರಿದ್ದರು. ಹಿರಿಯ ತಾಳಮದ್ದಳೆ ಅರ್ಥದಾರಿ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣಗೈದರು. ಸಮಿತಿಯ ಗೌರವ ಅಧ್ಯಕ್ಷರಾದ ಜಿ.ಟಿ.ಆಚಾರ್ಯ ಮುಂಬೈ ಇವರು ಗೌರವ ಉಪಸ್ಥಿತಿಯೊಂದಿಗೆ ಪ್ರಾಸ್ತಾವನೆಗೈದರು.

ಕಡಬ ನಾರಾಯಣ ಆಚಾರ್ಯ ಧರ್ಮಪತ್ನಿ ಶ್ರೀಮತಿ ಸುಲೋಚನಾ ಹಾಗೂ ಹಿರಿಯ ಭಾಗವತರಾದ ದಿನೇಶ್ ಅಮ್ಮಣ್ಣಾಯ ಇವರನ್ನು ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಪ್ರಶಸ್ತಿಯ ನಗದು ನೀಡಿ ಸಹಕರಿಸಿದ ಪುರೋಹಿತ್ ಶ್ರೀ ಉಮೇಶ ಆಚಾರ್ಯ ಉಳೇಪಾಡಿ ಮತ್ತು ಸಹೋದರರು ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಹಾಗೂ ಇನ್ನಿತರ ಪ್ರಾಯೋಜಕರನ್ನು ಈ ಸಂದರ್ಭದಲ್ಲಿ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಕಾವೂರು ಸ್ವಾಗತಿಸಿ ಕೋಶಾಧಿಕಾರಿ ಡಿ.ಭಾಸ್ಕರ್ ಆಚಾರ್ಯ ಅಂಡಿಂಜೆ ಧನ್ಯವಾದವಿತ್ತರು. ಡಾ.ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಇವರು ಕಾರ್ಯಕ್ರಮ ನಿರೂಪಣೆಗೈದರು.

ಬಳಿಕ ದಿನೇಶ್ ಅಮ್ಮಣ್ಣಾಯ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರಿ ಇವರ ಭಾಗವತಿಕೆಯಲ್ಲಿ ಎಂ ಕೆ ರಮೇಶ ಆಚಾರ್ಯ, ಹಿರಣ್ಯ ವೆಂಕಟೇಶ್ವರ ಭಟ್ , ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಡಾ.ವಾದಿರಾಜ ಕಲ್ಲೂರಾಯ ಹಾಗೂ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಇವರುಗಳಿಂದ ಧರ್ಮೋ ರಕ್ಷತಿ ರಕ್ಷಿತಃ ಎಂಬ ಯಕ್ಷಗಾನ ತಾಳಮದ್ದಳೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments