Saturday, January 18, 2025
Homeಸುದ್ದಿಸ್ವಾವಲಂಬಿ ಭಾರತ ಒಂದು ಪರಿಕಲ್ಪನೆ - ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ...

ಸ್ವಾವಲಂಬಿ ಭಾರತ ಒಂದು ಪರಿಕಲ್ಪನೆ – ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ವಿಚಾರ ಸಂಕಿರಣ

ಪುತ್ತೂರು: ದೇಶದಲ್ಲಿರುವ ಅಗಾಧವಾದ ಮೂಲವಸ್ತುಗಳನ್ನು ಬಳಸಿ ನಮಗೆ ಬೇಕಾದಂತಹ ವಸ್ತುಗಳನ್ನು ಇಲ್ಲಿಯೇ ತಯಾರಿಸಿ ಬಳಸುವುದರಿಂದ ಇತರ ದೇಶಗಳನ್ನು ಅವಲಂಬಿಸುವುದು ತಪ್ಪುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ.ಕೆ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾಣಿಜ್ಯೋದ್ಯಮ ಅಭಿವೃದ್ಧಿ ಕೋಶ ಹಾಗೂ ಸ್ವದೇಶಿ ಜಾಗರಣಾ ಮಂಚ್ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆದ ಸ್ವಾವಲಂಬಿ ಭಾರತ ಒಂದು ಪರಿಕಲ್ಪನೆ ಎನ್ನುವ ವಿಷಯದ ಬಗೆಗಿನ ವಿಚಾರ ಸಂಕಿರಣದಲ್ಲಿ ಮಾತಾಡಿದರು.

ಸ್ಥಳೀಯವಾಗಿ ದೊರಕುವ ದೇಶೀಯ ಸಂಪತ್ತನ್ನು ವಿನಿಯೋಗಿಸಿಕೊಂಡು ಅದನ್ನು ಉತ್ಪನ್ನವಾಗಿ ಅಭಿವೃದ್ಧಿಪಡಿಸುವುದರ ಜತೆಯಲ್ಲಿ ಅದಕ್ಕೆ ವ್ಯಾಪಕವಾದ ಮಾರುಕಟ್ಟೆಯನ್ನು ಒದಗಿಸಿಕೊಡುವಲ್ಲಿ ತಂತ್ರಜ್ಞರೆಲ್ಲರೂ ಶ್ರಮಿಸಬೇಕೆಂದು ನುಡಿದರು. ಭಾರತವು ಹತ್ತು ಹಲವು ವಿಚಾರಗಳಲ್ಲಿ ಮೊದಲಿಗನಾಗಿದೆ, ಈ ನಿಟ್ಟಿನಲ್ಲಿ ಭಾರತೀಯತೆಯೊಂದಿಗೆ ಹೊಸತನವನ್ನು ತರುವುದಕ್ಕಾಗಿ ಯುವಜನತೆ ಸನ್ನದ್ಧರಾಗಬೇಕು ಮತ್ತು ಅದಕ್ಕೆ ಬೇಕಾದ ತಾಂತ್ರಿಕ ನೈಪುಣ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಇದರಿಂದಾಗಿ ಭಾರತವು ಸ್ವಾವಲಂಬನೆಯನ್ನು ಸಾಧಿಸುವುದರ ಜತೆಯಲ್ಲಿ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ಮಾತನಾಡಿ ಶಿಕ್ಷಣ ಪಡೆದು ಉದ್ಯೋಗ ಅರಸುವುದು ನಮ್ಮ ಕಾಯಕವಾಗಬಾರದು. ಬದಲಿಗೆ ದೊರೆಯುವ ವಿವಿಧ ಸವಲತ್ತುಗಳನ್ನು ಬಳಸಿಕೊಂಡು ಉದ್ದಿಮೆಯನ್ನು ಸ್ಥಾಪಿಸಬೇಕು ತನ್ಮೂಲಕ ಇತರರಿಗೆ ಉದ್ಯೋಗ ದಾತರಾಗಬೇಕೆಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ .ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.


ಕಾರ್ಯಕ್ರಮ ಸಂಯೋಜಕ ಕಾಲೇಜಿನ ವಾಣಿಜ್ಯೋದ್ಯಮ ಅಭಿವೃದ್ಧಿ ಕೋಶದ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿ ವಂದಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments