ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ನಮಗೆಲ್ಲಾ ಪರಿಚಿತರು. ಶಿಕ್ಷಣ, ಯಕ್ಷಗಾನ ಕಲೆ, ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಸಾಧಕರಿವರು. ಶಿಕ್ಷಣ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿ ಸ್ವಯಂ ನಿವೃತ್ತರು. ಪ್ರಸ್ತುತ ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಸಾಧಕರಾಗಿ ಕಾಣಿಸಿಕೊಂಡಿದ್ದಾರೆ.
ಲೇಖಕರಾಗಿ (ಲೇಖನ, ಕಥೆ, ಅಂಕಣಕಾರ, ಪುಸ್ತಕ ರಚನೆ), ಖ್ಯಾತ ತಾಳಮದ್ದಳೆ ಅರ್ಥಧಾರಿಯಾಗಿ, ಭಾಷಣಕಾರರಾಗಿ ಇವರು ಪ್ರಸಿದ್ಧರು. ‘ಪೀಠಿಕಾ ಪ್ರಕರಣ’ ಎಂಬುದು ಇವರು ಬರೆದ ವಿಶಿಷ್ಟವಾದ ಒಂದು ಕೃತಿ.
ಲೇಖಕ ಶ್ರೀ ರಾಧಾಕೃಷ್ಣ ಕಲ್ಚಾರರು ಬರೆದ ‘ಪೀಠಿಕಾ ಪ್ರಕರಣ’ ಎಂಬ ಈ ಕೃತಿಯು ಇತ್ತೀಚಿಗೆ ಓದುಗರ ಕೈಸೇರಿತ್ತು. ಹೊತ್ತಗೆಯ ಪ್ರಕಾಶಕರು ‘ನಿವೇಶ ಪ್ರಕಾಶನ ವಿಟ್ಲ’. ಇದು ಯಕ್ಷಗಾನ ಕಲೆಗೆ ಸಂಬಂಧಿಸಿದ ಒಂದು ಅಮೂಲ್ಯ ಪುಸ್ತಕ. ಈ ಪುಸ್ತಕದಲ್ಲಿರುವ ವಿಚಾರಗಳನ್ನು ಅನುಸರಿಸಿದರೆ ಪಾತ್ರಧಾರಿಗೆ ಪೀಠಿಕೆಯಲ್ಲಿ ಏನನ್ನು ಹೇಳಬಹುದು ಎಂಬ ಗೊಂದಲವು ನಿವಾರಣೆಯಾದೀತು.
ಈ ಕೃತಿಯಲ್ಲಿ ಮೂವತ್ತೆಂಟು ಪ್ರಸಂಗಗಳ ನೂರ ನಲುವತ್ತು ಪಾತ್ರಗಳ ಪೀಠಿಕೆಯನ್ನು ಹೇಗೆ ಹೇಳಬಹುದೆಂಬುದನ್ನು ಲೇಖಕರಾದ ಶ್ರೀ ರಾಧಾಕೃಷ್ಣ ಕಲ್ಚಾರರು ಅಕ್ಷರ ರೂಪದಲ್ಲಿ ನೀಡಿರುತ್ತಾರೆ. ಒಂದು ಪಾತ್ರವನ್ನು ಪೀಠಿಕೆಯ ಸಂದರ್ಭ ಕಟ್ಟಿಕೊಡುವಲ್ಲಿ ಈ ಕೃತಿಯು ನಿರ್ದೇಶಕ ಸ್ಥಾನದಲ್ಲಿ ಇದೆ ಎಂದು ಖಂಡಿತವಾಗಿ ಹೇಳಬಹುದು. ಕಲಾವಿದರಿಗೆ ಖಂಡಿತವಾಗಿ ಇದು ಒಂದು ಬಹು ಉಪಯೋಗೀ ಕೃತಿಯಾಗಿ ಪರಿಣಮಿಸೀತು. ಇದು ಸುಮಾರು ಇನ್ನೂರ ಇಪ್ಪತ್ತು ಪುಟಗಳಿಂದ ಕೂಡಿದ ಪುಸ್ತಕವು.
“ಇದು ಕಲಾವಿದರಿಗೆ ಒಂದು ಮಾದರಿಯನ್ನು ಒದಗಿಸುತ್ತದೆ ಹೊರತು ಮಿತಿಯನ್ನು ಅಲ್ಲ. ಇದನ್ನು ವಿಸ್ತರಿಸುವ, ಕತ್ತರಿಸುವ, ಇನ್ನೊಂದು ಸಂದರ್ಭದಲ್ಲಿ ಬಳಸುವ, ಕೈಬಿಡುವ ಸ್ವಾತಂತ್ರ್ಯವು ಮುಕ್ತವಾಗಿಯೇ ಇದೆ” ಎಂಬುದನ್ನು ಲೇಖಕನಾಗಿ ಶ್ರೀ ರಾಧಾಕೃಷ್ಣ ಕಲ್ಚಾರರು ತಿಳಿಸಿರುತ್ತಾರೆ.
ಈ ಕೃತಿಗೆ ಸುಂದರವಾಗಿ ಬೆನ್ನುಡಿಯನ್ನು ಬರೆದವರು ಶ್ರೀ ಸುಬ್ರಾಯ ಸಂಪಾಜೆ ಅವರು. ಈ ಪುಸ್ತಕವನ್ನು ಮುದ್ರಿಸಿದವರು ದಿಗಂತ ಮುದ್ರಣ (ಲಿ) ಯೆಯ್ಯಾಡಿ ಮಂಗಳೂರು ಅವರು. ಇದರ ಬೆಲೆ ಕೇವಲ ನೂರ ಎಂಭತ್ತು ರೂಪಾಯಿಗಳು. ಪರಕಾಯ ಪ್ರವೇಶ, ಆಲೋಚನ, ಅರ್ಥಲೋಕ ಎಂಬ ಕೃತಿಗಳನ್ನೂ ರಚಿಸಿ ಶ್ರೀ ರಾಧಾಕೃಷ್ಣ ಕಲ್ಚಾರರು ಕಲಾ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುತ್ತಾರೆ. ಈ ಕೃತಿಗಳನ್ನು ಓದುಗರು ಮೆಚ್ಚಿ ಪ್ರಶಂಸಿಸಿರುತ್ತಾರೆ.
‘ಪೀಠಿಕಾ ಪ್ರಕರಣ’ ಎಂಬ ಈ ಕೃತಿಯು ಯಕ್ಷಗಾನಕ್ಕೆ ಒಂದು ಅಮೂಲ್ಯ ಕೊಡುಗೆಯಾಗಿ ಪರಿಣಮಿಸಲಿ. ಕಲಾವಿದರು ಇದರ ಪ್ರಯೋಜನವನ್ನು ಪಡೆಯುವಂತಾಗಲಿ. ಶ್ರೀ ರಾಧಾಕೃಷ್ಣ ಕಲ್ಚಾರರಿಂದ ಇನ್ನಷ್ಟು ಕೊಡುಗೆಗಳು ಸಾರಸ್ವತ ಲೋಕಕ್ಕೆ ಕೊಡಲ್ಪಡಲಿ. ವಿದ್ಯಾಧಿದೇವತೆ ಶ್ರೀ ಶಾರದಾ ದೇವಿಯ ಅನುಗ್ರಹವು ಸದಾ ಇರಲಿ ಎಂಬ ಆಶಯಗಳು.
ವಿಳಾಸ: ಶ್ರೀ ರಾಧಾಕೃಷ್ಣ ಕಲ್ಚಾರ್, ನಿವಾಸ ಪ್ರಕಾಶನ 4/27, ಶಿವಾಜಿನಗರ, ಅಂಚೆ ವಿಟ್ಲ, ದ. ಕ, ಮೊಬೈಲ್: 9449086653
ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions