ಬೆಂಗಳೂರಿನ ಶೇಷಾದ್ರಿಪುರಂ ‘ಆತ್ಮಾಲಯ ಅಕಾಡೆಮಿ ಆಫ್ ಆರ್ಟ್ & ಕಲ್ಚರ್’ ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ. ಪದ್ಮಜಾ ಭರತನಾಟ್ಯ ಕಲಾವಿದೆ ಮತ್ತು ಸಂಶೋಧಕಿಯಾಗಿ ಮತ್ತು ಕಲಾಪೋಷಕರಾಗಿ ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಲ್ಪಟ್ಟವರು.
ಭರತನಾಟ್ಯವನ್ನು ಕೆ. ಕಲ್ಯಾಣ ಸುಂದರಂ ಮತ್ತು ಶ್ರೀ ಚಕ್ಯಾರ್ ರಾಜನ್ ಇವರಿಂದ ಅಭ್ಯಾಸ ಮಾಡಿದ ಇವರು ವಾಣಿಜ್ಯ, ಕಾನೂನು ಪದವೀಧರರು. ಕೋರಿಯೋಗ್ರಫಿಯಲ್ಲಿ ಡಿಪ್ಲೋಮೋ, ತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿ.ವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ .
ನೃತ್ಯ ಪರೀಕ್ಷಕಿ, ನೃತ್ಯ ಪ್ರಕಾರಗಳ ಅಂಕಣಗಾರ್ತಿ, ತಂತ್ರ ಮತ್ತು ನಾಟ್ಯ ಗ್ರಂಥದ ಲೇಖಕಿ ಆಗಿರುವ ಇವರ ರಿತು ಶೃಂಗಾರ, ನವದರ್ಶನಂ, ಏಕಮ್ ಸತ್, ಬಿಂದು, ಹ್ರೀಂ, ಶಿವೋಹಂ ಇತ್ಯಾದಿ ನೃತ್ಯ ಪ್ರದರ್ಶನಗಳು ಇವರ ಉತ್ಕೃಷ್ಟ ಕಲಾಸಾಧನೆಗೆ ಸಾಕ್ಷಿಯಾಗಿದೆ.
ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ 32 ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದ ಗರಿಮೆ ಇವರದು. ದೂರದರ್ಶನದಲ್ಲಿ ಇವರ ನಾಟ್ಯ ತಂತ್ರ ಧಾರಾವಾಹಿ ಪ್ರಸಾರಗೊಂಡಿದೆ. ವಿಶ್ವ ಸಂಸ್ಕೃತ ಸಮ್ಮೇಳನ, ಪಾರ್ಲಿಮೆಂಟ್ ಆಫ್ ರಿಲಿಜನ್ಸ್, ಸಂಗೀತ ನಾಟಕ ಅಕಾಡೆಮಿ ನಾಟ್ಯಶಾಸ್ತ್ರ ಸೆಮಿನಾರ್, ಚೆನ್ನೈ ನಾಟ್ಯಕಲಾ ಸಮಾವೇಶ ಮೊದಲಾದವುಗಳಲ್ಲಿ ಇವರ ಪಾಂಡಿತ್ಯವು ಅನಾವರಣಗೊಂಡಿದೆ.
ಆಂಧ್ರಪ್ರದೇಶದ ಸಿಲಿಕಾನ್ ಯುನಿವರ್ಸಿಟಿಯ ಭರತನಾಟ್ಯ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೂಡ ನಿಯೋಜಿತರಾಗಿರುವ ಇವರು ಅತಿಥಿ ಉಪನ್ಯಾಸಕರಾಗಿ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರತರು.
ಪಡೆದ ಪುರಸ್ಕಾರಗಳು: ಕರ್ನಾಟಕ ಕಲಾಶ್ರೀ ಸ್ತ್ರೀ ಶಕ್ತಿ ಪ್ರಶಸ್ತಿ , ರೆಕ್ಸ್ ಗ್ಲೋಬಲ್ ಫೆಲೋ, ಸಿಂಗಾರಮಣಿ, ರಾಷ್ಟ್ರೀಯ ಅತ್ಯುತ್ತಮ ಮಹಿಳಾ ಸಾಧಕಿ, ಅಜಂತ ವಿಶ್ವಕಲಾ ರತ್ನ ಪ್ರಶಸ್ತಿ, ಸುಬ್ರಮಯ್ಯ ಟ್ರಸ್ಟ್ ಅವಾರ್ಡ್ ಹಾಗೂ ಇತರ ಗೌರವಗಳಿಗೆ ಪಾತ್ರರಾಗಿದ್ದಾರೆ.
ಅವಕಾಶ ವಂಚಿತರಾದ ಬಾಲ ಪ್ರತಿಭೆಗಳಿಗೆ ಭರತನಾಟ್ಯವನ್ನು ಅಭ್ಯಾಸ ಮಾಡಿದ ಇವರ ಶ್ರಮಕ್ಕೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಡಾ. ಎ.ಪಿ.ಜೆ ಕಲಾಂ ಇವರನ್ನು ಗೌರವಿಸಿದ್ದಾರೆ.
ಇವರ ಆತ್ಮಾಲಯ ಅಕಾಡೆಮಿ ವಿವಿಧ ಕ್ಷೇತ್ರದ ಸಾಧಕರನ್ನು ಜಸ್ಟಿಸ್ ಕೆ.ಜಗನ್ನಾಥ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ರೂಪಾಯಿ 50,000 ನಗದು ಪುರಸ್ಕಾರದೊಂದಿಗೆ ಗೌರವಿಸುತ್ತಾ ಬಂದಿದೆ. ಯಕ್ಷಗಾನ ಹಾಸ್ಯಗಾರ ಪೆರುವೊಡಿ ನಾರಾಯಣ ಭಟ್, ಗಾನ ಕೇಸರಿ ಕುದ್ಮಾರು ವೆಂಕಟರಮಣ, ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್, ಕುಂಬ್ಳೆ ಶ್ರೀಧರ್ ರಾವ್ (2022) ಈ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರು.
ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ನೀಡಿದ ಭರತನಾಟ್ಯದ ಪ್ರದರ್ಶನದ ಭಂಗಿಗಳನ್ನು ಇಲ್ಲಿ ನೀಡಲಾಗಿದೆ. ಕಲಾವಿದರಾಗಿ ಕಲಾವಿದರನ್ನು ಗುರುತಿಸುವ ಇವರ ಕಲಾ ಪ್ರೀತಿ ಅನುಪಮವಾದುದು.
ದಿವಾಕರ ಆಚಾರ್ಯ ಗೇರುಕಟ್ಟೆ (9449076275)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions