ಈಶ್ವರಮಂಗಲದಲ್ಲಿ ಸರಕಾರೀ ಬಸ್ ಹತ್ತುತ್ತಿದ್ದ ಕುಡುಕನನ್ನು ಬಸ್ ನಿರ್ವಾಹಕ ಕಾಲಿನಿಂದ ಒದ್ದು ಬಸ್ಸಿನಿಂದ ಕೆಳಗೆ ಬೀಳಿಸಿದ ಘಟನೆ ನಡೆದಿದೆ. ಬಸ್ ನಿರ್ವಾಹಕನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
KA 21 F0002 ಸಂಖ್ಯೆಯ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಕುಡುಕನನ್ನು ಬಸ್ಸಿನಿಂದ ಕೆಳಕ್ಕೆ ಇಳಿಸಲು ನಿರ್ವಾಹಕನಿಗೆ ಕಾರಣಗಳಿರಬಹುದು. ಆದರೆ ಆತ ಇಳಿಸಿದ ವಿಧಾನ ಅಮಾನವೀಯವಾಗಿದೆ.
ಕಾಲಿನಿಂದ ಎದೆಗೆ ಒದ್ದ ದೃಶ್ಯವನ್ನು ನೋಡಿದರೆ ಕುಡುಕ ಪ್ರಯಾಣಿಕ ಬದುಕುಳಿದದ್ದೇ ಆಶ್ಚರ್ಯ. ಇತರ ಪ್ರಯಾಣಿಕನಿಗೆ ತೊಂದರೆ ಮಾಡುತ್ತಿದ್ದಾನೆ ಎಂದೋ ಅಥವಾ ಆತನಲ್ಲಿ ಟಿಕೇಟಿನ ಹಣವಿರಲಿಲ್ಲ ಎಂಬಿತ್ಯಾದಿ ಕಾರಣಗಳಿಂದ ಬಸ್ಸಿನಿಂದ ಇಳಿಸಿದ್ದರೂ ಇಲ್ಲಿ ನಿರ್ವಾಹಕನ ವರ್ತನೆ ಆಕ್ಷೇಪಾರ್ಹವಾಗಿದೆ.
ಮಾತ್ರವಲ್ಲದೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಈ ಪ್ರಕರಣವನ್ನು ಕೆಎಸ್ಸಾರ್ಟಿಸಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.
ಮಾತ್ರವಲ್ಲದೆ ಈಗಾಗಲೇ ಬಸ್ ನಿರ್ವಾಹಕನನ್ನು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಅಮಾನತು ಮಾಡಲಾಗಿದೆ. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.