ಕೇರಳವು ಮೊದಲಿಂದಲೂ ಸಾರಿಗೆ ವ್ಯವಸ್ಥೆ ಮತ್ತು ಅಲ್ಲಿನ ಉತ್ತಮ ರಸ್ತೆಗಳಿಗೆ ಹೆಸರುವಾಸಿ. ಇದಕ್ಕೆ ಅಪವಾದವೆಂಬಂತೆ ಒಳಪ್ರದೇಶಗಳಲ್ಲಿ ಕೆಲವು ಹೊಂಡಮಯ ರಸ್ತೆಗಳೂ ಇವೆ. ಆದರೆ ಅದು ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ತುಂಬಾ ಕಡಿಮೆ.
ದಕ್ಷಿಣ ಕನ್ನಡ ಪುತ್ತೂರು, ವಿಟ್ಲ ಮಾರ್ಗವಾಗಿ ಹೋಗುತ್ತಿರುವಾಗ ಅಡ್ಕಸ್ಥಳದಿಂದ ಚೆರ್ಕಳದ ರಸ್ತೆ ಉತ್ತಮ ಗುಣಮಟ್ಟವನ್ನು ಹೊಂದಿದೆ. ರಸ್ತೆಗಳಲ್ಲಿ ಹೊಂಡಗಳೇ ಬಹಳ ಅಪರೂಪ. ಇದಕ್ಕೆ ಅವರನ್ನು ಅಭಿನಂದಿಸಬೇಕು.
ಆದರೆ ರಸ್ತೆಗಳ ಬದಿಯಲ್ಲಿ ಇಕ್ಕೆಲಗಳಲ್ಲಿಯೂ ನೋಡುವುದಕ್ಕೆ ಹೋಗಬೇಡಿ. ನೀವು ದ್ವಿಚಕ್ರ ವಾಹನಗಳಲ್ಲಿ ಹೋಗುವುದಾದರೆ ನಿಮಗೆ ಹಲವಾರು ದೃಶ್ಯಗಳು ಕಾಣಸಿಗುತ್ತವೆ. ವಾಸ್ತವವಾಗಿ ರಸ್ತೆ ಚೆನ್ನಾಗಿದ್ದರೂ ರಸ್ತೆಬದಿಯನ್ನು ಹೊಲಸು ಮಾಡುವವರಿಗೆ ಏನೆನ್ನಬೇಕು?
ಅಡ್ಕಸ್ಥಳದಿಂದ ಸಂಚರಿಸುವಾಗ ಎಡನೀರು ವರೆಗೂ ನಿಮಗೆ ಅಲಲ್ಲಿ ಕಸದ ರಾಶಿಗಳನ್ನು ರಸ್ತೆ ಬದಿಯಲ್ಲಿ ಎಸೆದಿರುವುದು ಕಂಡುಬರುತ್ತದೆ. ಮಾಂಸದ ಅಂಗಡಿಗಳ ತ್ಯಾಜ್ಯಗಳು ಇದರಲ್ಲಿ ಸಿಂಹಪಾಲು. ಮಾಂಸದ ತ್ಯಾಜ್ಯಗಳನ್ನು ಗೋಣಿಗಳಲ್ಲಿ ತುಂಬಿಸಿ ಎಸೆಯಲಾಗಿದೆ. ಇದೆಲ್ಲಾ ರಾತ್ರಿಯ ಹೊತ್ತಿನಲ್ಲಿ ನಡೆಯುವ ಕಾರುಬಾರು.
ಎಲ್ಲಿ ಜನಸಂಚಾರ ಇಲ್ಲವೋ ಅಂತಹ ಪ್ರದೇಶದಲ್ಲಿ ಈ ಕಸದ ರಾಶಿಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಪ್ರದೇಶದಲ್ಲಿ ಸಂಚರಿಸುವಾಗ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿಯಿದೆ. ಇಂತಹ ತ್ಯಾಜ್ಯಗಳನ್ನು ಹಲವಾರು ಕಡೆಗಳಲ್ಲಿ ಎಸೆಯಲಾಗಿದೆ. ಕೆಳಗಿನ ಕೆಲವು ಸ್ಯಾಂಪಲ್ಗಳನ್ನು ನೋಡಿ.



ಈ ಪ್ರದೇಶ ಉಕ್ಕಿನಡ್ಕದಿಂದ ಸ್ವಲ್ಪ ಮುಂದೆ ಪರ್ತಿಕ್ಕಾರಿಗೆ ಇಳಿಯುವ ಸಮೀಪದಲ್ಲೇ ಇದೆ. ಇಲ್ಲಿ ನಿಜವಾಗಿಯೂ ‘ತ್ಯಾಜ್ಯ ವಸ್ತುಗಳನ್ನು ಬಿಸಾಡಬೇಡಿ’ ಎಂಬ ಬೋರ್ಡ್ ಕೂಡ ಹಾಕಿದ್ದಾರೆ. ಆದರೂ ಇಲ್ಲೇ ತಂದು ಎಸೆಯುತ್ತಾರೆ. ಯಾಕೆಂದರೆ ಕಸ ಎಸೆಯುವವರಿಗೆ ಇದೊಂದು ಸೇಫ್ ಜಾಗ!


ಇದು ಬದಿಯಡ್ಕದ ಬೀಜಂತಡ್ಕ ಹಾಗೂ ನೆಕ್ರಾಜೆಯ ನಡುವೆ. ಇಲ್ಲಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸದ ರಾಶಿ, ತ್ಯಾಜ್ಯ ತುಂಬಿದ ಗೋಣಿಗಳು ಕಾಣಸಿಗುತ್ತವೆ.



ಈ ಪ್ರದೇಶ ಇರುವುದು ಎದುರ್ತೋಡಿನಿಂದ ಮುಂದೆ ಎಡನೀರಿಗೆ ಹೋಗುವಾಗ ಇಳಿಜಾರಾದ ತಿರುವು ಪ್ರದೇಶ. ಇಲ್ಲಿ ಕೂಡಾ ನಾಮಫಲಕವನ್ನು ಹಾಕಲಾಗಿದೆ. ಬಹುಶಃ ಯಾವುದೋ ದೈವಸಾನ್ನಿಧ್ಯ ಇರುವ ಪ್ರದೇಶ ಎಂದು ಬೋರ್ಡ್ ಹಾಕಿರಬಹುದು. ಆದರೂ ಅದರ ಬುಡದಲ್ಲಿಯೇ ತ್ಯಾಜ್ಯ ತುಂಬಿದ ಲಕೋಟೆಗಳನ್ನು ತಂದು ಸುರಿದಿದ್ದಾರೆ.
ಇದು ಕೇವಲ ಒಂದೆರಡು ಉದಾಹರಣೆಗಳಷ್ಟೇ. ಇಂತಹವು ಅಲ್ಲಲ್ಲಿ ನಮಗೆ ಕಾಣಸಿಗುತ್ತವೆ. ಇಷ್ಟು ಒಳ್ಳೆಯ ರಸ್ತೆಯ ಇಕ್ಕೆಲಗಳನ್ನು ಯಾಕೆ ಹೀಗೆ ಹಾಳು ಮಾಡುತ್ತಾರೆ ಎಂಬುದನ್ನು ಯೋಚಿಸಿ ಖೇದವಾಗುತ್ತದೆ. ನಾವು ಬರೀ ಆಡಳಿತವನ್ನು, ಸರಕಾರವನ್ನು ದೂರಿದರೆ ಸಾಲದು. ಉತ್ತಮ ನಾಗರಿಕರಾಗಿ ಪರಿಸರವನ್ನು ಸುವ್ಯವಸ್ಥಿತವಾಗಿ, ಸ್ವಚ್ಛವಾಗಿ ಇಡುವ ಮನೋಸ್ಥಿತಿ ನಮ್ಮಲ್ಲಿರಬೇಕು.