ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸರಳ ವಾಸ್ತು ಕಂಪನಿ ಸಂಸ್ಥಾಪಕ ಆರ್ಕಿಟೆಕ್ಟ್ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಂತಕರ ವಿರುದ್ಧ ತನಿಖಾಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ವಿಶ್ವ ಶಕ್ತಿ ಸಂಪರ್ಕದ ಚಂದ್ರಶೇಖರ ಗುರೂಜಿ ಅವರ ಹತ್ಯೆಗಿಂತಲೂ ಜನರು ಹೆಚ್ಚು ಬೆಚ್ಚಿಬಿದ್ದದ್ದು ಅವರು ಸಂಪಾದಿಸಿದ ಕೋಟಿಗಟ್ಟಲೆ ಆಸ್ತಿಯನ್ನು ನೋಡಿ.ಅವರ ಸ್ವಾಧೀನದಲ್ಲಿದ್ದ ಆಸ್ತಿಯೆಷ್ಟು? ಅವರ ಸ್ವಾಧೀನದಲ್ಲಿದ್ದ ಫ್ಲಾಟ್, ಜಮೀನು, ಸೈಟ್ ಇತ್ಯಾದಿಗಳ ವಿವರ, ಬೇರೆಯವರ ಹೆಸರಿನಲ್ಲಿ ಮಾಡಿದ ಕೋಟಿಗಟ್ಟಲೆ ಆಸ್ತಿಗಳು, ಅವರು ಕೊಡುತ್ತಿದ್ದ ಜಾಹೀರಾತುಗಳು, ಟಿವಿ ಮಾಧ್ಯಮದ ಜಾಹೀರಾತುಗಳಿಗೆ ಅವರು ಖರ್ಚು ಮಾಡುತ್ತಿದ್ದ ಹಣ ಇತ್ಯಾದಿಗಳನ್ನೆಲ್ಲಾ ಪ್ರಜ್ಞಾವಂತರು ಮೊದಲಿಂದಲೂ ಗಮನಿಸುತ್ತಿದ್ದರು.
ಆದರೆ ಗುರೂಜಿಯವರು ಸಾಕಷ್ಟು ಜನಪ್ರಿಯತೆಯನ್ನು ಸಾಧಿಸಿ ಆಗಿತ್ತು. ಹಂತಕ ಮಹಾಂತೇಶ್ ಹೆಸರಿನಲ್ಲಿದ್ದ 11 ಕೋಟಿ ಬೇನಾಮಿ ಜಮೀನಿನ ಆಸ್ತಿ ವ್ಯಾಜ್ಯವೇ ಹತ್ಯೆಗೆ ಕಾರಣ ಎಂಬುದಾಗಿ ಉಲ್ಲೇಖಿಸಲಾಗಿದೆ.
“ವಿಚಾರಣೆ ವೇಳೆ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಸಿಕ್ಕಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ 11 ಕೋಟಿ ರೂಪಾಯಿ ಮೌಲ್ಯದ 4.5 ಎಕರೆ ಜಾಗ ಇದೆ. ಈ ಜಾಗವನ್ನು ಗುರೂಜಿ ಹಂತಕ ಮಹಾಂತೇಶ ಹೆಸರಿಗೆ ಮಾಡಿದ್ದರು. ಈ ಜಾಗವನ್ನು ಮಹಾಂತೇಶ ಗುರೂಜಿಗೆ ತಿಳಿಯದಂತೆ ಮಾರಿದ್ದರಿಂದ ವಿವಾದ ಆರಂಭವಾಗಿತ್ತು. ಈ ವಿಚಾರವಾಗಿ ಗುರೂಜಿ ಕೋರ್ಟ್ ನಲ್ಲಿ ಕೇಸ್ ಹಾಕಿದ್ದರು.
ಕೆಳಗಿನ ಕೋರ್ಟಿನಲ್ಲಿ ಮಹಾಂತೇಶ್ ಪರವಾಗಿ ತೀರ್ಪು ಬಂದದ್ದರಿಂದ ತೀರ್ಪು ಪ್ರಶ್ನಿಸಿ ಗುರೂಜಿ ಸಿವಿಲ್ ಕೋರ್ಟ್ ಗೆ ಹೋಗಿದ್ದರು. ಹಂತಕರು ಸರಳವಾಸ್ತು ಸಂಸ್ಥೆಗೆ ವಿರುದ್ಧವಾಗಿ ಮತ್ತೊಂದು ಸಂಸ್ಥೆ ನಡೆಸುತ್ತಿದ್ದರು. ಇದೂ ಗುರೂಜಿಯ ಕೋಪಕ್ಕೆ ಕಾರಣವಾಗಿ ಇವರಿಗೆ ಹೆಚ್ಚು ಪ್ರಯೋಜನ ಆಗದಂತೆ ನೋಡಿಕೊಂಡಿದ್ದರು.
ಇದರಿಂದ ಕೋಪಗೊಂಡ ಮಹಾಂತೇಶ್ ಮತ್ತು ಇನ್ನೊಬ್ಬ ಹಂತಕ ಗುರೂಜಿ ಅಪಾರ್ಟ್ ಮೆಂಟಿನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ದೂರು ಕೊಟ್ಟಿದ್ದ. ಈ ದೊರನ್ನು ಹಿಂದೆ ಪಡೆಯುವಂತೆ ಗುರೂಜಿ ಒತ್ತಡ ಹೇರುತ್ತಲೇ ಇದ್ದರು. ಹೀಗೆ ಒಂದರ ಹಿಂದೆ ಒಂದರಂತೆ ಜಗಳ ಆಗುತ್ತಲೇ ಇತ್ತು. ಇದನ್ನೆಲ್ಲಾ ಸಹಿಸದ ಹಂತಕರು ಬಹಳಷ್ಟು ಆಲೋಚಿಸಿ ನಿರ್ಧಾರಕ್ಕೆ ಬಂದರು.
ವಿಶ್ವ ಶಕ್ತಿಯ ಸಂಪರ್ಕದ ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಯವರನ್ನು ಹತ್ಯೆ ಮಾಡಲು ನಿರ್ಧರಿಸಿದರು. ಮೂರು ತಿಂಗಳು ಮೊದಲಿನಿಂದಲೂ ಹತ್ಯೆ ಮಾಡಲು ಹೊಂಚು ಹಾಕುತ್ತಿದ್ದರು.
ಸಂಧಾನ ಮಾಡಿಕೊಳ್ಳೋಣ ಎಂದು ಗುರೂಜಿಗೆ ಫೋನ್ ಮಾಡಿ ತಿಳಿಸಿದಾಗ ಇವರ ನಾಟಕವನ್ನು ಅರಿಯದ ಗುರೂಜಿ ಕೂಡಲೇ ಒಪ್ಪಿದರು. ಹಂತಕರು ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಹೋಟೆಲ್ಗೆ ಬಂದಿದ್ದರು. ಚಾಕು ತಂದಿದ್ದು ಗೊತ್ತಾಗಬಾರದು ಅಂತ ದಾಖಲೆ ಪತ್ರಗಳ ಮಧ್ಯೆ ಚಾಕು ಇಟ್ಟುಕೊಂಡು ಬಂದಿದ್ದರು. ಮೊದಲು ದಾಖಲೆ ಪತ್ರ ತೆಗೆಯುವಂತೆ ನಾಟಕವಾಡಿ ಬಳಿಕ ಚಾಕು ತೆಗೆದು ಹತ್ಯೆ ಮಾಡಿದ್ದರು”. ಈ ಎಲ್ಲಾ ವಿವರಗಳು ಚಾರ್ಜ್ ಶೀಟಿನಲ್ಲಿ ಇವೆ ಎಂದು ತಿಳಿದುಬಂದಿದೆ.
ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಎಂಬುವವರ ವಿರುದ್ಧ ಪೊಲೀಸರು 800ಕ್ಕೂ ಹೆಚ್ಚು ಪುಟಗಳ ದೂರನ್ನು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಜೂ.5ರಂದು ಉಣಕಲ್ಲ ಕೆರೆ ಬಳಿಯ ಹೊಟೇಲೊಂದರಲ್ಲಿ ಇಬ್ಬರು ಹಂತಕರು ಗುರೂಜಿ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
ಘಟನೆ ನಡೆದ 4 ಗಂಟೆಯೊಳಗೆ ರಾಮದುರ್ಗ ಬಳಿ ಹಂತಕರನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ತಡೆದು ಬಂಧಿಸಿದ್ದಾರೆ. ಇದೀಗ ಬಂಧಿತರ ವಿರುದ್ಧ 800ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ನೊಂದಿಗೆ ಕೊಲೆಗೆ ಸಂಬಂಧಿಸಿದ ಆಸ್ತಿ ಮತ್ತಿತರ ವಿಷಯಗಳ ದಾಖಲೆಗಳು ಹಾಗೂ ಸಂಗ್ರಹಿಸಿದ ಸಾಕ್ಷಿಗಳನ್ನು ಸಲ್ಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ತಿಳಿದು ಬಂದಿದೆ. ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಎಸಿಪಿ ವಿನೋದ ಮುಕ್ತೇದಾರ್ ನೇತೃತ್ವದಲ್ಲಿ ಐವರ ತನಿಖಾ ತಂಡ ರಚಿಸಲಾಗಿತ್ತು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions