ಪುತ್ತೂರಿನ ಕಲ್ಲಾರೆಯ ಅಪ್ಸರಾ ಟೈಲರ್ಸ್ ಮಾಲಕತ್ವದ ನೂತನ “ಅಪ್ಸರಾ ಟೈಲರಿಂಗ್ ಮತ್ತು ಎಂಬ್ರಾಯಿಡರಿ ತರಬೇತಿ ಕೇಂದ್ರ” ದ ಉದ್ಘಾಟನಾ ಸಮಾರಂಭ ನಿನ್ನೆ ನಡೆಯಿತು.
ಕಳೆದ 25ಕ್ಕೂ ಹೆಚ್ಚಿನ ವರ್ಷಗಳಿಂದ ಕಾರ್ಯನಿರ್ವಹಿಸಿ ಜನಪ್ರಿಯತೆಯನ್ನು ಹೊಂದಿದ ಬೆಳ್ಳಾರೆ ಎ. ಮಹಾಬಲ ರೈ ಮಾಲಕತ್ವದ ಅಪ್ಸರಾ ಟೈಲರ್ಸ್ ಈಗಾಗಲೇ ಪುತ್ತೂರಿನಲ್ಲಿ ಜನಪ್ರಿಯವಾಗಿದ್ದು ತನ್ನ ಕಾರ್ಯಕ್ಷೇತ್ರವನ್ನು ಸುಬ್ರಹ್ಮಣ್ಯ, ಬೆಟ್ಟಂಪಾಡಿ ಮೊದಲಾದ ಕಡೆಗಳಿಗೆ ವಿಸ್ತರಿಸಿದ್ದು ಕಾಸರಗೋಡು ಜಿಲ್ಲೆಯಲ್ಲಿಯೂ ಶಾಖೆಯನ್ನು ಹೊಂದಿದೆ.
ಸಾಧನೆಯ ಮಹತ್ವಾಕಾಂಕ್ಷೆಯನ್ನು ಹೊಂದಿದ ಮಹಾಬಲ ರೈಯವರು ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೊಲಿಗೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ತರಬೇತಿಯನ್ನು ನೀಡುವ ನೂತನ ಯೋಜನೆಯೊಂದನ್ನು ಸಿದ್ಧಪಡಿಸಿ “ಅಪ್ಸರಾ ಟೈಲರಿಂಗ್ ಮತ್ತು ಎಂಬ್ರಾಯಿಡರಿ ತರಬೇತಿ ಕೇಂದ್ರ”ವನ್ನು ಆರಂಭಿಸಿವೆ ಯೋಚನೆ ಮಾಡಿದರು.
ಅದರಂತೆ ಅವರ ಯೋಜನೆ ಕಾರ್ಯರೂಪಕ್ಕೆ ಬಂದು ಈಗಾಗಲೇ ಉದ್ಘಾಟನೆಗೊಂಡಿದೆ. ತರಬೇತಿ ಕೇಂದ್ರವನ್ನು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗೋಪಿನಾಥ ಶೆಟ್ಟಿಯವರು ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಭಾಶ್ಚಂದ್ರ ಕಳಂಜ ಮತ್ತು ನಗರಸಭಾ ಸದಸ್ಯ ಮನೋಹರ ಕಲ್ಲಾರೆ ಅವರು ಶುಭ ಹಾರೈಸಿದರು.
ಪೈ ಸರ್ಜಿಕಲ್ ಮಾಲಕರಾದ ರವೀಂದ್ರ ಪೈ, ಛಾಯಾ ಆರ್. ಪೈ, ಉಪಸ್ಥಿತರಿದ್ದರು. ಸಂಸ್ಥೆಯ ಸಿಬಂದಿಗಳಾದ ಅಶ್ವಿನಿ, ತುಳಸಿ, ವೈಶಾಲಿ, ಶೃತಿ ಪ್ರಾರ್ಥನೆ ಗೀತೆ ಹಾಡಿದರು. ಮಾಲಕರಾದ ಎ. ಮಹಾಬಲ ರೈ ಅತಿಥಿಗಳಿಗೆ ಸ್ಮರಿಣಿಕೆ ನೀಡಿ ಗೌರವಿಸಿದರು. ನಾಗವೇಣಿ ಮಹಾಬಲ ರೈ ಮತ್ತು ಪ್ರತಿಮಾ ಎ. ರೈ ಉಪಸ್ಥಿತರಿದ್ದರು.
ಮಾಲಕ ಎ. ಮಹಾಬಲ ರೈ ಯವರ ಕಿರಿಯ ಸಹೋದರ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಬಾಳಿಲ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ರೈ ಬೆಳ್ಳಾರೆಯವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬಂದಿ ಸುಜಾತ ಅವರು ವಂದಿಸಿದರು. ಎಲ್ಲಾ ಸಿಬಂದಿಗಳು ಉಪಸ್ಥಿತರಿದ್ದು ಅತಿಥಿಗಳನ್ನು ಉಪಚರಿಸಿದರು.

