Saturday, January 18, 2025
Homeಯಕ್ಷಗಾನಬಡಗುತಿಟ್ಟಿನ ಯುವ ಭಾಗವತ - ಶ್ರೀ ಪ್ರಸನ್ನ ಭಟ್ ಬಾಳ್ಕಲ್ 

ಬಡಗುತಿಟ್ಟಿನ ಯುವ ಭಾಗವತ – ಶ್ರೀ ಪ್ರಸನ್ನ ಭಟ್ ಬಾಳ್ಕಲ್ 

ಶ್ರೀ ಪ್ರಸನ್ನ ಭಟ್ ಬಾಳ್ಕಲ್  ಅವರು  ಬಡಗುತಿಟ್ಟಿನ ಯುವ ಭಾಗವತರು. ಬಡಗು ತಿಟ್ಟಿನ ಹೆಚ್ಚಿನ ಎಲ್ಲಾ ಮೇಳಗಳಲ್ಲೂ ಆಹ್ವಾನಿತ ಭಾಗವತರಾಗಿ ವ್ಯವಸಾಯ ಮಾಡಿದ ಕಲಾವಿದರಿವರು. 1998-99ರಲ್ಲಿ ಮೇಳದ ವ್ಯವಸಾಯ ಆರಂಭಿಸಿದರೂ ಯಕ್ಷಗಾನ ಭಾಗವತಿಕೆಯಲ್ಲಿ ಇವರು ಇಪ್ಪತ್ತಾರು ವರ್ಷಗಳ ಅನುಭವಿ. ಕಳೆದ ನಾಲ್ಕು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ  ಭಾಗವತನಾಗಿ ತಮ್ಮ ಹಾಡುಗಾರಿಕೆಯಿಂದ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 

ನಗುಮೊಗದ ಯುವ ಭಾಗವತ  ಶ್ರೀ ಪ್ರಸನ್ನ ಭಟ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮದ ಬಾಳ್ಕಲ್. 1977ನೇ ಇಸವಿ ಫೆಬ್ರವರಿ 25ರಂದು ಶ್ರೀ ಪದ್ಮನಾಭ ಭಟ್ ಬಾಳ್ಕಲ್ ಮತ್ತು ಶ್ರೀಮತಿ ಪಾರ್ವತಿ ಭಟ್ ದಂಪತಿಗಳ ಪುತ್ರನಾಗಿ ಜನನ. ಪ್ರಸನ್ನ ಭಟ್ ಅವರ ತಂದೆ ಶ್ರೀ ಪದ್ಮನಾಭ ಭಟ್ಟರು ಯಕ್ಷಗಾನ ಕಲಾವಿದನಾಗಿ ಮೇಳದ ತಿರುಗಾಟ ನಡೆಸಿದ ಅನುಭವಿ. ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ತಾಳಮದ್ದಳೆ ಅರ್ಥಧಾರಿಯೂ ಆಗಿದ್ದರು. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ ಮತ್ತು ತೆಕ್ಕಟ್ಟೆ ಶ್ರೀ ಆನಂದ ಮಾಸ್ತರರ ಜತೆ ಅರ್ಥ ಹೇಳಿದವರು. ಕೆಲಸಮಯ (1989-90) ಸಾಲಿಗ್ರಾಮ ಮೇಳದ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದರು.

ಅಜ್ಜ (ತಾಯಿಯ ತಂದೆ) ಶ್ರೀ ಸುಬ್ರಾಯ ಹೆಗಡೆಯವರು ಸಮಾಜ ಸೇವಕರಾಗಿ, ಸಹಕಾರೀ ಧುರೀಣರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಯಕ್ಷಗಾನ ಸಂಘಟಕರಾಗಿ ಪ್ರಸಿದ್ಧರು. ಅವರು ಶ್ರೀ ರಾಜರಾಜೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಹುಟ್ಟುಹಾಕಿ ಮುನ್ನಡೆಸಿದ್ದರು. ಈ ಮೇಳದಲ್ಲಿ ಮೂರೂರು ಶ್ರೀ ದೇವರು ಹೆಗಡೆ, ಕೊಳಗಿ ಶ್ರೀ ಅನಂತ ಹೆಗಡೆ, ಮೊದಲಾದವರು ವ್ಯವಸಾಯ ಮಾಡಿದ್ದರು.

ಪ್ರಸನ್ನ ಭಟ್ಟರ ತಂದೆ ಶ್ರೀ ಪದ್ಮನಾಭ ಭಟ್ಟರು ಈ ಮೇಳದಲ್ಲಿ ಸಕ್ರಿಯರಾಗಿದ್ದರು. ಪ್ರಸನ್ನ ಭಟ್ಟರ  ಇಬ್ಬರು ಸೋದರ ಮಾವಂದಿರೂ ಯಕ್ಷಗಾನ  ಕಲಾವಿದರು. ಶ್ರೀ ರಾಮಕೃಷ್ಣ ಹೆಗಡೆ ಮಳಿಗೆಮನೆ ಅವರು ವೇಷಧಾರಿಯಾಗಿ ಪ್ರಾಚಾರ್ಯ ಭಾಗವತ ಶ್ರೀ ನಾರ್ಣಪ್ಪ ಉಪ್ಪೂರರೊಂದಿಗೆ ವ್ಯವಸಾಯ ಮಾಡಿದವರು. ಇನ್ನೋರ್ವ ಸೋದರ ಮಾವ ಶ್ರೀ ಗಜಾನನ ಹೆಗಡೆ ಮಳಿಗೆಮನೆ ಹವ್ಯಾಸೀ ಭಾಗವತರು. 

ಶ್ರೀ ಪ್ರಸನ್ನ ಭಟ್ ಅವರು ಸ್ನಾತಕೋತ್ತರ ಪದವೀಧರರು. ಏಳನೇ ತರಗತಿ ವರೆಗೆ ಓದಿದ್ದು ತುಂಬೆಬೀಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಹತ್ತನೇ ತರಗತಿ ವರೆಗೆ ಮಂಚಿಕೇರಿ ಶ್ರೀ ರಾಜರಾಜೇಶ್ವರೀ ಶಾಲೆಯಲ್ಲಿ. ಬಳಿಕ ಇಡಗುಂಜಿ ಶ್ರೀ ಮಹಾಗಣಪತಿ ದೇವಳದ ಸಂಸ್ಕೃತ ಮತ್ತು ವೇದಪಾಠಶಾಲೆಯಲ್ಲಿ ಓದಿದ್ದರು. ಇಲ್ಲಿ ಸಂಸ್ಕೃತದಲ್ಲಿ ‘ಪ್ರಥಮ’ ಮತ್ತು ‘ಕಾವ್ಯ’ ಎಂಬ ವಿಚಾರವನ್ನೂ ಮಂತ್ರವನ್ನೂ ಕಲಿತಿದ್ದರು. ಬಳಿಕ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂ. ಎ  (ಸಾಹಿತ್ಯ ಮತ್ತು ಜ್ಯೋತಿಷ್ಯ ಪೂರ್ವ ವಿದ್ವತ್) ಓದಿದ್ದರು.

ಇವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ತಾಯಿಯ ಕಡೆಯಿಂದಲೂ ತಂದೆಯ ಕಡೆಯಿಂದಲೂ ಯಕ್ಷಗಾನವು ರಕ್ತಗತವಾಗಿಯೇ ಬಂದಿತ್ತು. ತಾಯಿ ಶ್ರೀಮತಿ ಪಾರ್ವತಿ ಭಟ್ ಭಜನೆ ಮೊದಲಾದ ಹಾಡುಗಳನ್ನು ಅಂದವಾಗಿ ಹೇಳುತ್ತಿದ್ದರು. ತಂದೆ ತಾಯಿಯರ ಜತೆ ಪ್ರಸನ್ನ ಭಟ್ಟರು ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಖ್ಯಾತ ಕಲಾವಿದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಅವರ ಜತೆ ಬಂಧುತ್ವವು ಬೆಸೆದ ಮೇಲೆಯಂತೂ ಯಕ್ಷಗಾನಾಸಕ್ತಿಯು ಹೆಚ್ಚಾಗಿತ್ತು.

ಯಕ್ಷಗಾನ ನೋಡುವ ಆಸೆಯು ಕಲಿಯುವ ಆಸೆಯಾಗಿ ಬದಲಾಗಿತ್ತು. ತಾನೂ ಕಲಾವಿದನಾಗಬೇಕೆಂಬ ಆಸೆಯು ಹುಟ್ಟಿಕೊಂಡಿತ್ತು. ಯಕ್ಷಗಾನದ ಹಾಡುಗಳನ್ನು ಕೇಳುತ್ತಾ ಕುಣಿಯುವ ಹವ್ಯಾಸವೂ ಇತ್ತು. ಎಲ್ಲಾ ಭಾಗವತರ ಶೈಲಿಯಲ್ಲಿಯೂ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. (ಮಿಮಿಕ್ರಿ) ಬಾವನಾದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಭಾಗವತಿಕೆಯನ್ನು ಸರಿಯಾಗಿ ಅಭ್ಯಸಿಸಲು ಸಲಹೆ ನೀಡಿದ್ದರು. ಮೊದಲ ಪಾಠ ಅವರಿಂದಲೇ ಆಗಿತ್ತು. ಅವರಿಂದ ತಾಳ ಮತ್ತು ಮಟ್ಟುಗಳನ್ನು ಪ್ರಸನ್ನ ಭಟ್ಟರು ಕಲಿತಿದ್ದರು. 

ಶ್ರೀ ಪ್ರಸನ್ನ ಭಟ್ ಅವರು ಉಡುಪಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ  ಹೆಚ್ಚಿನ ಕಲಿಕೆಗೆ ಅವಕಾಶವಾಗಿತ್ತು. ಉಡುಪಿ ಯಕ್ಷಗಾನ ಕೇಂದ್ರವನ್ನು ಸೇರಿ ಶ್ರೀ ಗೋಪಾಲ ವಿಠ್ಠಲ ಪಾಟೀಲರಿಂದ ಭಾಗವತಿಕೆಯನ್ನು ಕಲಿತರು. ಶ್ರೀ ನೀಲಾವರ ಲಕ್ಷ್ಮೀನಾರಾಯಣಯ್ಯ ಅವರಿಂದಲೂ ಕಲಿಕೆಗೆ ಅವಕಾಶವಾಗಿತ್ತು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನಿರಂತರ ಎರಡು ವರ್ಷಗಳ ತರಬೇತಿ. ಉಡುಪಿ ಸಂಸ್ಕೃತ ಕಾಲೇಜಿನ ಪ್ರದರ್ಶನ. ಪ್ರಸಂಗ ‘ಸತ್ಯಸೇನ ವಧಃ'(ಸಂಸ್ಕೃತದಲ್ಲಿ) ದಲ್ಲಿ ಪ್ರಸನ್ನ ಭಟ್ ಅವರು ಭಾಗವತರಾಗಿ ರಂಗಪ್ರವೇಶ ಮಾಡಿದ್ದರು. ಅಂದು ಪ್ರೇಕ್ಷಕರ ಸಾಲಿನಲ್ಲಿದ್ದ ಪೂಜ್ಯ ಪೇಜಾವರ ಶ್ರೀಗಳವರು ಮೆಚ್ಚಿ ಪ್ರಸನ್ನ ಭಟ್ಟರಿಗೆ ತಾಳವನ್ನು ನೀಡಿ ಆಶೀರ್ವದಿಸಿದ್ದರು.

ಬಳಿಕ ಅನೇಕ ಪ್ರದರ್ಶನಗಳಲ್ಲಿ ಭಾಗವತನಾಗಿ ಕಾಣಿಸಿಕೊಂಡಿದ್ದರು. ಶೃಂಗೇರಿಯ ಸಂಸ್ಕೃತ ವಿದ್ಯಾಲಯದ ಸದ್ವಿದ್ಯಾ ಸಂಜೀವಿನೀ ಸವೇದ ಪಾಠಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಂಸ್ಕೃತ ಭಾಷೆಯಲ್ಲಿ ಪ್ರದರ್ಶನ ನೀಡಿದ್ದರು. 2007ರಲ್ಲಿ ಶೃಂಗೇರಿ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಅವರಿಂದ ದಿಲ್ಲಿ ಸಂಸ್ಕೃತ ಭವನದಲ್ಲಿ ಸುಧನ್ವ ಮೋಕ್ಷ ಪ್ರದರ್ಶನವನ್ನು ನಡೆಸಿದ್ದರು. 

ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಅವರ ಮೊದಲ ತಿರುಗಾಟ ಸಾಲಿಗ್ರಾಮ ಮೇಳದಲ್ಲಿ. (1998-99) 1999-2000ನೇ ಸಾಲಿನಲ್ಲಿ ಸಾಲಿಗ್ರಾಮ ಮೇಳದಲ್ಲಿ ಸುಮಾರು ಐವತ್ತು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. (ಬದಲಿ ಭಾಗವತನಾಗಿ) ಆಗ ಕೊಳಗಿ ಶ್ರೀ ಕೇಶವ ಹೆಗಡೆ ಮತ್ತು ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರು ಸಾಲಿಗ್ರಾಮ ಮೇಳದ ಭಾಗವತರಾಗಿದ್ದರು. ಬಳಿಕ, ಮಂದರ್ತಿ, ಸೌಕೂರು, ಕಮಲಶಿಲೆ, ಹಿರಿಯಡಕ, ಹಾಲಾಡಿ ಮೊದಲಾದ ಮೇಳಗಳಲ್ಲಿ ಆಹ್ವಾನಿತ ಭಾಗವತನಾಗಿ ವ್ಯವಸಾಯ. ಬಡಗಿನ ಬಹುತೇಕ ಹೆಚ್ಚಿನ ಎಲ್ಲಾ ಮೇಳಗಳಲ್ಲಿ ಭಾಗವತನಾಗಿ ಇವರು ಕಾಣಿಸಿಕೊಂಡಿದ್ದಾರೆ.

2015-16ನೇ ಸಾಲಿನಲ್ಲಿ ನೀಲಾವರ ಮೇಳದಲ್ಲಿ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರ ಜತೆ ವ್ಯವಸಾಯ ಮಾಡಿದ್ದರು. 2017-18 ಮತ್ತು 2018-19 ನೇ ಸಾಲಿನಲ್ಲಿ ಜಲವಳ್ಳಿ ಶ್ರೀ ವಿದ್ಯಾಧರ ರಾವ್ ಅವರ ಜಲವಳ್ಳಿ ಮೇಳದಲ್ಲಿ ವ್ಯವಸಾಯ. ಕಳೆದ ನಾಲ್ಕು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. (2019ರಿಂದ ತೊಡಗಿ) ಶ್ರೀ ಪ್ರಸನ್ನ ಭಟ್ಟರು ತಮ್ಮ ಬಾವ ನೆಂಟನಾದ ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಸಂಚಾಲಕತ್ವದ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ (ರಿ) ಕುಂಭಾಶಿ ಈ ತಂಡದ ಪ್ರದರ್ಶನಗಳಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಈ ತಂಡದ ಮುಖ್ಯ ಭಾಗವತನಾಗಿದ್ದ ವಿದ್ವಾನ್ ಶ್ರೀ ಗಣಪತಿ ಭಟ್ಟರ ಜತೆ ಸಹ ಭಾಗವತನಾಗಿ ಕಾಣಿಸಿಕೊಂಡಿದ್ದರು. ಅವರ ಒಡನಾಟವು ಕಲಿಕೆಗೆ ಅವಕಾಶವಾಗಿತ್ತು. ಶ್ರೀ ಪ್ರಸನ್ನ ಭಟ್ಟರು ವಿದ್ವಾನ್ ಶ್ರೀ ಗಣಪತಿ ಭಟ್ಟರ ಹಾಡುಗಾರಿಕೆಯಿಂದ ಪ್ರಭಾವಿತರಾಗಿದ್ದರು.

ವೃತ್ತಿ ಜೀವನದುದ್ದಕ್ಕೂ ಚಿಟ್ಟಾಣಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ವಿದ್ಯಾಧರ ಜಲವಳ್ಳಿ, ತೋಟಿಮನೆ ಗಣಪತಿ ಹೆಗಡೆ, ಕಣ್ಣಿಮನೆ ಗಣಪತಿ ಭಟ್, ಮೂರೂರು ರಮೇಶ ಭಂಡಾರಿ, ಥಂಡಿಮನೆ ಶ್ರೀಪಾದ ಭಟ್, ನೀಲ್ಕೋಡು ಶಂಕರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ ಮೊದಲಾದ ಹಿರಿಯ ಕಲಾವಿದರ ಒಡನಾಟವು ದೊರೆತಿತ್ತು. 

ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಅವರು ಶತಾವಧಾನಿ ಡಾ. ಆರ್. ಗಣೇಶ್ ಅವರ ಪರಿಕಲ್ಪನೆಯ, ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಮಂಟಪ ಶ್ರೀ ಪ್ರಭಾಕರ ಉಪಾಧ್ಯರ ಯುಗಳ ಯಕ್ಷಗಾನ ”ವಿಜಯ ವಿಲಾಸ” ಎಂಬ ಪ್ರದರ್ಶನದಲ್ಲಿ ವಿದ್ವಾನ್ ಶ್ರೀ ಗಣಪತಿ ಭಟ್ಟರ ಜತೆ ಭಾಗವತನಾಗಿ ಭಾಗವಹಿಸಿದ್ದರು. ಅವರಿಗೆ ಇದು ಒಂದು ವಿಶೇಷ ಅನುಭವವಾಗಿತ್ತು.  ಶ್ರೀ ಪ್ರಸನ್ನ ಭಟ್ ಅವರು 2012ರಲ್ಲಿ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದ  ಸಿಂಗಾಪೂರ್ ನಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು.

ಮುಂಬೈ, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ತಮ್ಮ ಹಾಡುಗಾರಿಕೆಯಿಂದ ಯಕ್ಷಗಾನ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. ಪ್ರಸ್ತುತ ಇವರು ಕಿರಿಮಂಜೇಶ್ವರದಲ್ಲಿ ಸ್ವಂತ ಸ್ಥಳ ಮತ್ತು ಮನೆಯನ್ನು ಹೊಂದಿ ತಾಯಿ ಮತ್ತು ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಬಡಗು ತಿಟ್ಟಿನ ಯುವ ಭಾಗವತ  ಶ್ರೀ ಪ್ರಸನ್ನ ಭಟ್ ಬಾಳ್ಕಲ್  ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಭಾಗವತರಾಗಿ ವ್ಯವಸಾಯವನ್ನು ಮಾಡುವಲ್ಲಿ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಪ್ರಸನ್ನ ಭಟ್ ಬಾಳ್ಕಲ್. ಮೊಬೈಲ್: 8762783763

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments