ಶ್ರೀ ಲಕ್ಷ್ಮೀನಾರಾಯಣ ರಾವ್ ಅಡೂರು ಅವರು ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಮದ್ದಳೆಗಾರರು. ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತೊಂಭತ್ತು ವರ್ಷಗಳ ಅನುಭವಿ. 1993ರಲ್ಲಿ ಕಟೀಲು ಮೇಳದಲ್ಲಿ ವ್ಯವಸಾಯ ಆರಂಭಿಸಿದ ಇವರು ಕಳೆದ ಹನ್ನೆರಡು ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ತೆಂಕುತಿಟ್ಟಿನ ಹೆಚ್ಚಿನ ಎಲ್ಲಾ ಹಿರಿಯ ಮತ್ತು ಕಿರಿಯ ಭಾಗವತರುಗಳ ಹಾಡುಗಾರಿಕೆಗೆ ಚೆಂಡೆ, ಮದ್ದಳೆ ನುಡಿಸಿದ ಅನುಭವಿ ಇವರು. ಕಲ್ಲುಗುಂಡಿ, ಉಡುಪಿ, ಕೂಡ್ಲು, ಮಾವಿನಕಟ್ಟೆ ಎಂಬಲ್ಲಿ ನಡೆದ ಜೋಡಾಟಗಳಲ್ಲೂ ಚೆಂಡೆ ಬಾರಿಸಿ ಕಲಾಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
ಮದ್ದಳೆವಾದಕರಾದ ಶ್ರೀ ಲಕ್ಷ್ಮೀನಾರಾಯಣ ರಾವ್ ಅವರ ಹುಟ್ಟೂರು ಕಾಸರಗೋಡು ತಾಲೂಕಿನ ಅಡೂರು ಗ್ರಾಮದ ಪುತ್ತಿಲ. ಅಡೂರು ಶ್ರೀ ಭಾಸ್ಕರ ರಾವ್ ಮತ್ತು ಶ್ರೀಮತಿ ಕಮಲಾಕ್ಷಿ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಖ್ಯಾತ ಕಲಾವಿದರಾಗಿದ್ದ ಅಡೂರು ಶಿವ ಮದ್ದಳೆಗಾರರು ಲಕ್ಷ್ಮೀನಾರಾಯಣ ಅವರ ಅಜ್ಜ (ತಂದೆಯ ತಂದೆ) ಹೆಸರಾಂತ ಮದ್ಲೆಗಾರರಾಗಿದ್ದ ಅಡೂರು ಶ್ರೀ ಗಣೇಶ್ ರಾವ್ ಅವರು ಲಕ್ಷ್ಮೀನಾರಾಯಣರ ಅಣ್ಣ ( ದೊಡ್ಡಮ್ಮನ ಮಗ) ಇವರ ಕುಟುಂಬದಲ್ಲಿ ಅನೇಕರು ಹಿಮ್ಮೇಳ ಕಲಾವಿದರೆಂಬುದು ಕಲಾಭಿಮಾನಿಗಳಿಗೆಲ್ಲಾ ತಿಳಿದಿರುವ ವಿಚಾರ.
ಶ್ರೀ ಲಕ್ಷ್ಮೀನಾರಾಯಣ ರಾವ್ ಅವರು ಓದಿದ್ದು ಪಿಯುಸಿ ವರೆಗೆ. ಹತ್ತನೇ ಇಯತ್ತೆ ವರೆಗೆ ಅಡೂರು ಸರಕಾರೀ ಶಾಲೆಯಲ್ಲಿ. ಪಿಯುಸಿ (ಪಿಡಿಸಿ ) ಓದಿದ್ದು ಕಾಸರಗೋಡಿನ ಟಾಗೋರ್ ಕಾಲೇಜಿನಲ್ಲಿ. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆಯಾಗಿತ್ತು. ಇವರಿಗೆ ಹಿಮ್ಮೇಳದಲ್ಲಿ ಆಸಕ್ತಿ. ತಾನು ಒಬ್ಬ ಚೆಂಡೆ ನುಡಿಸುವ ಕಲಾವಿದನಾಗಬೇಕೆಂಬ ಕನಸು ಕಂಡಿದ್ದರು.
ಎಸ್ಸೆಸ್ಸೆಲ್ಸಿ ಶಿಕ್ಷಣದ ನಂತರ ಯಕ್ಷಗಾನ ಹಿಮ್ಮೇಳ ವಿದ್ಯೆಯನ್ನು ಕಲಿಯಲು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿದ್ದರು. ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಂದ ಕೇಂದ್ರದ ವಿದ್ಯಾರ್ಥಿಗಳಿಂದ ನಡೆದ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶವಾಗಿತ್ತು. ತರಬೇತಿ ಪಡೆದ ಬಳಿಕ ಮೇಳಕ್ಕೆ ಸೇರಬೇಕೆಂಬ ಆಸೆ ಇತ್ತು. ಆದರೆ ಮನೆಯವರು ಕಾಲೇಜಿಗೆ ತೆರಳಿ ವಿದ್ಯಾರ್ಜನೆಯನ್ನು ಮುಂದುವರಿಸಲು ಸೂಚಿಸಿದ್ದರು. ಮನೆಯವರ ಸಲಹೆಯಂತೆ ಕಾಸರಗೋಡು ಟಾಗೋರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪೂರೈಸಿದ್ದರು. ಮನಸ್ಸನ್ನು ಯಕ್ಷಗಾನವೆಂಬ ಆಕರ್ಷಕ ಕಲೆಯು ಸೆಳೆಯುತ್ತಿತ್ತು. ಯಕ್ಷಗಾನ ಕಲಾವಿದನಾಗಲೇ ಬೇಕೆಂಬ ಛಲ ಲಕ್ಷ್ಮೀನಾರಾಯಣರಿಗಿತ್ತು. ಕಟೀಲು ಮೇಳಕ್ಕೆ ಸೇರುವ ಆಸೆಯಾಗಿತ್ತು.
ಅಷ್ಟಮಿಯ ದಿನದಂದು ಶ್ರೀ ಕ್ಷೇತ್ರ ಕಟೀಲಿಗೆ ಬಸ್ಸಿನಲ್ಲಿ ತೆರಳುವಾಗ ಖ್ಯಾತ ಮದ್ದಳೆಗಾರರಾದ ನೆಡ್ಲೆ ಶ್ರೀ ನರಸಿಂಹ ಭಟ್ಟರ ಪರಿಚಯವಾಗಿತ್ತು. ಅಡೂರು ಶಿವ ಮದ್ದಳೆಗಾರರ ಮೊಮ್ಮಗನೆಂದು ಗೊತ್ತಾದಾಗ ನೆಡ್ಲೆ ಶ್ರೀ ನರಸಿಂಹ ಭಟ್ಟರಿಗೆ ಸಂತೋಷವಾಗಿತ್ತು. ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ವಿಠಲ ಶೆಟ್ರಲ್ಲಿ ಮಾತಾಡಿ ನೆಡ್ಲೆ ನರಸಿಂಹ ಭಟ್ಟರು, ಲಕ್ಷ್ಮೀನಾರಾಯಣ ರಾವ್ ಅವರನ್ನು ಮೇಳಕ್ಕೆ ಸೇರಿಸಿದ್ದರು. ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿರುವ ಮೂರನೇ ಮೇಳದಲ್ಲಿ ವ್ಯವಸಾಯ ಮಾಡಲು ಅವಕಾಶ ನೀಡಬೇಕೆಂಬ ನೆಡ್ಲೆ ನರಸಿಂಹ ಭಟ್ಟರ ಕೋರಿಕೆಯನ್ನು ಕಲ್ಲಾಡಿ ಶ್ರೀ ವಿಠಲ ಶೆಟ್ರು ನಿರಾಕರಿಸದೆ ಸಮ್ಮತಿ ನೀಡಿದ್ದರು.
ಶ್ರೀ ಲಕ್ಷ್ಮೀನಾರಾಯಣ ರಾವ್ ಅಡೂರು ಅವರು ತಿರುಗಾಟ ಆರಂಭಿಸಿದ್ದು 1993ರಲ್ಲಿ. ಕಟೀಲು ಮೂರನೇ ಮೇಳದಲ್ಲಿ. ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿದ್ದರು. ಆಗ ಪದ್ಯಾಣ ಶ್ರೀ ಶಂಕರನಾರಾಯಣ ಭಟ್ಟರು ಪ್ರಧಾನ ಮದ್ದಳೆಗಾರರಾಗಿದ್ದರು. ಎರಡು ವರ್ಷಗಳ ಕಾಲ ಮೂರನೇ ಮದ್ದಳೆಗಾರನಾಗಿ ವ್ಯವಸಾಯ. ಮೂರನೇ ತಿರುಗಾಟಕ್ಕೆ ಒತ್ತು ಮದ್ದಳೆಗಾರನಾಗಿ ಭಡ್ತಿ. 6ನೇ ತಿರುಗಾಟಕ್ಕೆ ಪ್ರಧಾನ ಮದ್ದಳೆಗಾರನಾಗಿ ಭಡ್ತಿ. 5 ವರ್ಷಗಳ ಕಾಲ ಪದ್ಯಾಣ ಶಂಕರನಾರಾಯಣ ಭಟ್ಟರ ಒಡನಾಟವು ಸಿಕ್ಕಿತ್ತು. ಚೆಂಡೆ ಮದ್ದಳೆ ನುಡಿಸುವಲ್ಲಿ ಮಾರ್ಗದರ್ಶನವೂ ಸಿಕ್ಕಿತ್ತು.
ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಜತೆಯಲ್ಲಿ ತಿರುಗಾಟ ನಡೆಸಿದ ಕಾರಣದಿಂದ ರಂಗಾನುಭವ ಮತ್ತು ಪ್ರಸಂಗಾನುಭವವು ಸಿಗುವಂತಾಗಿತ್ತು. ಕುರಿಯ ಗಣಪತಿ ಶಾಸ್ತ್ರಿಗಳು ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟರು ನನ್ನನ್ನು ತಿದ್ದಿ ತೀಡಿದ್ದಾರೆ. ಅವರಿಬ್ಬರೂ ನನಗೆ ಗುರುಸಮಾನರು ಎಂದು ಹೇಳುವ ಮೂಲಕ ಅವರನ್ನು ಶ್ರೀ ಲಕ್ಷ್ಮೀನಾರಾಯಣ ರಾವ್ ಅವರು ಗೌರವಿಸುತ್ತಾರೆ. ಅವರ ಜತೆ ವ್ಯವಸಾಯ ಮಾಡಿದ ಕಾರಣದಿಂದ ದುಶ್ಶಾಸನ ವಧೆ, ಕಿರಾತಾರ್ಜುನ, ಕರ್ಣಾರ್ಜುನ, ತಾಮ್ರಧ್ವಜ ಕಾಳಗ, ಅತಿಕಾಯ ಮೋಕ್ಷ ಮೊದಲಾದ ಪ್ರಸಂಗಗಳ ನಡೆಯನ್ನೂ, ಬಾರಿಸುವ ಕ್ರಮವನ್ನೂ ತಿಳಿಯುವಂತಾಗಿತ್ತು.
ಕಟೀಲು ಮೇಳದಲ್ಲಿ ವ್ಯವಸಾಯ ಒಟ್ಟು ಹದಿನೆಂಟು ವರ್ಷ. (1993ರಿಂದ 2010ರ ವರೆಗೆ )ಬಳಿಕ ಮೇಳದ ವ್ಯವಸಾಯವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದರು. ಅದೇ ಸಮಯಕ್ಕೆ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಲು ಸದ್ರಿ ಮೇಳದ ವ್ಯವಸ್ಥಾಪಕರಾದ ಶ್ರೀ ವಾಸುದೇವ ರೈಗಳು ಮತ್ತು ಮದ್ದಳೆಗಾರರಾದ ಅಡೂರು ಗಣೇಶ ರಾಯರು ಕೇಳಿಕೊಂಡಿದ್ದರು. 2011ರಿಂದ ಶ್ರೀ ಧರ್ಮಸ್ಥಳ ಮೇಳಕ್ಕೆ. ಇವರು ಧರ್ಮಸ್ಥಳ ಮೇಳಕ್ಕೆ ಸೇರುವಾಗ ರಾತ್ರಿಯಿಡೀ ಪ್ರದರ್ಶನ ನಡೆಯುತ್ತಿತ್ತು. ಈಗ ಕಾಲಮಿತಿಯ ಪ್ರದರ್ಶನ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ.
ಧರ್ಮಸ್ಥಳ ಮೇಳದಲ್ಲಿ ಹಿಮ್ಮೇಳದ ಖ್ಯಾತ ಕಲಾವಿದರಾದ ಪುತ್ತಿಗೆ ಶ್ರೀ ರಘುರಾಮ ಹೊಳ್ಳ, ಶ್ರೀ ರಾಮಕೃಷ್ಣ ಮಯ್ಯ, ಅಡೂರು ಶ್ರೀ ಗಣೇಶ ರಾವ್ ಅವರ ಒಡನಾಟವು ದೊರೆತಿತ್ತು. ಅವರ ಮಾರ್ಗದರ್ಶನವೂ ಸಹಕಾರವೂ ಸಿಕ್ಕಿದ ಕಾರಣದಿಂದ ಬೆಳೆಯುತ್ತಾ ಸಾಗಲು ಅನುಕೂಲವಾಗಿತ್ತು. ಕಟೀಲು ಮತ್ತು ಧರ್ಮಸ್ಥಳ ಮೇಳಗಳಲ್ಲಿ ಮುಮ್ಮೇಳದ ಖ್ಯಾತ ಕಲಾವಿದರ ಒಡನಾಟವೂ ದೊರೆತಿತ್ತು. 2011ರಿಂದ ತೊಡಗಿ ಕಳೆದ ಹನ್ನೊಂದು ವರ್ಷಗಳಿಂದ ಧರ್ಮಸ್ಥಳ ಮೇಳದ ಮದ್ದಳೆಗಾರರಾಗಿ ವ್ಯವಸಾಯ ಮಾಡುತ್ತಿದ್ದಾರೆ.
ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ, ಮೇಳವನ್ನು ಮುನ್ನಡೆಸುತ್ತಿರುವ ಶ್ರೀ ಹರ್ಷೇ೦ದ್ರಕುಮಾರ್ ಅವರ ಪ್ರೋತ್ಸಾಹ, ಸಹಕಾರದಿಂದ ಯಶಸ್ವಿಯಾಗಿ ತಿರುಗಾಟ ನಡೆಸುತ್ತಿದ್ದೇನೆ ಎಂಬುದು ಶ್ರೀ ಲಕ್ಷ್ಮೀನಾರಾಯಣ ರಾವ್ ಅವರ ಮನದಾಳದ ಮಾತುಗಳು.
ಇವರು ಎರಡು ಬಾರಿ ವಿದೇಶ ಯಾತ್ರೆಯನ್ನು ಕೈಗೊಂಡು ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. (2010ರಲ್ಲಿ ದುಬೈ, 2019ರಲ್ಲಿ ಬಹರೇನ್) ಮುಂಬಯಿಯಲ್ಲಿ ಶ್ರೀ ಎಚ್. ಬಿ. ಎಲ್. ರಾವ್, ಕಟೀಲು ಪದ್ಮನಾಭ ಮತ್ತು ಅಜೆಕಾರು ಶ್ರೀ ಬಾಲಕೃಷ್ಣ ಶೆಟ್ಟಿ ಅವರು ಸಂಯೋಜಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮಳೆಗಾಲದಲ್ಲಿ ಶ್ರೀ ನಿಡ್ಲೆ ಗೋವಿಂದ ಭಟ್ ಮತ್ತು ಪುತ್ತೂರು ಶ್ರೀಧರ ಭಂಡಾರಿಯವರ ತಂಡದ ಕೆಲವು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. (ಅನಿವಾರ್ಯ ಸಂದರ್ಭಗಳಲ್ಲಿ)
ಅನುಭವೀ ಮದ್ದಳೆವಾದಕರಾದ ಶ್ರೀ ಲಕ್ಷ್ಮೀನಾರಾಯಣ ರಾವ್ ಅಡೂರು ಅವರು ವೃತ್ತಿ ಬದುಕಿನಲ್ಲೂ ಸಾಂಸಾರಿಕವಾಗಿಯೂ ತೃಪ್ತರು. ಇವರ ಪತ್ನಿ ಶ್ರೀಮತಿ ರಮ್ಯ. ಇವರು ಗೃಹಣಿ. ಇವರಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಕುಮಾರಿ ಹರ್ಷಿತಾ. ಈಕೆ 6ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಿರಿಯ ಪುತ್ರಿ ಕುಮಾರಿ ದೀವಿಕಾ. ಈಕೆ 3ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮಕ್ಕಳಿಬ್ಬರಿಗೂ ಉಜ್ವಲ ಭವಿಷ್ಯವು ಸಿದ್ಧಿಸಲಿ. ಅಡೂರು ಶ್ರೀ ಲಕ್ಷ್ಮೀನಾರಾಯಣ ರಾವ್ ಅವರಿಂದ ಯಕ್ಷಗಾನ ಕಲಾ ವ್ಯವಸಾಯವು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಶ್ರೀ ಲಕ್ಷ್ಮೀನಾರಾಯಣ ರಾವ್ ಅಡೂರು, ಮೊಬೈಲ್: 8971009259
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions