ಉಡುಪಿ :ಆರು ತಲೆಮಾರುಗಳಿಂದ ಯಕ್ಷಗಾನ ಗೊಂಬೆಯಾಟವನ್ನು ನಡೆಸಿಕೊಂಡು ಬಂದಿರುವ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಬೊಂಬೆಯಾಟ ಟ್ರಸ್ಟ್ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಈ ಬಾರಿ ಉಡುಪಿಯ ಯಕ್ಷಗಾನ ಕಲಾರಂಗ ನೀಡುವ ‘ಶ್ರೀವಿಶ್ವೇಶತೀರ್ಥ’ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕೇವಲ ಈ ಪ್ರದೇಶದಲ್ಲಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ಅನ್ಯಾನ್ಯ ದೇಶಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಿದ ಹೆಗ್ಗಳಿಕೆಗೆ ಸಂಸ್ಥೆ ಭಾಜನವಾಗಿದೆ. ಪರಂಪರೆಯ ಹಾಡುಗಾರಿಕೆ ಮತ್ತು ಅರ್ಥಗಾರಿಕೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.
ಪ್ರಸಕ್ತ ಭಾಸ್ಕರ ಕೊಗ್ಗ ಕಾಮತರು ಇದರ ನಿರ್ದೇಶಕರಾಗಿದ್ದು, ಉಪ್ಪಿನಕುದ್ರುವಿನಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ರಂಗಮಂದಿರವನ್ನು ನಿರ್ಮಿಸಿ ಅದನ್ನು ಬೇರೆ ಬೇರೆ ಕಲಾಪ್ರಕಾರಗಳಿಗೂ ಉಚಿತವಾಗಿ ನೀಡುತ್ತಾ ವಿವಿಧ ಕಲಾ ಸಂವರ್ಧನೆಗೆ ಅನುವು ಮಾಡಿಕೊಟ್ಟಿದ್ದಾರೆ.
ಪ್ರಶಸ್ತಿಯು 50,000/- ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 13, 2022 ಭಾನುವಾರ ಮಂಗಳೂರಿನ ಟೌನ್‌ಹಾಲ್‌ನಲ್ಲಿ ಜರಗಲಿದೆ ಎಂಬದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.