Sunday, November 24, 2024
Homeಯಕ್ಷಗಾನಭಾಂಡೂಪ್ ನಿತ್ಯಾನಂದ ಮಂದಿರದಲ್ಲಿ ನೂತನ ಯಕ್ಷಗಾನ ತರಬೇತಿ ಕೇಂದ್ರ ಶುಭಾರಂಭ

ಭಾಂಡೂಪ್ ನಿತ್ಯಾನಂದ ಮಂದಿರದಲ್ಲಿ ನೂತನ ಯಕ್ಷಗಾನ ತರಬೇತಿ ಕೇಂದ್ರ ಶುಭಾರಂಭ

ಮುಂಬಯಿ: ‘ಯಕ್ಷಗಾನ ಹಲವು ಆಯಾಮಗಳನ್ನು ಹೊಂದಿರುವ ಒಂದು ಮಹೋನ್ನತವಾದ ಸಮಷ್ಟಿ ಕಲೆ. ಕರಾವಳಿಯಲ್ಲಿ ಹುಟ್ಟಿ ಜಾಗತಿಕ ಮಟ್ಟಕ್ಕೆ ಬೆಳೆದು ವಿಶ್ವಾದ್ಯಂತ ರಸಿಕರಿಂದ ಮನ್ನಣೆಗೊಳಗಾದ ಶ್ರೀಮಂತ ಕಲಾಪ್ರಕಾರ. ಇದಕ್ಕೆ ಮುಂಬೈಯಲ್ಲಿ ಭದ್ರ ನೆಲೆಯನ್ನು ಕಲ್ಪಿಸಿ ಯಕ್ಷಕಲೆಯ ಪ್ರಸರಣಕ್ಕೆ ಕಾರಣವಾದ ಅಜೆಕಾರು ಕಲಾಭಿಮಾನಿ ಬಳಗದ ಕೊಡುಗೆ ಅಪಾರ’ ಎಂದು ಯಕ್ಷಗಾನ ವಿದ್ವಾಂಸ – ಸಾಹಿತಿ,ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಮುಂದಾಳತ್ವದಲ್ಲಿ ಭಾಂಡೂಪ್ ನಿತ್ಯಾನಂದ ಮಂದಿರದಲ್ಲಿ ಶುಭಾರಂಭಗೊಂಡ ನೂತನ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ‘ಮುಂಬೈಯ ವಿವಿಧೆಡೆ ಯಕ್ಷಗಾನ ತರಬೇತಿ ಕೇಂದ್ರಗಳನ್ನು ತೆರೆದು ಸಾವಿರಾರು ವಿದ್ಯಾರ್ಥಿಗಳನ್ನು ಕಲಾವಿದರನ್ನಾಗಿ ರೂಪಿಸಿದ ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟರು ಕಳೆದ 21 ವರ್ಷಗಳಿಂದ ಊರಿನ ಸುಪ್ರಸಿದ್ಧ ಕಲಾವಿದರನ್ನು ಆಹ್ವಾನಿಸಿ ಶ್ರೇಷ್ಠ ಮಟ್ಟದ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಗಳನ್ನು ಏರ್ಪಡಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ’ ಎಂದವರು ಶ್ಲಾಘಿಸಿದರು.

ಯಕ್ಷಗಾನದಿಂದ ಸಂಸ್ಕಾರ:

        ಮುಂಬಯಿಯ ಹಿರಿಯ ಕೈಗಾರಿಕೋದ್ಯಮಿ ಜಿ.ಎಸ್. ಇಂಟರ್ನ್ಯಾಷನಲ್ ಸ್ಕೂಲ್ ನ ಆಡಳಿತ ನಿರ್ದೇಶಕ ಶಂಕರ್ ಶೆಟ್ಟಿ ದೀಪ ಬೆಳಗಿಸಿ ನೂತನ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. ‘ಯಕ್ಷಗಾನ ಮಕ್ಕಳಿಗೆ ಎಳವೆಯಿಂದಲೇ ಸಂಸ್ಕೃತಿ, ಸಂಸ್ಕಾರವನ್ನು ನೀಡುವ ಕಲೆ. ಅದರಿಂದ ಬೌದ್ಧಿಕ ಸಾಮರ್ಥ್ಯದ ಜತೆಗೆ ಶರೀರಕ್ಕೆ ಸಾಕಷ್ಟು ವ್ಯಾಯಾಮವೂ ಲಭಿಸುತ್ತದೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಹೊಸ ತರಬೇತಿ ಕೇಂದ್ರ ಯಶಸ್ವಿಯಾಗಲಿ’ ಎಂದವರು ಶುಭ ಹಾರೈಸಿದರು.

       ಉದ್ಯಮಿ ಪ್ರಸಾದ್ ಶೆಟ್ಟಿ ಥಾಣೆ, ಬಿಲ್ಲವರ ಅಸೋಸಿಯೇಷನ್ ಭಾಂಡೂಪ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಜನಾರ್ದನ ಆರ್. ಪೂಜಾರಿ, ಶ್ರೀ ಶನೀಶ್ವರ ಮಂದಿರ ಬಟ್ಟಿಪಾಡ ಅಧ್ಯಕ್ಷ ದಯಾನಂದ ಶೆಟ್ಟಿ, ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಭಾಂಡೂಪ್ ಇದರ ಮೊಕ್ತೇಸರ ರಮೇಶ ಪೂಜಾರಿ, ಉದ್ಯಮಿ ತಾರಾನಾಥ ಶೆಟ್ಟಿ ಬಟ್ಟಿಪಾಡ, ಶ್ರೀ ಶನೀಶ್ವರ ಮಂದಿರದ ಕಾರ್ಯದರ್ಶಿ ಸದಾನಂದ ಅಮೀನ್ ಮುಖ್ಯ ಅತಿಥಿಗಳಾಗಿ ಶುಭ ಕೋರಿದರು. 

 ಗೌರವಾರ್ಪಣೆ :

     ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟರನ್ನು ಶಿಷ್ಯರ ಪರವಾಗಿ ಸಭೆಯಲ್ಲಿ ಸನ್ಮಾನಿಸಲಾಯಿತು. ಸಂಯೋಜನಾ ಸಹಕಾರ ನೀಡಿದ ಮೀರಾ ಶೆಟ್ಟಿ, ಅರ್ಚನಾ ಅಮೀನ್, ನಂದಾ ಶೆಟ್ಟಿ, ಹೇಮ ಪೂಜಾರಿ, ವಿಜಯ ಶೆಟ್ಟಿ, ಸುಧಾ ಪೂಜಾರಿ, ಭಾರತಿ ಕರ್ಕೇರ ಅವರನ್ನು ಗೌರವಿಸಲಾಯಿತು.

          ಭಾಗವತ ದೇವಿ ಪ್ರಸಾದ ಆಳ್ವ ಪ್ರಾರ್ಥನಾ ಗೀತೆ ಹಾಡಿದರು. ಕೇಂದ್ರದ ನಿರ್ದೇಶಕರಾದ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಘಟಕರಾದ ಸತೀಶ್ ಶೆಟ್ಟಿ ಕೊಟ್ರಪ್ಪಾಡಿ ಗುತ್ತು, ಅವಕಾಶ್ ಜೈನ್ ಮತ್ತು ಶ್ರುತಿ ಪೂಜಾರಿ ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಸುಮಾರು 40 ಮಂದಿ ಕಲಾಸಕ್ತರಿಗೆ ಯಕ್ಷಗಾನದ ಆರಂಭಿಕ ಹೆಜ್ಜೆಗಳನ್ನು ಕಲಿಸಿ ಕೇಂದ್ರಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments