Saturday, January 18, 2025
Homeಯಕ್ಷಗಾನಶ್ರವಣ ಮನೋಹರವಾಗಿ ಮೂಡಿ ಬಂದ ಸಂಕಷ್ಟಿ ವ್ರತ ಮಹಾತ್ಮೆ ತಾಳಮದ್ದಲೆ

ಶ್ರವಣ ಮನೋಹರವಾಗಿ ಮೂಡಿ ಬಂದ ಸಂಕಷ್ಟಿ ವ್ರತ ಮಹಾತ್ಮೆ ತಾಳಮದ್ದಲೆ

ದಿ: 20/08/22 ವಿವೇಕಾನಂದ ನಗರದ ವರಸಿದ್ದಿವಿನಾಯಕನ ಸನ್ನಿಧಿಯಲ್ಲಿ ನಡೆದ ತಾಳಮದ್ದಲೆ ‘ಸಂಕಷ್ಟಿ ಮಹಾತ್ಮೆ’ ಪ್ರೇಕ್ಷಕರಿಗೆ ಮುದನೀಡುತ್ತಾ ವೈಜಾರಿಕತೆಯನ್ನು ಬಡಿದೆಬ್ಬಿಸುತ್ತಾ, ಭಕ್ತಿಪಾರಮ್ಯತೆಗೆ ಒತ್ತು ನೀಡಿ ಮನೋಹರವಾಗಿ ಮೂಡಿಬಂತು. ಯಕ್ಷಗಾನ ವಿದ್ವಾಂಸ ಪ್ರೊ| ಡಾ| ಜಿ.ಎ. ಹೆಗಡೆ ಸೋಂದಾ ವಿರಚಿತ ಈ ಕೃತಿ, ತಾಳಮದ್ದಲೆಯ ವಿಚಾರದ ಓಘದಲ್ಲಿ  ಹತ್ತು ಹಲವು ಸಂಗತಿಗಳನ್ನು ಅನಾವರಣಗೊಳಿಸಿ ಆರಾಧನೆ ಆಚರಣೆ, ಸಂಪ್ರದಾಯ ಪದ್ದತಿ, ಮೌಲ್ಯ ಸಂಘರ್ಷ, ತಾತ್ವಿಕತೆ ಇತ್ಯಾದಿ ಸ್ಥಾಪಿತ ಮೌಲ್ಯಗಳನ್ನು ಚರ್ಚೆಗೆ ಒಳಪಡಿಸಿ ಭಕ್ತಿ ಪಾರಮ್ಯತೆಯನ್ನು ವೈಚಾರಿಕ ಉತ್ತುಂಗದಲ್ಲಿ ಸಾರಿತು.


ಹಿಮ್ಮೇಳ ವೈಭವದಲ್ಲಿ ಹೊನ್ನಾವರದ ಗೋಪಾಲಕೃಷ್ಣ ಭಾಗವತ ಕಡತೋಕಾ, ಪಿ.ಕೆ. ಹೆಗಡೆ ಹರಿಕೇರಿ, ಕುಮಾರ ಮಯೂರ ಹೆಗಡೆ ಹರಿಕೇರಿ ಕಾಣಿಸಿಕೊಂಡು ಸುಶ್ರಾವ್ಯ ವಾತಾವರಣ ಸೃಷ್ಟಿಸಿ ಆಖ್ಯಾನದ ಯಶಸ್ಸಿಗೆ ಮುನ್ನಡಿ ಬರೆದರು.


ರಾಜಾ ಸುಜಯನಾಗಿ ಡಾ| ಜಿ.ಎ. ಹೆಗಡೆ ಸೋಂದಾ ಯೋಗ, ದೈವೇಶ್ಚೆ, ಗಣಪತಿಯ ಆರಾಧನೆಯ ಮಹತ್ವವನ್ನು ಅದರ ತಾತ್ವಿಕ ನೆಲೆಯಲ್ಲಿ ವ್ಯಾಖ್ಯಾನಿಸಿದರು.  ಯಾಜ್ಞವಲ್ಕ್ಯನಾಗಿ ಡಾ|ಎಸ. ಡಿ.ಹೆಗಡೆ ಹೊನ್ನಾವರ ಸಂವಾದಕ್ಕೆ ಮೆರಗು ತಂದರು.                                                  
ಪ್ರೊ|ಕೃಷ್ಣ ಹೆಗಡೆ ಮುರ್ಡೆಶ್ವರ ಭಾಮಿನಿಯಾಗಿ, ಭಕ್ತಿ ಪ್ರಾಧಾನ್ಯತೆಯನ್ನು ಎತ್ತಿ ಹಿಡಿದು ಆಚರಣೆ, ಆರಾಧನೆಯ ಮಹತ್ವ ಸಾರಿದರು. ಡಾ| ಎಸ್.ಡಿ. ಹೆಗಡೆ ಭಾರ್ಗವಿಯ ಪಾತ್ರದಲ್ಲಿ ರಂಜಿಸಿದರು.


ಬಾಲಚಂದ್ರ ಭಟ್ಟ ಕರಸೊಳ್ಳಿ ಮಂತ್ರಿ ಮೇಧಾವಿಯಾಗಿ ಉತ್ತಮ ಸಂವಾದ ನಡೆಸಿದರು. ಡಾ. ಜಿ.ಎ. ಹೆಗಡೆ ಸೋಂದಾ ಅವರು ಮೌಲ್ಯ ಸಂಘರ್ಷ, ರಾಜನೈತಿಕತೆ, ಅಧಿಕಾರ ಪಾಲನೆ, ಕೃತಘ್ನತೆ, ವಿಶ್ವಾಸದ್ರೋಹ, ನಂಬಿಕೆ ಮತ್ತು  ಮಿತ್ರತ್ವದ ಪರಾಕಾಷ್ಟತೆ ಕುರಿತು ಕರಸೊಳ್ಳಿಯವರಲ್ಲಿ  ಚರ್ಚಿಸಿ ಸಂವಾದ ಸಂಭ್ರಮವಾಗಿಸಿದರು. 


ಜ್ಯೋತಿ ಅಶ್ವಥ ಹೆಗಡೆ ವಿಜಯ ವಿಕ್ರಮಿಯಾಗಿ, ಎಸ್.ಎಸ್. ಭಟ್ ವನಪಾಲನಾಗಿ ಕಾರ್ಯಕ್ರಮಕ್ಕೆ ಕಳೆತಂದರು. ವೈಚಾರಿಕ ಸಂಘರ್ಷದ ನಡುವೆ, ತಾತ್ವಿಕತಳಹದಿಯಲ್ಲಿ ಭಕ್ತಿ ಪಾರಮ್ಯತೆಯನ್ನು ಮೆರೆಸಿದ ಪ್ರಸಂಗ ಇದಾಗಿ ರಸಿಕ  ಪ್ರೇಕ್ಷಕರಿಗೆ ರಸದೌತಣ ನೀಡಿತು. ಶ್ರಾವಣ ಸಂಭ್ರಮದ ಅಂಗವಾಗಿ ಶಿರಸಿಯ ಯಕ್ಷಶುಭೋದಯದಿಂದ  ಈ ಕಾರ್ಯಕ್ರಮ ವರಸಿದ್ದಿವಿನಾಯಕ ದೇವಾಲಯದ ಸಹಕಾರದಿಂದ ನಡೆಯಿತು.

ವರದಿ : ಡಾ| ಜಿ.ಎ. ಹೆಗಡೆ ಸೋಂದಾ
ಅಧ್ಯಕ್ಷರು ಯಕ್ಷಶುಭೊದಯ
ಮೊ.ನಂ. : 9448735501

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments