Saturday, January 18, 2025
Homeಯಕ್ಷಗಾನಸಹೃದಯೀ ಯುವ ಕಲಾವಿದ - ಮೋಹನ ಬೆಳ್ಳಿಪ್ಪಾಡಿ 

ಸಹೃದಯೀ ಯುವ ಕಲಾವಿದ – ಮೋಹನ ಬೆಳ್ಳಿಪ್ಪಾಡಿ 

ಎಲ್ಲಾ ತರದ ಪಾತ್ರಗಳನ್ನು ಯಕ್ಷಗಾನದಲ್ಲಿ ನಿರ್ವಹಿಸಬಲ್ಲವರು ಮೇಳಕ್ಕೆ, ತಂಡಕ್ಕೆ ಆಸ್ತಿಯಾಗಬಲ್ಲರು. ವೇಷ ಹಂಚಿಕೆಯಲ್ಲಿ ಭಾಗವತರ ಹೊಣೆಯನ್ನು ಇವರು ಹಗುರಗೊಳಿಸುತ್ತಾರೆ. ಪ್ರಸಂಗವನ್ನು ಮುನ್ನಡೆಸುವುದಕ್ಕೆ ಇವರು ಆಪದ್ಬಾಂಧವರಾಗಿ ಒದಗುತ್ತಾರೆ. ಕೆಲವೊಂದು ಬಾರಿ ಕಲಾವಿದನಿಗೆ ಇದರಿಂದ ತೊಡಕೂ ಉಂಟಾಗಬಹುದು. ತಂಡದಲ್ಲಿ ಸರಿಯಾದ ಸ್ಥಾನವು ನಿರ್ಣಯವಾಗದೆ ತೊಳಲಾಡುವ ಸಂಭವವೂ ಉಂಟಾದೀತು. ಆದರೂ ಇಂತಹಾ ಕಲಾವಿದರು ತಂಡಕ್ಕೆ ಅನಿವಾರ್ಯ. ಕಲಾಭಿಮಾನಿಗಳು ಇವರನ್ನು ಗುರುತಿಸಿಯೇ ಗುರುತಿಸುತ್ತಾರೆ.

ಇಂತಹಾ ಅನೇಕ ಆಲ್ ರೌಂಡರ್ ಕಲಾವಿದರು ಯಕ್ಷಗಾನ ಕ್ಷೇತ್ರದಲ್ಲಿ ಹೊಳೆದು ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿ ತಂಡಕ್ಕೆ ಬೇಕೇ ಬೇಕು ಎಂದು ಹೇಳಿಕೊಳ್ಳುವ ಅನೇಕ ಕಲಾವಿದರನ್ನು ನಾವು ಗುರುತಿಸಬಹುದು. ಶ್ರೀ ಮೋಹನ ಬೆಳ್ಳಿಪ್ಪಾಡಿ ಅಂತಹ ಸಾಮರ್ಥ್ಯವನ್ನು ಹೊಂದಿದ ಕಲಾವಿದರು.

ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ. ನೇಪಥ್ಯದಲ್ಲಿ ಇವರಿಗೆ ಮಾತು ಕಡಿಮೆ. ರಂಗದಲ್ಲಿ ಪಾತ್ರೋಚಿತವಾದ ಮಾತು ಮತ್ತು ಕುಣಿತಗಳಿಂದ ಪ್ರದರ್ಶನದ ರಂಜನೆಗೆ ಕಾರಣರಾಗುತ್ತಾರೆ. ನೇಪಥ್ಯದಲ್ಲಿ  ಇವರ ಮೌನವೂ ಮಾತೇ ಆಗುತ್ತದೆ. ಅದರಲ್ಲೊಂದು ಸಂದೇಶವೂ ಇದೆ. ನೇಪಥ್ಯದಲ್ಲಿ ಕಲಾವಿದರು ಹೇಗಿರಬೇಕು ಎಂಬುದಕ್ಕೆ ಮೋಹನ ಬೆಳ್ಳಿಪ್ಪಾಡಿಯವರನ್ನು ನೋಡಿದರೆ ಸಾಕು. ಕಿರಿಯ ಅಭ್ಯಾಸಿಗಳಿಗೆ (ಎಲ್ಲಾ ಕಲಾವಿದರು) ತಾವು ಹೇಗಿರಬೇಕೆಂಬುದನ್ನು ತಮ್ಮ ಮೌನ ಎಂಬ ಮಾತಿನಿಂದಲೇ ಇವರು ಸೂಚಿಸುತ್ತಾರೆ. ಹಾಗೆಂದು ಇವರು ಮಾತನಾಡದೆ ಮೂಕರಾಗಿ ಇರುತ್ತಾರೆಂದು ಅರ್ಥವಲ್ಲ. ಇವರು ವಿನೋದ ಪ್ರಿಯರೂ ಹೌದು.

ಶಿಸ್ತಿನ ಅತ್ಯುತ್ತಮ ಕಲಾವಿದರಿವರು. ತಮಗೆ ನೀಡಿದ ಪಾತ್ರವನ್ನು ನಿರ್ವಹಿಸಲು ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. ಪಾತ್ರೋಚಿತವಾಗಿ ಹಿತಮಿತವಾದ ಕುಣಿತ, ಮಾತುಗಳಿಂದ ಪ್ರಸಂಗದ ರಂಜನೆಗೆ ಕಾರಣರಾಗುತ್ತಾರೆ. ಯಾವುದೇ ಸಮಸ್ಯೆಗೆ ಸಿಲುಕದೆ, ತಂಡದ ಭಾರವನ್ನು ಹಗುರಗೊಳಿಸುವ ಕಲಾವಿದರಲ್ಲಿ ಇವರೂ ಒಬ್ಬರು. 

ಶ್ರೀ ಮೋಹನ ಅವರ ಹುಟ್ಟೂರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯ ನಡುಬೈಲು ಎಂಬಲ್ಲಿ. 1982ನೇ ಇಸವಿ ಫೆಬ್ರವರಿ 10ರಂದು ಶ್ರೀ ಕೃಷ್ಣಪ್ಪ ಪೂಜಾರಿ ಮತ್ತು ಶ್ರೀಮತಿ ಚೆನ್ನಮ್ಮ ದಂಪತಿಗಳ ಪುತ್ರನಾಗಿ ಜನನ. ಮನೆಯವರೆಲ್ಲರೂ ಕಲಾಸಕ್ತರು ಮತ್ತು ಕೃಷಿಕರು. ಮೋಹನ ಬೆಳ್ಳಿಪ್ಪಾಡಿ ಅವರ ಅಣ್ಣಂದಿರಾದ ಶ್ರೀ ಬಾಲಕೃಷ್ಣ ಬೆಳ್ಳಿಪ್ಪಾಡಿ ಮತ್ತು ಶ್ರೀ ವೀರಪ್ಪ ಬೆಳ್ಳಿಪ್ಪಾಡಿ ಅವರು ಹವ್ಯಾಸೀ ವೇಷಧಾರಿಗಳು.

ಶ್ರೀ ಮೋಹನ ಅವರು ಓದಿದ್ದು ಪಿಯುಸಿ ವರೆಗೆ. 7ನೇ ತರಗತಿ ವರೆಗೆ ಪಂಜಿಕಲ್ಲು ಶಾಲೆಯಲ್ಲಿ. ಹತ್ತನೇ ತರಗತಿ ವರೆಗೆ ಜಾಲ್ಸೂರಿನ ಪಯಸ್ವಿನಿ ಹೈಸ್ಕೂಲಿನಲ್ಲಿ. ಪಿಯುಸಿ ಶಿಕ್ಷಣ ಸುಳ್ಯ ಸರಕಾರೀ ಕಾಲೇಜಿನಲ್ಲಿ. ಇವರಿಗೆ ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ಅಣ್ಣಂದಿರು ಕುಣಿಯುವಾಗ ನೋಡಿಯೇ ಹೆಜ್ಜೆಗಾರಿಕೆಯನ್ನು ಗ್ರಹಿಸುತ್ತಿದ್ದರು. ಬಳಿಕ ಬೆಳ್ಳಿಪ್ಪಾಡಿ ಬರೆಮನೆ ವೆಂಕಪ್ಪ ಗೌಡರಿಂದ ನಾಟ್ಯ ಕಲಿತರು. ಶ್ರೀ ವೆಂಕಪ್ಪ ಗೌಡರು ಮೋಹನ ಅವರ ಅಣ್ಣಂದಿರಿಗೂ ನಾಟ್ಯ ಹೇಳಿಕೊಟ್ಟ ಗುರುಗಳು. ಇವರು ಹವ್ಯಾಸೀ ಉತ್ತಮ ಕಲಾವಿದರು.

ಮೋಹನ ಅವರು ಪ್ರಥಮ ಬಾರಿಗೆ ರಂಗಪ್ರವೇಶ ಮಾಡಿದ್ದು 4ನೇ ತರಗತಿಯಲ್ಲಿ ಓದುತ್ತಿರುವಾಗ. ಶಾಲಾ ವಾರ್ಷಿಕೋತ್ಸವದ ಪ್ರದರ್ಶನ, ಭೀಮಶಂಕರ ಮಹಿಮೆ ಪ್ರಸಂಗದಲ್ಲಿ ದೇವತೆಯಾಗಿ (ದೇವೇಂದ್ರನ ಬಲ) ರಂಗಪ್ರವೇಶ. ಬಳಿಕ ಸತತ ಅಭ್ಯಾಸ ಮಾಡುತ್ತಾ ವೇಷಗಳನ್ನು ಮಾಡುತ್ತಿದ್ದರು. ಮದ್ದಳೆಗಾರ ಶ್ರೀ ಅಡೂರು ಮೋಹನ ಸರಳಾಯರ ಮೂಲಕ ಶ್ರೀ ಚಂದ್ರಶೇಖರ ದಾಮ್ಲೆ ಅವರ ಪರಿಚಯವೂ ಆಗಿತ್ತು. ಶ್ರೀಯುತರ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಸುಳ್ಯ ಈ ತಂಡದ ಚಿಣ್ಣರಿಗೆ ಸಬ್ಬಣಕೋಡಿ ಶ್ರೀ ರಾಮ ಭಟ್ಟರು ನಾಟ್ಯ ತರಬೇತಿ ನಡೆಸುತ್ತಿದ್ದರು. ಶ್ರೀ ಮೋಹನ ಅವರೂ ಅಲ್ಲಿ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು.

ಬಳಿಕ ಅಲ್ಲಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ವೇಷ ಮಾಡುತ್ತಿದ್ದರು. 8ನೇ ಕ್ಲಾಸಿನಿಂದಲೇ ಯಕ್ಷಗಾನಾಸಕ್ತಿಯು ತೀವ್ರವಾಗಿ ಮೇಳದ ಕಲಾವಿದನಾಗಬೇಕೆಂಬ ಆಸೆಯು ಹೆಚ್ಚತೊಡಗಿತ್ತು. ಇದಕ್ಕೆ ಅವಕಾಶವೂ ಒದಗಿತ್ತು. ತೆಂಕುತಿಟ್ಟಿನ ಖ್ಯಾತ ಕಲಾವಿದ ಕೇದಗಡಿ ಶ್ರೀ ಗುಡ್ಡಪ್ಪ ಗೌಡರ ಮನೆ ಶ್ರೀ ಮೋಹನ ಅವರ ಮನೆಯ ಹತ್ತಿರವೇ ಆಗಿತ್ತು. ಅವರೊಡನೆ ಮಾತನಾಡಿ ಅವರ ಹೇಳಿಕೆಯಂತೆ ಮೋಹನ ಬೆಳ್ಳಿಪ್ಪಾಡಿ ಅವರು ಕಟೀಲು ಮೇಳಕ್ಕೆ  ಸೇರಿದ್ದರು. 

ಶ್ರೀ ಮೋಹನ ಬೆಳ್ಳಿಪ್ಪಾಡಿ ಅವರು ತಿರುಗಾಟ ಆರಂಭಿಸಿದ್ದು 2000ನೇ ಇಸವಿ ನವೆಂಬರ್ ತಿಂಗಳಲ್ಲಿ. ಕಟೀಲು 2ನೇ ಮೇಳದಲ್ಲಿ. ಬಲಿಪ ನಾರಾಯಣ ಭಾಗವತ, ಪೆರುವಾಯಿ ನಾರಾಯಣ ಭಟ್, ಪ್ರಸಾದ್ ಬಲಿಪ, ಪೆರುವಾಯಿ ನಾರಾಯಣ ಶೆಟ್ಟಿ, ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಸುಬ್ರಾಯ, ಅಜೆಕಾರು ರಾಜೀವ ಶೆಟ್ಟಿ, ಪಂಜಾಜೆ ಶ್ರೀಧರ, ಬಾಯಾರು ರಮೇಶ್ ಭಟ್, ಮಹೇಶ ಮಣಿಯಾಣಿ ಅವರ ಸಹಕಾರವೂ ಸಿಕ್ಕಿತ್ತು.

ಮೊದಲ 2 ವರ್ಷ ಪೀಠಿಕಾ ಸ್ತ್ರೀ ವೇಷ ಮತ್ತು ಪ್ರಸಂಗದಲ್ಲಿ ತಮ್ಮ ಪಾಲಿಗೆ ಬಂದ ಸಣ್ಣ ಪಾತ್ರಗಳನ್ನು ಮಾಡಿ ಬೆಳೆಯುತ್ತಾ ಸಾಗಿದರು. 5 ತಿರುಗಾಟ ನಡೆಸಿ 2ನೇ ಪುಂಡುವೇಷಗಳನ್ನು ಮಾಡುವಷ್ಟು ಬೆಳೆದಿದ್ದರು. 2ನೇ ಮೇಳದಲ್ಲಿ  ಹನ್ನೆರಡು ವರ್ಷಗಳ ವ್ಯವಸಾಯ ಮಾಡಿದ್ದರು. ಬಳಿಕ 5ನೇ ಮೇಳಕ್ಕೆ. ಅಲ್ಲಿ ಪಟ್ಲ ಸತೀಶ ಶೆಟ್ರ ಭಾಗವತಿಕೆ. ಅವರ ಪ್ರೋತ್ಸಾಹವೂ ದೊರೆತಿತ್ತು. ಅಮ್ಮುಂಜೆ ಮೋಹನ ಅವರೊಂದಿಗೆ ಹಲವು ಜತೆವೇಷಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕಿರೀಟ ವೇಷಗಳನ್ನೂ ಮಾಡುವಂತಾಗಿತ್ತು. 5ನೇ ಮೇಳದಲ್ಲಿ ಒಟ್ಟು 9 ವರ್ಷ. ಇದರಲ್ಲಿ 2 ವರ್ಷ ಪದ್ಯಾಣ ಗೋವಿಂದ ಭಟ್ ಭಾಗವತಿಕೆಯಡಿಯಲ್ಲಿ.

ಸುಣ್ಣಂಬಳ ವಿಶ್ವೇಶ್ವರ ಭಟ್ಟರೊಂದಿಗೆ ಕಲಾ ಸೇವೆ ಮಾಡುವ ಅವಕಾಶವೂ ಈ ಸಂದರ್ಭದಲ್ಲಿ ಒದಗಿತ್ತು. ಕಳೆದ 2 ವರ್ಷದಿಂದ ಶ್ರೀ ಮೋಹನ ಬೆಳ್ಳಿಪ್ಪಾಡಿ ಅವರು ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇಲ್ಲಿ ಒಡನಾಡೀ ಕಲಾವಿದರೆಲ್ಲರ ಸಹಕಾರ ಇವರಿಗೆ ಸಿಕ್ಕಿದೆ. ಪುಂಡುವೇಷ ಮತ್ತು ಕಿರೀಟ ವೇಷಕ್ಕೆ ಸಂಬಂಧಿಸಿದ ಹೆಚ್ಚಿನ ಪಾತ್ರಗಳನ್ನೂ ಇವರು ನಿರ್ವಹಿಸಿದ್ದಾರೆ. ಕೆಲವಾರು ಕಡೆ ಸನ್ಮಾನ, ಗೌರವಗಳನ್ನೂ ಸ್ವೀಕರಿಸಿರುತ್ತಾರೆ. 

ಮಳೆಗಾಲದಲ್ಲೂ ಮೋಹನ ಬೆಳ್ಳಿಪ್ಪಾಡಿಯವರು ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಶ್ರೀಮತಿ ವಿದ್ಯಾ ಕೋಳ್ಯೂರು ಅವರ ಯಕ್ಷ ಮಂಜೂಷ ತಂಡದ ಸದಸ್ಯನಾಗಿ ಉತ್ತರ ಭಾರತದ ಹಲವೆಡೆ ಮತ್ತು ಅಮೆರಿಕಾ ಹಾಗೂ ಲಂಡನ್ ನಗರದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಪುತ್ತೂರು ಶ್ರೀಧರ ಭಂಡಾರಿ ಅವರ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ 3 ವರ್ಷ ಭಾಗವಹಿಸಿದ್ದಾರೆ. ಪ್ರಸ್ತುತ ಈ ತಂಡವನ್ನು ಮುನ್ನಡೆಸುತ್ತಿರುವ ಚಂದ್ರಶೇಖರ ಧರ್ಮಸ್ಥಳ ಅವರೊಂದಿಗೆ ಈ ವರ್ಷದ ಮಳೆಗಾಲದ ಪ್ರದರ್ಶನಗಳಲ್ಲಿ ವೇಷ ಮಾಡುತ್ತಿದ್ದಾರೆ. ಶ್ರೀ ದೇವಾನಂದ ಭಟ್ ಬೆಳುವಾಯಿ ಅವರ ಯಕ್ಷದೇವ ಬೆಳುವಾಯಿ ತಂಡದ ಸದಸ್ಯನಾಗಿ ಅಮೆರಿಕಾ ಯಾತ್ರೆ ಕೈಗೊಂಡಿದ್ದಾರೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟರ ಜತೆ ಎರಡು ಬಾರಿ ಅಮೆರಿಕಾ ಯಾತ್ರೆ ಕೈಗೊಂಡಿದ್ದಾರೆ.

ಶ್ರೀ ಮೋಹನ ಬೆಳ್ಳಿಪ್ಪಾಡಿ ಅವರ ಪತ್ನಿ ಶ್ರೀಮತಿ ಜಯಲಕ್ಷ್ಮಿ. ಇವರು ಗೃಹಣಿ. ಮೋಹನ ಬೆಳ್ಳಿಪ್ಪಾಡಿ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಶ್ರೀ ದೇವರು ಅವರ ಮನೋಕಾಮನೆಗಳನ್ನು ಅನುಗ್ರಹಿಸಲಿ ಎಂದು ಕಲಾಭಿಮಾನಿಗಳಾದ ನಾವೆಲ್ಲರೂ ಹಾರೈಸೋಣ. 

ಮೋಹನ ಬೆಳ್ಳಿಪ್ಪಾಡಿ, ಮೊಬೈಲ್: 9482453897

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments