Sunday, January 19, 2025
Homeಯಕ್ಷಗಾನಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ "ಯಕ್ಷಜನಾರ್ದನ ಪ್ರಶಸ್ತಿ" ಪ್ರದಾನ, ಸಿರಿಬಾಗಿಲು ರಾಮಕೃಷ್ಣ ಮಯ್ಯ...

ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ “ಯಕ್ಷಜನಾರ್ದನ ಪ್ರಶಸ್ತಿ” ಪ್ರದಾನ, ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರಿಗೆ ಕಲಾಗೌರವ

ಉಜಿರೆ: ಯಾರಿಗೂ ಯಶಸ್ಸು ಸುಮ್ಮನೆ ಬರುವುದಿಲ್ಲ ,ಸೋಲು ಕೂಡ ಆ ಕ್ಷಣಕ್ಕೆ ಬರುವುದಿಲ್ಲ. ಯಶಸ್ಸಿನ ಹಿಂದೆ ಅಪಾರ ಪರಿಶ್ರಮ , ಪ್ರಯತ್ನ,ಸಿದ್ಧಿ ಹಾಗು ದೇವರ ಆಶೀರ್ವಾದ  ಬೇಕು. ಒಬ್ಬರಿಗೆ ಸೋಲು ಮತ್ತು ಗೆಲುವು ಎರಡೂ ಬರುತ್ತದೆ. ಯಾರು ಎಷ್ಟು ಬೇಗ ತನ್ನ ಪ್ರತಿಭೆಯ ಶಕ್ತಿ ಪ್ರದರ್ಶನ ಮಾಡುತ್ತಾನೋ ಅವರಿಗೆ ದೇವರು ಎಲ್ಲವನ್ನೂ ಕೊಡುತ್ತಾನೆ .ಕಲಾವಿದರ ದಶಕಗಳ ಸಾಧನೆಯ ತಪಸ್ಸು, ಅನುಭವದ ಸಾರ ಅವರಿಗೆ ಕೀರ್ತಿ, ಯಶಸ್ಸು ತರುತ್ತದೆ ಎಂದು ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ನುಡಿದರು. 

ಅವರು ಅ 16 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನ  ಆಶ್ರಯದಲ್ಲಿ ಉಜಿರೆಯ ಯಕ್ಷಜನ ಸಭಾ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದೊಂದಿಗೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆದ ತ್ರಿದಿನ ಯಕ್ಷೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಮೂಡಬಿದ್ರಿಯ ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಯಕ್ಷಗಾನ ಕಲೆ ಅವಿಭಜಿತ ದ .ಕ., ಕಾಸರಗೋಡು, ಉತ್ತರ ಕನ್ನಡ ಜಿಲ್ಲೆ ಹಾಗು ಉಳಿದ ಭಾಗಗಳಲ್ಲೂ  ತನ್ನ ವಿಶಿಷ್ಟ ಸ್ವರೂಪದಿಂದ ಶ್ರೇಷ್ಠತೆ ಪಡೆದಿದೆ. ಯಕ್ಷಗಾನ ಆಟ ,ತಾಳಮದ್ದಲೆಯನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ದವರು ಶೇಣಿ, ಪೆರ್ಲ, ಸಾಮಗ  ಮೊದಲಾದವರು. ಆದುನಿಕ ತಂತ್ರಜ್ಞಾನದಲ್ಲೂ ಸುಲಭ ವೀಕ್ಷಣೆಗಾಗಿ ಕಲೆಯನ್ನು  ಉಳಿಸಲು ಯುವಕರು ಹಾಗೂ ಮಹಿಳಾ ತಂಡಗಳು, ಹವ್ಯಾಸಿ ಕಲಾವಿದರೂ  ಆಸಕ್ತಿ ಬೆಳೆಸುತ್ತಿರುವುದು ಶ್ಲಾಘನೀಯ.

ಮೂಡಬಿದ್ರಿಯ ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡದ ಮೂಲಕ ಸಾವಿರಾರು ಹೊರನಾಡಿನ ವಿದ್ಯಾರ್ಥಿಗಳಿಗೆ ಯಕ್ಷಗಾನದ ಮೂಲಕ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವ ಪ್ರಯತ್ನವಾಗುತ್ತಿದೆ. ದೇವಸ್ಥಾನ ಹಾಗು ಸಂಘಟನೆಗಳ ಮೂಲಕ ಯಕ್ಷಗಾನ ಕಲೆಯನ್ನು ನಿರಂತರ  ಉಳಿಸಿ, ಬೆಳೆಸುವ ಕಾರ್ಯವಾಗಲಿ ಎಂದು ನುಡಿದು ಶುಭ ಹಾರೈಸಿದರು.  

ಯಕ್ಷಜನಾರ್ದನ ಪ್ರಶಸ್ತಿಪ್ರದಾನ: ಇದೆ ಸಂದರ್ಭದಲ್ಲಿ ಮೂರನೇ ವರ್ಷದ ಯಕ್ಷೋತ್ಸವದಲ್ಲಿ ಹಿರಿಯ ಯಕ್ಷಗಾನ ಸ್ತ್ರೀ ಪಾತ್ರಧಾರಿ, ಅರ್ಥಧಾರಿ ಡಾ| ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ “ಯಕ್ಷಜನಾರ್ದನ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಯಕ್ಷಗಾನ ಭಾಗವತ, ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಅಧ್ಯಕ್ಷ  ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರಿಗೆ ಕಲಾಗೌರವ ನೀಡಿ ಪುರಸ್ಕರಿಸಲಾಯಿತು. 

ಉಪನ್ಯಾಸಕ ಡಾ| ಶ್ರುತಕೀರ್ತಿರಾಜ್ ಅವರು ಸಮ್ಮಾನಿತರನ್ನು ಅಭಿನಂದಿಸಿದರು. ಸಮ್ಮಾನಿತ ರಾಮಚಂದ್ರ ರಾವ್ ಅವರು ತನ್ನ ಯಕ್ಷಗುರು ಕುರಿಯ ವಿಠಲ ಶಾಸ್ತ್ರೀ ಅವರ ಕಲಾಸೇವೆಯನ್ನು ಸ್ಮರಿಸಿ, ಗೌರವಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ದ .ಕ. ಜಿಲ್ಲಾ ಕ . ಸಾ .ಪ. ಅಧ್ಯಕ್ಷ ಡಾ| ಎಂ.ಪಿ.ಶ್ರೀನಾಥ್,  ಭುಜಬಲಿ ಧರ್ಮಸ್ಥಳ, ದಿನೇಶ್ ಬಳಂಜ ಉಪಸ್ಥಿತರಿದ್ದರು.

ಯಕ್ಷಜನ ಸಭಾ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ, ಜನಾರ್ದನ ತೋಳ್ಪಡಿತ್ತಾಯ ವಂದಿಸಿದರು. ಉಪನ್ಯಾಸಕ ಡಾ! ಶ್ರೀಧರ ಭಟ್ ಪ್ರಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು. ಯಕ್ಷೋತ್ಸವದ 3ನೇ ದಿನದ ಕಾರ್ಯಕ್ರಮವಾಗಿ  ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ವೆಂಕಟ್ರಮಣ ರಾವ್ ಬನ್ನೆಂಗಳ ಅವರ  ಹಾಡುಗಾರಿಕೆಯಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ “ಕರ್ಣಾವಸಾನ” ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

2ನೇ ದಿನ ಭಾಗವತ  ಸತ್ಯನಾರಾಯಣ ಪುಣಿಚಿತ್ತಾಯ ಅವರ ಹಾಡುಗಾರಿಕೆಯಲ್ಲಿ “ಚೂಡಾಮಣಿ ಪ್ರದಾನ” ಪ್ರಸಂಗದ ಯಕ್ಷಗಾನ ತಾಳಮದ್ದಳೆ ಹಿರಿಯ ಕಲಾವಿದರ ಕೂಡುವಿಕೆಯಿಂದ ನಡೆಯಿತು. (ಚಿತ್ರ: ಡಾ|ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಯಕ್ಷಜನಾರ್ದನ ಪ್ರಶಸ್ತಿ ಹಾಗೂ ಪ್ರದಾನ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರಿಗೆ ಕಲಾಗೌರವ)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments