ಮೇಲಿನ ಚಿತ್ರದಲ್ಲಿ ಕಾಣುವ ಪ್ರದೇಶ ಪುತ್ತೂರಿನ ಸಂಪ್ಯ ಮತ್ತು ಕಲ್ಲರ್ಪೆ ನಡುವಿನ ತಿರುವಿನ ರಸ್ತೆ ಇರುವ ಜಾಗ. ಇದು ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. ಈ ರಸ್ತೆ ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಾಗಿದೆ.
ಕೆಲವು ತಿಂಗಳುಗಳ ಹಿಂದೆ ಈ ಪ್ರದೇಶವನ್ನು ಕೆಲವರಾದರೂ ಗಮನಿಸಿರಬಹುದು. ಪ್ರತಿದಿನವೂ ಕಸದ ರಾಶಿಯೇ ಬಂದು ಇಲ್ಲಿಗೆ ಬೀಳುತ್ತಿತ್ತು. ಮನೆ,ಹೋಟೆಲ್, ಅಂಗಡಿ ಎಂಬ ಬೇಧವಿಲ್ಲದೆ ಎಲ್ಲರೂ ತ್ಯಾಜ್ಯ ವಸ್ತುಗಳನ್ನು ಇಲ್ಲಿ ತಂದು ಸುರಿಯುತ್ತಿದ್ದರು. ಮಾಂಸದಂಗಡಿಗಳ ದಿನನಿತ್ಯದ ತ್ಯಾಜ್ಯ ಗೋಣಿಗಳಲ್ಲಿ ಬಂದು ಬೀಳುತ್ತಿತ್ತು.
ಇಲ್ಲಿ ನಡೆದುಕೊಂಡು ಹೋಗುವವರಿಗಂತೂ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿಯಿತ್ತು. ಏನೇ ಮಾಡಿದರೂ ಕಸ ಹಾಕುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಆರ್ಯಾಪು ಗ್ರಾಮ ಪಂಚಾಯತ್ ಒಂದು ನಿರ್ಧಾರಕ್ಕೆ ಬಂದು ಇಲ್ಲಿ ಒಂದು ದೊಡ್ಡದಾದ ಫಲಕವನ್ನು ಹಾಕಲಾಯಿತು.
”ಈ ಪ್ರದೇಶ ಸಿಸಿಟಿವಿ ಕಣ್ಗಾವಲಿನಲ್ಲಿದೆ. ಕಸ ಸುರಿಯುವವರಿಗೆ 5000 ರೂಪಾಯಿಗಳ ದಂಡ ವಿಧಿಸಲಾಗುವುದು” ಎಂದು ಆ ಬೋರ್ಡಿನಲ್ಲಿದೆ. ಈ ಬೋರ್ಡ್ ಇಲ್ಲಿ ಹಾಕಿದ ನಂತರ ಇಲ್ಲಿ ಯಾರೂ ಕಸ ಹಾಕುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಆದರೂ ಬೋರ್ಡಿನ ಸುತ್ತಲೂ ಕಣ್ಣು ಹಾಯಿಸಿದಾಗ ಆ ಬೋರ್ಡಿನ ಪಕ್ಕದಲ್ಲಿಯೇ ಒಂದೆರಡು ಕಸದ ಕಟ್ಟುಗಳು ಕಂಡುಬಂದುವು. ಆ ಕಸ ಹಾಕಿದವರಿಗೆ ದಂಡ ಹಾಕಲಾಗುವುದೇ ಎಂದು ಕಾದು ನೋಡಬೇಕಾಗಿದೆ.
ಆದರೂ ಎಲ್ಲ ಕಡೆಯಲ್ಲೂ ಈ ಮ್ಯಾಜಿಕ್ ಕೆಲಸ ಮಾಡುವುದಿಲ್ಲ. ಸಿಸಿಟಿವಿ ಕ್ಯಾಮರಾವನ್ನೇ ಹಾಳುಮಾಡಿ ಅಥವಾ ತಿರುಗಿಸಿ ಕಸ ಹಾಕುವವರಿಗೆ ನಮ್ಮಲ್ಲೇನೂ ಕೊರತೆಯಿಲ್ಲ. ಅಂತಹಾ ಕೆಲವು ಪ್ರಕರಣಗಳನ್ನು ಮುಂದಿನ ಸುದ್ದಿಗಳಲ್ಲಿ ನಿಮಗೆ ತೋರಿಸುತ್ತೇವೆ.
ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]