ಉಡುಪಿ :ಕಟೀಲು ಯಕ್ಷಗಾನ ಮೇಳದ ಕಲಾವಿದ ಕೊಡೆತ್ತೂರು ಶಂಭುಕುಮಾರ್ (46 ವರ್ಷ) ಇಂದು (18-08-2022) ಉಲ್ಲಂಜೆಯ ಸ್ವಗೃಹದಲ್ಲಿ ನಿಧನರಾದರು.
ತಮ್ಮ ಹದಿನಾರನೆಯ ವಯಸ್ಸಿನಿಂದಲೇ ಮುಂಡ್ಕೂರು, ತಲಕಳ, ಮಂಗಳಾದೇವಿ, ಎಡನೀರು, ಪುತ್ತೂರು ಹಾಗೂ ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದು, ಕಳೆದ ಏಳು ವರುಷಗಳಿಂದ ಕಟೀಲು ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಧುಕೈಟಭ, ರಕ್ತಬೀಜ, ಅರುಣಾಸುರ, ದೇವೇಂದ್ರ, ಅರ್ಜುನ, ಭೀಮ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು, ಕಿನ್ನಿಗೋಳಿಯ ಯಕ್ಷಕೌಸ್ತುಭ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ಕಲಿಸುತ್ತಿದ್ದರು.
ಹೊಯಿಗೆಗುಡ್ಡೆ ದೇವಸ್ಥಾನದ ಹೆಸರಿನಲ್ಲಿ ಮೂರು ಚಿಕ್ಕಮೇಳಗಳನ್ನೂ ಮಾಡಿದ್ದರು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.