ಕೋಯಿಕ್ಕೋಡು: ವಿಲಕ್ಷಣ ಅಪಘಾತದಲ್ಲಿ, ಮೂರು ವರ್ಷದ ಬಾಲಕಿ ತನ್ನ ತಾಯಿ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾಳೆ.
ಶುಕ್ರವಾರ ಬೆಳಗ್ಗೆ ಇಲ್ಲಿನ ಕೊಡುವಳ್ಳಿಯಲ್ಲಿರುವ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕಿ ಅಪಘಾತಕ್ಕೀಡಾಗಿದ್ದಾಳೆ.
ಮೃತರನ್ನು ಈಂಗಪುಳ ಮೂಲದ ನಜೀರ್ ಮತ್ತು ನೆಲ್ಲಂಕಂಡಿ ಮೂಲದ ಲುಬ್ನಾ ಫೆಬಿನಿ ಅವರ ಪುತ್ರಿ ಮರಿಯಂ ನಜೀರ್ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ ಮಗುವಿನ ತಾಯಿ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದಿದೆ. ಕೂಡಲೇ ಬಾಲಕಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ನಂತರ ಮುಂದಿನ ಕ್ರಮಕ್ಕಾಗಿ ಮೃತದೇಹವನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.