ಬೆಂಗಳೂರಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು.
ಕೊಲ್ಲೂರು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ದೇವಿ ಪಾತ್ರಧಾರಿಯ ಸಂಭಾಷಣೆ ರಂಗಸ್ಥಳದಲ್ಲಿ ನಡೆಯುತ್ತಿತ್ತು. ಆಗ ಯಕ್ಷಾಭಿಮಾನಿಯೂ ಆಗಿದ್ದ ಆಸ್ತಿಕ ಮಹಾಶಯರೊಬ್ಬರು ರಂಗಸ್ಥಳಕ್ಕೆ ದಿಢೀರ್ ಆಗಮಿಸಿದ್ದಾರೆ. ಅವರು ದೇವಿ ಪಾತ್ರಧಾರಿಯ ವೇಷಭೂಷಣದ ಕೈಯ ಭಾಗಕ್ಕೆ ಏನನ್ನೋ ಸಿಕ್ಕಿಸುತ್ತಿರುವಂತೆ ಪ್ರೇಕ್ಷಕರಿಗೆ ಕಂಡಿತು.
ಅವರು ತೆರಳಿದ ನಂತರ ಅದು ರೂಪಾಯಿ ನೋಟು (ಹಣ)ಎಂದು ಗೊತ್ತಾಯಿತು. ಇದು ಬೆಂಗಳೂರು ಪ್ರೇಕ್ಷಕರ ಕಲಾಭಿಮಾನಕ್ಕೆ ಸಾಕ್ಷಿ ಎಂದು ಪ್ರೇಕ್ಷಕರು ಆಡಿಕೊಳ್ಳುತ್ತಿದ್ದರಂತೆ.
ಈ ಬಗ್ಗೆ ಎರಡಭಿಪ್ರಾಯಗಳಿರಬಹುದು. ನಮ್ಮೂರಿನ ಆಟದಲ್ಲಿ ಶ್ರೀ ದೇವಿ ಮಹಾತ್ಮೆ ಪ್ರಸಂಗದ ಆಟದಲ್ಲಿ ದೇವಿ ಪಾತ್ರಧಾರಿಗೆ ನೋಟಿನ ಮಾಲೆಯನ್ನೇ ಹಾಕುತ್ತಿದ್ದರು. ಅದನ್ನು ಆಗ ಎಲ್ಲರೂ ಅನುಮೋದಿಸುತ್ತಿದ್ದರು. ಆದ್ದರಿಂದ ಇದನ್ನು ಕಲೆಯ ಮೇಲಿನ ಪ್ರೀತಿ ಎಂದು ತಿಳಿದುಕೊಳ್ಳಬೇಕೇ ವಿನಃ ಅನಗತ್ಯ ವಿಚಾರ ವಿಮರ್ಶೆಗಳಿಗೆ ಹೋಗಬಾರದು.
