Friday, September 20, 2024
Homeಸುದ್ದಿ"ಚಿನ್ನದ ಆಭರಣಗಳ ಖರೀದಿ - ವಹಿಸಬೇಕಾದ ಮುಂಜಾಗರೂಕತೆಗಳು" : ಇದರ ಬಗ್ಗೆ ನಿಮಗೆಷ್ಟು ಗೊತ್ತು?

“ಚಿನ್ನದ ಆಭರಣಗಳ ಖರೀದಿ – ವಹಿಸಬೇಕಾದ ಮುಂಜಾಗರೂಕತೆಗಳು” : ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಚಿನ್ನ ಎಂದರೆ ಹೆಂಗಸರಿಗೆ ಎಷ್ಟು ಇಷ್ಟ ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಎಷ್ಟು ಇಷ್ಟ ಎಂದರೆ ಬಾಕಿ ಏನೇ ದೋಷಗಳಿದ್ದರೂ ಅದನ್ನು ಕಡೆಗಣಿಸಿ ತನಗಿಷ್ಟವಾದ ಆಭರಣಗಳನ್ನು ಖರೀದಿಸುವಷ್ಟು. ಹೆಣ್ಣುಮಕ್ಕಳಿಗೆ ಚಿನ್ನದಲ್ಲಿ ಹೂಡಿಕೆ ಮಾಡಲು ಇಷ್ಟವಿಲ್ಲ. ಕೊರಳಲ್ಲಿಯೋ ಅಥವಾ ದೇಹದಲ್ಲಿಯೋ ಹಾಕಿಕೊಂಡು ಪ್ರದರ್ಶಿಸಲು ಮಾತ್ರ.

ಆದುದರಿಂದ ಹೂಡಿಕೆಯ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಸುತ್ತೇನೆ. ಚಿನ್ನವನ್ನು ಫ್ಯಾಷನ್ ಪರಿಕರವಾಗಿ ಮಾತ್ರವಲ್ಲದೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಒಂದು ಅಂಶವನ್ನು ಪರಿಗಣಿಸಿಯೇ “ಅಕ್ಷಯ ತೃತೀಯದ ಖರೀದಿ” ಎಂಬುದು ಹುಟ್ಟಿಕೊಂಡಿತು. ಇಲ್ಲಿಯೂ ಹೆಣ್ಣುಮಕ್ಕಳಿಗೆ ಯಾಕೆ ಆಸಕ್ತಿ ಅಂದರೆ ಅಕ್ಷಯ ತೃತೀಯದ ನೆಪದಲ್ಲಾದರೂ ತನಗೆ ಚಿನ್ನ ಸಿಗುತ್ತದಲ್ಲಾ ಎಂದು!

ಇರಲಿ ಈ ಬಗ್ಗೆ ಇನ್ನೊಮ್ಮೆ ಮಾತನಾಡೋಣ. ಈಗ ನಾವು ಚಿನ್ನದ ಆಭರಣಗಳನ್ನು ಖರೀದಿಸುವಾಗ ಯಾವ ಮುಂಜಾಗರೂಕತೆಗಳನ್ನು ವಹಿಸಬೇಕು ಎಂಬ ಬಗ್ಗೆ ನೋಡೋಣ. ಚಿನ್ನದ ಆಭರಣಗಳು ಹೆಚ್ಚು ಆಕರ್ಷಕವಾಗಿವೆ ಮತ್ತು ಆಕರ್ಷಣೆಯು ಮಾತ್ರ ಇಲ್ಲಿ ಪ್ರಮುಖವಾಗುತ್ತದೆ.

ಚಿನ್ನಾಭರಣವನ್ನು ಖರೀದಿಸುವ ವಿಷಯಕ್ಕೆ ಬಂದಾಗ, ನಮ್ಮಲ್ಲಿ ಹೆಚ್ಚಿನವರು ವಿವಿಧ ಮಳಿಗೆಗಳಿಗೆ ಹೋಗಿ, ಬೆಲೆಗಳನ್ನು ಹೋಲಿಕೆ ಮಾಡಿ ನಂತರ ಖರೀದಿಸಲು ಬಯಸುವುದಿಲ್ಲ. ನಮ್ಮಲ್ಲಿ ಪ್ರಜ್ಞಾವಂತರು ಕೂಡ ಚಿನ್ನವನ್ನು ಖರೀದಿಸುವಾಗ ತಪ್ಪುಗಳನ್ನು ಮಾಡಬಹುದು. ಹಾಗಾದರೆ ಚಿನ್ನಾಭರಣಗಳನ್ನು ಖರೀದಿಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಲಹೆಗಳನ್ನು ನಾವು ಕೊಡಲು ಪ್ರಯತ್ನಿಸುತ್ತಿದ್ದೇವೆ.

ಇದು ಕೇವಲ ಪ್ರಾಥಮಿಕ ಹಂತದ ಸಾಮಾನ್ಯವಾಗಿ ಹೆಚ್ಚಿನವರು ತಿಳಿದಿರಬಹುದಾದ ವಿಷಯಗಳಾದರೂ ಇದನ್ನು ಬರಹ ರೂಪದಲ್ಲಿ ಕೊಡುವುದು ನಮ್ಮ ಉದ್ದೇಶ. ಇದು ತುಂಬಾ ಆಳಕ್ಕೆ ಇಳಿದು ಬರೆದ ಮಾಹಿತಿಯಲ್ಲ. ಇನ್ನು ಮುಂದಿನ ಲೇಖನಗಳಲ್ಲಿ ನಿಮಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುವುದು. ಹಾಗಾದರೆ ಚಿನ್ನ ಖರೀದಿಸುವ ಮೊದಲು ಜಾಗ್ರತೆ ವಹಿಸಬೇಕಾದ ಅಂಶಗಳನ್ನು ಪಟ್ಟಿ ಮಾಡೋಣ.

1. ಶುದ್ಧತೆ: ಚಿನ್ನದ ಶುದ್ಧತೆಯನ್ನು ಕ್ಯಾರೆಟ್‌ನಿಂದ ನಿರ್ಧರಿಸಬಹುದು. 24kt ಚಿನ್ನದ ತುಂಡನ್ನು 99.9% ಪರಿಶುದ್ಧವೆಂದು ಪರಿಗಣಿಸಲಾಗುತ್ತದೆ. ಅಂದರೆ 100% ಅಂದರೂ ತಪ್ಪಲ್ಲ. ನಿಮ್ಮ ಚಿನ್ನ ಎಷ್ಟು ಶುದ್ಧತೆಯಲ್ಲಿ ಅಥವಾ ಕ್ಯಾರೆಟ್ ನಲ್ಲಿ ಇರಬೇಕೆಂದು ನಿರ್ಧರಿಸುವುದು ನೀವೇ ಹೊರತು ಮಾರಾಟಗಾರರಲ್ಲ. ನೀಮಗೆ ಸ್ವಲ್ಪ ಗಟ್ಟಿಯಾದ ಆಭರಣಗಳು ಬೇಕೆಂದಾದರೆ ನೀವು 22kt, 18kt, 14kt ಇತ್ಯಾದಿಗಳನ್ನು ಆರಿಸಬೇಕು. ಆಗ ಬೆಲೆಯೂ ಆ ನಿಷ್ಪತ್ತಿಯಲ್ಲಿ ಕಡಿಮೆಯಾಗುತ್ತದೆ. ಹಾಲ್‌ಮಾರ್ಕ್ ಶುದ್ಧತೆಯನ್ನು ಸೂಚಿಸುವ ಇನ್ನೊಂದು ಮಾರ್ಗವಾಗಿದೆ ಮತ್ತು ಹಾಲ್‌ಮಾರ್ಕ್ ಆಭರಣಗಳನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ.

2. ಬೆಲೆ: ಚಿನ್ನವನ್ನು ಖರೀದಿಸಲು ಅದರ ಬೆಲೆಯನ್ನು ಹೋಲಿಸಿ ಆಮೇಲೆ ಖರೀದಿಸುವುದು ಉತ್ತಮ. ಆದರೆ ಅಷ್ಟೇ ಅಲ್ಲದೆ ವಿಶ್ವಾಸಾರ್ಹ ಆಭರಣ ಅಂಗಡಿಗಳಿಂದ ಅಥವಾ ಪ್ರಸಿದ್ಧ ಬ್ರ್ಯಾಂಡ್‌ಗಳಿಂದ ಖರೀದಿಸಲು ಸಲಹೆ ನೀಡಲಾಗುತ್ತದೆ.

3. ಬಣ್ಣ: ಬಣ್ಣ ಅಂದರೆ ಶುದ್ಧತೆಯೇ ಹೊರತು ಮತ್ತೇನಲ್ಲ. ಅದನ್ನೇ ಕ್ಯಾರೆಟ್ ಎಂದು ಕೂಡಾ ಹೇಳಬಹುದು. ಶುದ್ಧ ಚಿನ್ನಕ್ಕೆ ಯಾವ ಲೋಹ ಎಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಿದ್ದಾರೆ ಎಂಬುದರ ಮೇಲೆ ಬಣ್ಣ ಬದಲಾಗುತ್ತಾ ಹೋಗುತ್ತದೆ. ನೀವು ವೈವಿಧ್ಯತೆಯನ್ನು ಬಯಸುತ್ತೀರಾದರೆ ಬಿಳಿ ಚಿನ್ನ (White Gold) ಅಥವಾ ಇತರ ಕಡಿಮೆ ಶುದ್ಧತೆಯಿರುವ ಆಭರಣಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.

4. ತೂಕ: ನೀವು ಒಂದು ಗ್ರಾಮಿಗೆ 5000ಕ್ಕೂ ಹೆಚ್ಚು ರೂಪಾಯಿಗಳನ್ನು (ಒಟ್ಟು ಬೆಲೆ) ಪಾವತಿಸುತ್ತಿರುವಾಗ ತೂಕವನ್ನು ಸರಿಯಾಗಿ ನೋಡಿಕೊಳ್ಳಿ. ನೀವು ಖರೀದಿಸುವ ನಿಜವಾದ ಚಿನ್ನದ ತೂಕವನ್ನು ಪಾವತಿಸುವ ಮೊದಲು ಪರಿಶೀಲಿಸುವುದು ಅತ್ಯಗತ್ಯ. ಕೆಲವು ಆಭರಣಗಳಲ್ಲಿ ಸಾಮಾನ್ಯ ಹರಳು ಕಲ್ಲುಗಳಿರುತ್ತವೆ. ಕೆಲವೊಮ್ಮೆ ಕಲ್ಲಿನ ತೂಕವನ್ನು ನಮೂದಿಸಿದ್ದಾರೆಯೇ ಅಥವಾ ನಮೂದಿಸಿರುವ ಕಲ್ಲಿನ ತೂಕವನ್ನು ಪರಿಶೀಲಿಸುವುದು ಉತ್ತಮ. ಇಲ್ಲದಿದ್ದರೆ ಬಳಸಿದ ಕಲ್ಲುಗಳು ಸಹ ತೂಕವನ್ನು ಹೆಚ್ಚಿಸಬಹುದು ಮತ್ತು ನೀವು ಹೆಚ್ಚಿನ ಬೆಲೆಯನ್ನು ಪಾವತಿಸಬಹುದು.

5. ಹಾಲ್ ಮಾರ್ಕ್ ಆಭರಣಗಳು : ಚಿನ್ನದ ಶುದ್ಧತೆಯ ಬಗ್ಗೆ ಅಧಿಕೃತ ಪ್ರಮಾಣೀಕೃತ ಹಾಲ್‌ಮಾರ್ಕ್ ಮಾಡಿದ ಆಭರಣಗಳನ್ನು ಖರೀದಿಸಲು ಹೆಚ್ಚು ಶಿಫಾರಸು ಮಾಡಲಾಗಿದೆ. ಇದು ಶುದ್ಧತೆಯನ್ನು ಸೂಚಿಸುತ್ತದೆ ಮಾತ್ರವಲ್ಲದೆ ಸುರಕ್ಷಿತ ಹೂಡಿಕೆಯ ಮಾರ್ಗವಾಗಿದೆ. ನೀವು ಚಿನ್ನಾಭರಣವನ್ನು ಖರೀದಿಸುವಾಗ ಅದರ ಶುದ್ಧತೆಯನ್ನು ನೀವು ಯಾವಾಗಲೂ ಪರಿಶೀಲಿಸಬೇಕು. ಶುದ್ಧತೆಗಾಗಿ ಪರೀಕ್ಷಿಸಲು ಸುಲಭವಾದ ಮಾರ್ಗವೆಂದರೆ ಹಾಲ್ಮಾರ್ಕಿಂಗ್ ನೋಡುವುದು. ಹಾಲ್‌ಮಾರ್ಕ್ ಮಾಡಿದ ಆಭರಣವು ಲೋಹದ ಅಧಿಕೃತ ಪ್ರಮಾಣವನ್ನು ನಿಮಗೆ ತಿಳಿಸುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಚಿನ್ನದ ಆಭರಣಗಳನ್ನು ಪ್ರಮಾಣೀಕರಿಸುವ ಮತ್ತು ಗುರುತಿಸುವ ಮಾನ್ಯತೆ ಸಂಸ್ಥೆಯಾಗಿದೆ.

ಎಲ್ಲಾ ಆಭರಣ ಮಳಿಗೆಗಳು ಗ್ರಾಹಕರಿಗೆ ದೈನಂದಿನ ಚಿನ್ನದ ಬೆಲೆಯನ್ನು ಪ್ರದರ್ಶಿಸುತ್ತವೆ. ಒಟ್ಟು ಬೆಲೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನೀವು ಮೊದಲು ಚಿನ್ನದ ಬೆಲೆಯನ್ನು ನೋಡಬೇಕು. ಆಭರಣವು ಕಾರ್ಮಿಕ ವೆಚ್ಚವನ್ನು ಒಳಗೊಂಡಿರುತ್ತದೆ ಮತ್ತು ಎಲ್ಲಾ ಆಭರಣಗಳು ಈ ವೆಚ್ಚವನ್ನು ಖರೀದಿದಾರರಿಗೆ ಮೇಕಿಂಗ್ ಶುಲ್ಕಗಳ ರೂಪದಲ್ಲಿ ವರ್ಗಾಯಿಸುತ್ತವೆ. ಮೇಕಿಂಗ್ ಶುಲ್ಕಗಳು ಸಾಮಾನ್ಯವಾಗಿ ಪ್ರಸ್ತುತ ಚಿನ್ನದ ಬೆಲೆಯ ಶೇಕಡಾವಾರಿನಲ್ಲಿ ಇರುತ್ತದೆ.

ಚಿನ್ನದ ಬೆಲೆಯನ್ನು ಅವಲಂಬಿಸಿ, ಮೇಕಿಂಗ್ ಚಾರ್ಜ್ ಆಗಿ ನೀವು ಪಾವತಿಸುವ ಮೊತ್ತವು ಬದಲಾಗಬಹುದು. ಅದನ್ನು ನೀವು ಹೋಲಿಸಿ ನೋಡಬೇಕು. ಕಲ್ಲುಗಳಿಂದ ಕೂಡಿದ ಆಭರಣಗಳನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು. ಅಮೂಲ್ಯವಾದ ಅಥವಾ ಅಥವಾ ಸೆಮಿ ಪ್ರೆಷಿಯಸ್ ಕಲ್ಲುಗಳಿಂದ ಹೊದಿಸಿದ ಆಭರಣಗಳು ಸರಳವಾದ ಚಿನ್ನದ ತುಣುಕಿಗಿಂತ ಹೆಚ್ಚು ಸುಂದರವಾಗಿರುತ್ತದೆಯೇ?

ಮೊದಲನೆಯದಾಗಿ, ಚಿನ್ನದಲ್ಲಿ ಹುದುಗಿರುವ ಕಲ್ಲುಗಳ ಶುದ್ಧತೆಯನ್ನು ಪರಿಶೀಲಿಸುವುದು ಕಷ್ಟ. ಮುಂದೆ, ಕಲ್ಲುಗಳಿಂದ ಕೂಡಿದ ಆಭರಣಗಳನ್ನು ಖರೀದಿಸುವ ಮೊದಲು ನೀವು ಯಾವಾಗಲೂ ನಿಖರವಾದ ನಿವ್ವಳ ಚಿನ್ನದ ತೂಕವನ್ನು ಪರಿಶೀಲಿಸಬೇಕು. ಅಲ್ಲದೆ, ಕಲ್ಲುಗಳಿಂದ ಹೊದಿಸಿದ ಆಭರಣಗಳಿಗೆ ಸಂಕೀರ್ಣವಾದ ಮಾದರಿಗಳು ಮತ್ತು ವಿನ್ಯಾಸಗಳು ಬೇಕಾಗುವುದರಿಂದ, ನೀವು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಬಹುದು.

ಇನ್ನು ಮುಂದಿನ ಸಂಚಿಕೆಗಳಲ್ಲಿ ಆಭರಣಗಳ ಖರೀದಿಯಲ್ಲಿ ವಹಿಸಬೇಕಾದ ಜಾಗ್ರತೆಗಳ ಬಗ್ಗೆ ಇನ್ನಷ್ಟು ಲೇಖನಗಳನ್ನು ನಿರೀಕ್ಷಿಸಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments