ಯಾವುದೇ ವಿಚಾರದಲ್ಲಿ ದುಡುಕುವ ಮುನ್ನ ಯೋಚಿಸುವುದು ಉತ್ತಮ. ಇಲ್ಲದಿದ್ದರೆ ನಿರಪರಾಧಿಗಳು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಮಕ್ಕಳ ಕಳ್ಳರು (Child Thieves) ಈಗ ವ್ಯಾಪಕವಾಗಿ ಇದ್ದಾರೆ ಎಂಬುದು ಸತ್ಯವಾದರೂ ಎಲ್ಲರನ್ನೂ ಮಕ್ಕಳ ಕಳ್ಳರೆಂದು ಭಾವಿಸುವುದು ಸರಿಯಲ್ಲ. ಉತ್ತರ ಕರ್ನಾಟಕದಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದ್ದು, ಶಂಕೆ ವ್ಯಕ್ತವಾದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಮಹಿಳೆಯರಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ನಡೆದಿದೆ. ಅವರು ತೆಲಂಗಾಣ ರಾಜ್ಯದಿಂದ ಇಲ್ಲಿಗೆ ಆಗಮಿಸಿದ್ದರು.
ಇದನ್ನು ನೋಡಿದ ಗ್ರಾಮಸ್ಥರು ಇವರು ಕಳ್ಳಿಯರೆಂದು ಸ್ವಯಂ ತೀರ್ಮಾನಿಸಿ ಬೇಕಾಬಿಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ಚಿಂಚೋಳಿ ಪೊಲೀಸರಿಗೆ ಮಹಿಳೆಯರನ್ನು ಒಪ್ಪಿಸಿದ್ದರು.
ಪೊಲೀಸರು ವಿಚಾರಣೆ ನಡೆಸಿದಾಗ ಹಲ್ಲೆಗೊಳಗಾದ ಮಹಿಳೆಯರು ತೆಲಂಗಾಣದಿಂದ ಈ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿರುವುದಾಗಿ ತಿಳಿದುಬಂದಿದೆ.
ಪೊಲೀಸರು ಹಲ್ಲೆ ಮಾಡಿದವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.